ಮಾಧವಿ ಪುರಿ ಬುಚ್
- ಪಿಟಿಐ ಚಿತ್ರ
ಮುಂಬೈ: ಷೇರು ಮಾರುಕಟ್ಟೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್ ಹಾಗೂ ಇತರೆ ಐವರು ಅಧಿಕಾರಿಗಳ ವಿರುದ್ಧ ಮಾರ್ಚ್ 4ರ ವರೆಗೆ ಎಫ್‌ಐಆರ್ ದಾಖಲಿಸಬಾರದು ಎಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಬಾಂಬೆ ಹೈಕೋರ್ಟ್ ಸೋಮವಾರ ಸೂಚಿಸಿದೆ.
ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಇಲ್ಲಿನ ವಿಶೇಷ ನ್ಯಾಯಾಲಯವು ಮಾರ್ಚ್ 1ರಂದು ನೀಡಿದ್ದ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಸೆಬಿ ಮಾಜಿ ಅಧ್ಯಕ್ಷೆ ಮಾಧವಿ ಪುರಿ ಬುಚ್, ಬಿಎಸ್‌ಇ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸುಂದರರಾಮನ್ ರಾಮಮೂರ್ತಿ ಹಾಗೂ ಇತರರು ಸೋಮವಾರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.
ಮನವಿ ಆಲಿಸಿದ ನ್ಯಾಯಾಧೀಶ ಎಸ್.ಜಿ. ಡಿಗೆ ನೇತೃತ್ವದ ಏಕಸದಸ್ಯ ಪೀಠ, ಮಂಗಳವಾರ ವಾದವನ್ನು ಆಲಿಸಲಾಗುವುದು. ಅಲ್ಲಿಯವರೆಗೆ ಮುಂಬೈನ ವಿಶೇಷ ನ್ಯಾಯಾಲಯವು ನೀಡಿದ ನಿರ್ದೇಶನವನ್ನು ಎಸಿಬಿ ಪಾಲಿಸುವಂತಿಲ್ಲ ಎಂದು ಹೇಳಿದೆ.
ಮಾಧವಿ ಪುರಿ ಬುಚ್ ಹಾಗೂ ಇತರೆ ಐವರು ಅಧಿಕಾರಿಗಳು ಸೆಬಿಯ ನಿಯಮಾವಳಿ ಉಲ್ಲಂಘಿಸಿ ಆರ್ಥಿಕ ವಂಚನೆ ಎಸಗಿದ್ದಾರೆ ಎಂದು ಪತ್ರಕರ್ತ ಸಪನ್ ಶ್ರೀವಾಸ್ತವ ಅವರು, ಮುಂಬೈನ ಎಸಿಬಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಶಶಿಕಾಂತ್ ಏಕನಾಥರಾವ್ ಬಂಗಾರ್ ಎಫ್‌ಐಆರ್ ದಾಖಲಿಸುವಂತೆ ಎಸಿಬಿಗೆ ನಿರ್ದೇಶನ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.