ಮಿಂತ್ರಾ
Credit: X/@myntra
ಬೆಂಗಳೂರು: ಸಿದ್ಧಉಡುಪು ಮಾರಾಟ ಕಂಪನಿ ‘ಮಿಂತ್ರಾ’ವು ₹1,654 ಕೋಟಿ ಮೊತ್ತದಷ್ಟು ವಿದೇಶಿ ನೇರ ಬಂಡವಾಳವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದೆ ಎಂದು ಜಾರಿ ನಿರ್ದೇಶನಾಲಯವು (ಇ.ಡಿ) ಪ್ರಕರಣ ದಾಖಲಿಸಿದೆ.
‘ಕಂಪನಿಯು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ನಿಯಮಗಳ ಅಡಿಯಲ್ಲಿ ‘ವೋಲ್‌ಸೇಲ್ ಕ್ಯಾಷ್ ಅಂಡ್ ಕ್ಯಾರಿ’ ಎಂದು ನೋಂದಣಿ ಮಾಡಿದೆ. ಕಂಪನಿಯು ಈವರೆಗೆ ₹1,654 ಕೋಟಿಯಷ್ಟು ಎಫ್‌ಡಿಐ ಪಡೆದಿದೆ. ಈ ಬಂಡವಾಳವನ್ನು ಬಳಸಿಕೊಂಡು ನಡೆಸಿದ ವಹಿವಾಟಿನಲ್ಲಿ ಎಫ್‌ಡಿಐ ನಿಯಮಗಳ ಉಲ್ಲಂಘನೆಯಾಗಿದೆ. ಈ ಸಂಬಂಧ ಮಿಂತ್ರಾ ಡಿಸೈನ್ಸ್ ಪ್ರೈವೆಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಇ.ಡಿ ಮಾಹಿತಿ ನೀಡಿದೆ.
‘ಎಫ್‌ಡಿಐ ನಿಯಮಗಳ ಪ್ರಕಾರ ನೇರ ಮಾರಾಟದಲ್ಲಿ ತೊಡಗಿರುವ ಕಂಪನಿ ಮಾತ್ರವೇ ಈ ರೀತಿಯ ಬಂಡವಾಳ ಪಡೆಯಬಹುದು. ಮಿಂತ್ರಾ ಡಿಸೈನ್ಸ್ ಎಫ್‌ಡಿಐ ನಿಯಮಗಳಲ್ಲಿ ‘ವೋಲ್‌ಸೇಲ್ ಕ್ಯಾಷ್ ಅಂಡ್ ಕ್ಯಾರಿ’ ಎಂದು ನೋಂದಣಿ ಮಾಡಿದ್ದರೂ ಗ್ರಾಹಕರಿಗೆ ನೇರವಾಗಿ ಉತ್ಪನ್ನಗಳನ್ನು ಮಾರಾಟ ಮಾಡಿಲ್ಲ. ಬದಲಿಗೆ ‘ವೆಕ್ಟರ್ ಇ–ಕಾರ್ಮಸ್’ ಎಂಬ ಕಂಪನಿಗೆ ತನ್ನ ಅಷ್ಟೂ ಸರಕನ್ನು ಮಾರಾಟ ಮಾಡಿದೆ’ ಎಂದು ಇ.ಡಿ ವಿವರಿಸಿದೆ.
‘ಮಿಂತ್ರಾ ಮತ್ತು ವೆಕ್ಟರ್ ಕಂಪನಿಗಳು ಒಂದೇ ಸಮೂಹದ ಕಂಪನಿಗಳು. ಸರಕುಗಳು ಮಿಂತ್ರಾದಿಂದ ವೆಕ್ಟರ್‌ಗೆ ಮಾರಾಟವಾಗಿದ್ದರೂ ಬಳಕೆದಾರರಿಗೆ ನೇರವಾಗಿ ಮಾರಾಟ ಮಾಡಿದಂತಾಗಿಲ್ಲ. ಈ ಮೂಲಕ ಮಿಂತ್ರಾ ಕಂಪನಿಯು ಎಫ್‌ಡಿಐಯ ನಿಯಮವೊಂದನ್ನು ಉಲ್ಲಂಘಿಸಿದೆ’ ಎಂದಿದೆ.
‘ಎಫ್‌ಡಿಐ ಪಡೆಯುವ ಕಂಪನಿಯು, ತನ್ನದೇ ಸಮೂಹದ ಮತ್ತೊಂದು ಕಂಪನಿಗೆ ತನ್ನ ಸರಕುಗಳನ್ನು ಪೂರ್ಣ ಪ್ರಮಾಣದಲ್ಲಿ ಮಾರಾಟ ಮಾಡುವಂತಿಲ್ಲ. ಒಂದೇ ಸಮೂಹದ ಎರಡು ಕಂಪನಿಗಳ ಮಧ್ಯೆ ಸರಕುಗಳ ಮಾರಾಟಕ್ಕೆ ಶೇ 25ರಷ್ಟು ಮಿತಿ ಇದೆ. ಮಿಂತ್ರಾ ಕಂಪನಿಯು ವೆಕ್ಟರ್ ತನ್ನದೇ ಸಮೂಹದ ಕಂಪನಿ ಎಂಬುದನ್ನು ಮುಚ್ಚಿಟ್ಟು, ಸರಕುಗಳನ್ನು ಮಾರಾಟ ಮಾಡಿದೆ. ಈ ಮೂಲಕ ಎಫ್‌ಡಿಐನ ಇನ್ನೊಂದು ನಿಯಮ ಉಲ್ಲಂಘಿಸಿದೆ’ ಎಂದು ಮಾಹಿತಿ ನೀಡಿದೆ.
‘ಎರಡೂ ನಿಯಮಗಳ ಉಲ್ಲಂಘನೆ ಆರೋಪದಲ್ಲಿ ಮಿಂತ್ರಾ ಡಿಸೈನ್ಸ್, ವೆಕ್ಟರ್ ಇ–ಕಾಮರ್ಸ್ ಕಂಪನಿಗಳು ಮತ್ತು ಅವುಗಳ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮಿಂತ್ರಾ ಡಿಸೈನ್ಸ್, ‘ಪ್ರಕರಣದ ವಿವರ ನಮಗಿನ್ನೂ ದೊರೆತಿಲ್ಲ. ತನಿಖೆಗೆ ಸಹಕರಿಸುತ್ತೇವೆ’ ಎಂದು ತಿಳಿಸಿದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಮಿಂತ್ರಾ ಡಿಸೈನ್ ಈಗ ಫ್ಲಿಪ್‌ಕಾರ್ಟ್ ಸ್ವಾಧೀನದಲ್ಲಿದೆ. ಅಮೆರಿಕದ ವಾಲ್‌ಮಾರ್ಟ್ ಸಮೂಹವು ಫ್ಲಿಪ್‌ಕಾರ್ಟ್‌ನ ಮಾತೃಸಂಸ್ಥೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.