ನವದೆಹಲಿ: ಸಾಲ ನೀಡುವಿಕೆಯನ್ನು ಹೆಚ್ಚು ಮಾಡಬೇಕು, ಅದರಲ್ಲೂ ಮುಖ್ಯವಾಗಿ ಎಂಎಸ್‌ಎಂಇ ವಲಯದ ಉದ್ಯಮಗಳಿಗೆ ಸಾಲ ನೀಡುವಿಕೆ ಹೆಚ್ಚಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಹೇಳಿದರು.
ಬ್ಯಾಂಕ್‌ಗಳು ಗ್ರಾಹಕರಿಗೆ ಒದಗಿಸುವ ಸೇವೆಗಳನ್ನು ಉತ್ತಮಪಡಿಸುವ ಬಗ್ಗೆಯೂ ಗಮನಹರಿಸಬೇಕು ಎಂದು ಅವರು ತಾಕೀತು ಮಾಡಿದರು.
ಎಂಎಸ್‌ಎಂಇ (ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ) ಉದ್ಯಮಗಳ ಸಾಲ ಪಡೆಯುವ ಅರ್ಹತೆಯನ್ನು ನಿರ್ಣಯಿಸಲು ಹೊಸದಾಗಿ ಜಾರಿಗೆ ತಂದಿರುವ ಮಾದರಿಯ ಅನುಷ್ಠಾನಕ್ಕೆ ಬಲ ತುಂಬಬೇಕು, ಈ ಮೂಲಕ ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ಸಾಲ ತ್ವರಿತವಾಗಿ ಸಿಗುವಂತೆ ಆಗಬೇಕು ಎಂದು ಅವರು ಪರಿಶೀಲನಾ ಸಭೆಯೊಂದರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗೆ ಶುಕ್ರವಾರ ಸೂಚಿಸಿದರು.
ಹೊಸ ಮಾದರಿಯನ್ನು ಈ ವರ್ಷದ ಮಾರ್ಚ್ ತಿಂಗಳಲ್ಲಿ ಆರಂಭಿಸಲಾಗಿದೆ. ಇದರ ಅಡಿಯಲ್ಲಿ, ಎಂಎಸ್‌ಎಂಇ ವಲಯದ ಉದ್ದಿಮೆಗಳು ಸಾಲ ಪಡೆಯಲು ಎಷ್ಟು ಅರ್ಹ ಎಂಬುದನ್ನು ನಿರ್ಣಯಿಸಲು ಬ್ಯಾಂಕ್‌ಗಳು ಹೊರಗಿನ ಸಂಸ್ಥೆಗಳನ್ನು ನೆಚ್ಚಿಕೊಳ್ಳುವ ಬದಲು ತಮ್ಮದೇ ಆದ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಬೇಕಾಗುತ್ತದೆ.
ಹೊಸ ಮಾದರಿಯ ಮೂಲಕ 1.97 ಲಕ್ಷ ಎಂಎಸ್‌ಎಂಇ ಸಾಲ ನೀಡಲಾಗಿದೆ, ಇದರ ಮೊತ್ತ ಒಟ್ಟು ₹60 ಸಾವಿರ ಕೋಟಿ ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಆರ್‌ಬಿಐ ಮೇಲ್ವಿಚಾರಣೆ ಬೇಕು: ಎಫ್‌ಕೆಸಿಸಿಐ
ಬೆಂಗಳೂರು: ಬ್ಯಾಂಕ್‌ಗಳು ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ನೀಡುವ ಸಾಲದ ಬಗ್ಗೆ ಆರ್‌ಬಿಐ ಹಾಗೂ ಕೇಂದ್ರ ಸರ್ಕಾರದ ಮೇಲ್ವಿಚಾರಣೆ ಇರಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಹೇಳಿದರು.
‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು, ‘ಬ್ಯಾಂಕ್‌ಗಳು ಸಾಲವನ್ನು ತಮಗೆ ಪರಿಚಯ ಇರುವವರಿಗೇ ಕೊಟ್ಟುಕೊಂಡಿರುವ ನಿದರ್ಶನಗಳು ಇವೆ. ಹೀಗಾಗಿ ಹೊಸದೊಂದು ಕಾನೂನು ಚೌಕಟ್ಟು ರೂಪಿಸಿ, ಒಂದು ಪೋರ್ಟಲ್ ಆರಂಭಿಸಬೇಕು. ಬ್ಯಾಂಕ್‌ಗಳು ನೀಡಿರುವ ಸಾಲವು ಎಂಎಸ್‌ಎಂಇ ವಲಯದ ಉದ್ದಿಮೆಗಳಿಗೆ ನಿಜವಾಗಿಯೂ ತಲುಪಿದೆಯೇ ಎಂಬುದನ್ನು ಆರ್‌ಬಿಐ, ಕೇಂದ್ರ ಸರ್ಕಾರ ಪರಿಶೀಲಿಸಬೇಕು’ ಎಂದು ಸಲಹೆ ನೀಡಿದರು.
ಈ ವಲಯಕ್ಕೆ ಸಾಲ ಸಿಗುವಂತೆ ಆಗಬೇಕು ಎಂಬ ಉದ್ದೇಶದಿಂದ ಕೇಂದ್ರ ರೂಪಿಸಿರುವ ಹಲವು ಯೋಜನೆಗಳು ಉತ್ತಮವಾಗಿವೆ. ಆದರೆ ಸಾಲವು ನೈಜ ಉದ್ಯಮಿಗೆ ಸಿಗುವಂತೆ ಆಗಬೇಕು ಎಂದು ಅವರು ಹೇಳಿದರು.
ಸಾಲಕ್ಕೆ ಸಂಬಂಧಿಸಿದಂತೆ ಕೇಂದ್ರ ರೂಪಿಸಿರುವ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.