ನವದೆಹಲಿ: ಜುಲೈನಲ್ಲಿ ಆರಂಭವಾಗಲಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ವಿಮಾ ತಿದ್ದುಪಡಿ ಮಸೂದೆ ಮಂಡಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರವು ವಿಮಾ ವಲಯದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಹೂಡಿಕೆಗೆ ಅವಕಾಶ ಕಲ್ಪಿಸಲು ನಿರ್ಧರಿಸಿದೆ. ಇದಕ್ಕೆ ಸಂಬಂಧಿಸಿದಂತೆ ತಿದ್ದುಪಡಿ ಮಸೂದೆ ಮಂಡಿಸಲಿದೆ ಎಂದು ಹೇಳಿವೆ.
ಸಂಸತ್‌ನಲ್ಲಿ ಮಂಡನೆಗೂ ಮೊದಲು ಕೇಂದ್ರ ಸಚಿವ ಸಂಪುಟದ ಮುಂದೆ ಕರಡು ಮಸೂದೆ ಮಂಡಿಸಲಾಗುತ್ತದೆ. ಇದಕ್ಕೆ ಅನುಮೋದನೆ ದೊರೆತ ಬಳಿಕ ಕೇಂದ್ರ ಹಣಕಾಸು ಸಚಿವಾಲಯದ ಅಧೀನದಲ್ಲಿ ಬರುವ ಹಣಕಾಸು ಸೇವೆಗಳ ಇಲಾಖೆಯು ಮಸೂದೆ ಮಂಡನೆಯ ಪ್ರಕ್ರಿಯೆಗಳನ್ನು ಆರಂಭಿಸಲಿದೆ ಎಂದು ಹೇಳಿವೆ.
ಪ್ರಸ್ತುತ ವಿಮಾ ವಲಯದಲ್ಲಿ ಶೇ 74ರಷ್ಟು ಎಫ್‌ಡಿಐ ಹೂಡಿಕೆಗೆ ಅವಕಾಶವಿದೆ. ಇದನ್ನು ಹೆಚ್ಚಿಸುವ ಮೂಲಕ ಎಲ್ಲಾ ವರ್ಗದ ಜನರಿಗೂ ವಿಮಾ ಸೌಲಭ್ಯ ಒದಗಿಸುವುದು ಸರ್ಕಾರದ ಗುರಿಯಾಗಿದೆ. ಬಜೆಟ್ ಭಾಷಣದ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತು ಪ್ರಸ್ತಾಪಿಸಿದ್ದರು.
ವಿಮಾದಾರರ ಹಿತರಕ್ಷಣೆ ಮತ್ತು ಅವರಿಗೆ ಹಣಕಾಸಿನ ಭದ್ರತೆ ಒದಗಿಸುವುದು ಪ್ರಸ್ತಾವಿತ ಮಸೂದೆಯ ಗುರಿಯಾಗಿದೆ. ಅಲ್ಲದೆ, ಹಲವು ಕಂಪನಿಗಳಿಗೆ ವಿಮಾ ಕ್ಷೇತ್ರ ಪ್ರವೇಶಿಸಲು ಅವಕಾಶ ಒದಗಿಸಲಿದೆ. ಆ ಮೂಲಕ ದೇಶದ ಆರ್ಥಿಕತೆ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದು ಸರ್ಕಾರದ ಉದ್ದೇಶವಾಗಿದೆ.
2047ರ ವೇಳೆಗೆ ದೇಶದ ಎಲ್ಲರಿಗೂ ವಿಮಾ ಸೌಲಭ್ಯ ನೀಡುವ ಗುರಿ ಹೊಂದಲಾಗಿದೆ. ಮಸೂದೆಯು ವಿಮಾ ವಲಯದ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಅವಕಾಶ ಕಲ್ಪಿಸಲಿದೆ ಎಂದು ಸರ್ಕಾರ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.