ADVERTISEMENT

Flipkartಗೆ NBFC ಪರವಾನಗಿ; RBI ಅನುಮತಿ ಪಡೆದ ದೇಶದ ಮೊದಲ ಇ–ಕಾಮರ್ಸ್ ದೈತ್ಯ

ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಅನುಮತಿ ಪಡೆದ ದೇಶದ ಮೊದಲ ಇ–ಕಾಮರ್ಸ್ ದೈತ್ಯ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 0:30 IST
Last Updated 6 ಜೂನ್ 2025, 0:30 IST
ಫ್ಲಿಪ್‌ಕಾರ್ಟ್
ಫ್ಲಿಪ್‌ಕಾರ್ಟ್   

ರಾಯಿಟರ್ಸ್‌: ದೇಶದ ಪ್ರಮುಖ ಇ–ಕಾಮರ್ಸ್‌ ವೇದಿಕೆ ಫ್ಲಿಪ್‌ಕಾರ್ಟ್‌ಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ (ಆರ್‌ಬಿಐ) ಬ್ಯಾಂಕೇತರ ಹಣಕಾಸು ಕಂಪನಿ (ಎನ್‌ಬಿಎಫ್‌ಸಿ) ಪರವಾನಗಿ ದೊರೆತಿದೆ. ಅಮೆರಿಕದ ವಾಲ್‌ಮಾರ್ಟ್‌ ಕಂಪನಿಯು ಫ್ಲಿಪ್‌ಕಾರ್ಟ್‌ನಲ್ಲಿ ಶೇಕಡ 80ರಷ್ಟು ಪಾಲು ಹೊಂದಿದೆ.

ಈ ಪರವಾನಗಿ ದೊರೆತಿರುವ ಕಾರಣದಿಂದಾಗಿ ಫ್ಲಿಪ್‌ಕಾರ್ಟ್‌ಗೆ ತನ್ನ ವೇದಿಕೆಯ ಮೂಲಕ ಗ್ರಾಹಕರು ಮತ್ತು ಮಾರಾಟಗಾರರಿಗೆ ಸಾಲ ನೀಡಲು ಸಾಧ್ಯವಾಗಲಿದೆ. ಆದರೆ, ಠೇವಣಿ ಸ್ವೀಕರಿಸುವ ಅಧಿಕಾರ ಫ್ಲಿಪ್‌ಕಾರ್ಟ್‌ಗೆ ಇರುವುದಿಲ್ಲ.

ಪರವಾನಗಿ ದೊರೆತಿರುವುದನ್ನು ಕಂಪನಿಯ ವಕ್ತಾರರೊಬ್ಬರು ರಾಯಿಟರ್ಸ್‌ಗೆ ಖಚಿತಪಡಿಸಿದ್ದಾರೆ. ದೇಶದಲ್ಲಿ ದೊಡ್ಡ ಇ–ಕಾಮರ್ಸ್‌ ಕಂಪನಿಯೊಂದಕ್ಕೆ ಎನ್‌ಬಿಎಫ್‌ಸಿ ಪರವಾನಗಿಯು ಆರ್‌ಬಿಐ ಕಡೆಯಿಂದ ಸಿಕ್ಕಿರುವುದು ಇದೇ ಮೊದಲು. ಈಗ ಬಹುತೇಕ ಇ–ಕಾಮರ್ಸ್‌ ವೇದಿಕೆಗಳು, ಬ್ಯಾಂಕ್‌ ಅಥವಾ ಎನ್‌ಬಿಎಫ್‌ಸಿ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಗ್ರಾಹಕರಿಗೆ ಸಾಲ ನೀಡುತ್ತಿವೆ. ಆದರೆ, ಫ್ಲಿಪ್‌ಕಾರ್ಟ್‌ ತಾನೇ ನೇರವಾಗಿ ಸಾಲ  ಕೊಡುವ ಪರವಾನಗಿ ಪಡೆದಿದೆ. 

ADVERTISEMENT

ಫ್ಲಿ‍ಪ್‌ಕಾರ್ಟ್‌ ಈ ಪರವಾನಗಿಗಾಗಿ 2022ರಲ್ಲಿ ಅರ್ಜಿ ಸಲ್ಲಿಸಿತ್ತು. ಈ ವರ್ಷದ ಮಾರ್ಚ್‌ 13ರಂದು ಆರ್‌ಬಿಐ ಅನುಮೋದನೆ ಪತ್ರವನ್ನು ಫ್ಲಿ‍ಪ್‌ಕಾರ್ಟ್‌ಗೆ ನೀಡಿದೆ.

ಶೀಘ್ರ ಕಾರ್ಯಾಚರಣೆ?: 

ಫ್ಲಿಪ್‌ಕಾರ್ಟ್‌ ಕಂಪನಿಯು ಸಾಲ ನೀಡುವ ಪ್ರಕ್ರಿಯೆಯನ್ನು ಕೆಲವೇ ತಿಂಗಳುಗಳಲ್ಲಿ ಆರಂಭಿಸುವ ನಿರೀಕ್ಷೆಯಿದೆ. ಇದಕ್ಕೂ ಮೊದಲು ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಸದಸ್ಯರ ನೇಮಕಾತಿ ಆಗಬೇಕಿದೆ. ಅಲ್ಲದೆ, ಸಾಲ ನೀಡುವ ವಹಿವಾಟಿನ ರೂಪುರೇಷೆಯು ಅಂತಿಮಗೊಳ್ಳಬೇಕಿದೆ ಎಂದು ಮೂಲಗಳು ತಿಳಿಸಿವೆ.

ಕಂಪನಿಯು ತನ್ನದೇ ವೇದಿಕೆ ಮತ್ತು ಯುಪಿಐ ಸೇವೆಗಳನ್ನು ಒದಗಿಸುವ ‘ಸೂಪರ್.ಮನಿ’ ಆ್ಯಪ್ ಮೂಲಕ ಗ್ರಾಹಕರಿಗೆ ಸಾಲ ನೀಡಲು ಯೋಜಿಸಿದೆ ಎಂದು ಗೊತ್ತಾಗಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್‌, ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು ಎಕ್ಸಿಸ್‌ ಬ್ಯಾಂಕ್, ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ ಮತ್ತು ಕ್ರೆಡಿಟ್‌ ಸೈಸನ್‌ ಮೂಲಕ ನೀಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.