ನಗರದಲ್ಲಿರುವ ಸಣ್ಣ ಸೂಪರ್ ಮಾರ್ಕೆಟ್ ಅಂಗಡಿ
ಪ್ರಜಾವಾಣಿ ಚಿತ್ರ/ಕಿಶೋರ್ ಕುಮಾರ್ ಬೋಳಾರ್
ನವದೆಹಲಿ: ಪರಿಷ್ಕೃತ ಜಿಎಸ್‌ಟಿ ದರವು ಜಾರಿಗೆ ಬಂದ ನಂತರದಲ್ಲಿ ಎಫ್‌ಎಂಸಿಜಿ ವಲಯದ ಕಂಪನಿಗಳನ್ನು ಸಮಸ್ಯೆಯೊಂದು ಕಾಡುತ್ತಿದೆ.
₹2, ₹5, ₹10 ಬೆಲೆಗೆ ಮಾರಾಟ ಆಗುತ್ತಿದ್ದ ವಿವಿಧ ಉತ್ಪನ್ನಗಳ ಬೆಲೆಯನ್ನು ಜಿಎಸ್‌ಟಿ ಇಳಿಕೆಗೆ ಅನುಗುಣವಾಗಿ ಕಂಪನಿಗಳು ತಗ್ಗಿಸಿವೆ. ಆದರೆ, ಜಿಎಸ್‌ಟಿ ಪರಿಷ್ಕರಣೆಯ ನಂತರದ ಬೆಲೆಯು ವಸ್ತುಗಳ ಖರೀದಿಗೆ, ಮಾರಾಟಕ್ಕೆ ಅನುಕೂಲಕರವಾದ ಹಂತದಲ್ಲಿ ಉಳಿದಿಲ್ಲ.
ಉದಾಹರಣೆಗೆ, ₹5ಕ್ಕೆ ಮಾರಾಟ ಆಗುತ್ತಿದ್ದ ಜನಪ್ರಿಯ ಪಾರ್ಲೆ–ಜಿ ಬಿಸ್ಕತ್ ಪ್ಯಾಕಿನ ಬೆಲೆಯು ಈಗ ₹4.50 ಆಗಿದೆ. ಈ ಹಿಂದೆ ₹2ಕ್ಕೆ ಮಾರಾಟ ಆಗುತ್ತಿದ್ದ ಶಾಂಪೂ ಪೌಚ್‌ನ ಬೆಲೆ ಈಗ ₹1.75 ಆಗಿದೆ. ಇಂತಹ ಪೌಚ್‌ಗಳಲ್ಲಿ, ಪೊಟ್ಟಣಗಳಲ್ಲಿ ಇರುವ ಉತ್ಪನ್ನಗಳ ತೂಕವನ್ನು ಹೆಚ್ಚು ಮಾಡಲು ತಕ್ಷಣಕ್ಕೆ ಸಾಧ್ಯವಾಗದೆ ಇರುವ ಕಾರಣಕ್ಕೆ, ಬೆಲೆಯನ್ನು ಈ ಬಗೆಯಲ್ಲಿ ಕಡಿಮೆ ಮಾಡಲಾಗಿದೆ ಎಂದು ಕಂಪನಿಯ ಪ್ರತಿನಿಧಿಗಳು ಹೇಳಿದ್ದಾರೆ.
ಸರ್ಕಾರದ ನಿರ್ದೇಶನವನ್ನು ಪಾಲಿಸುವ ಉದ್ದೇಶದಿಂದ ಜನಪ್ರಿಯ ಬೆಲೆ ಶ್ರೇಣಿಯ ಉತ್ಪನ್ನಗಳನ್ನು ಈ ಬಗೆಯಲ್ಲಿ ಅಸಾಂಪ್ರದಾಯಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದು ಉದ್ಯಮದ ಪ್ರತಿನಿಧಿಗಳು ಹೇಳಿದ್ದಾರೆ. ಆದರೆ ಇದು ತಾತ್ಕಾಲಿಕ ಕ್ರಮ ಮಾತ್ರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ಇದು ನೂರಕ್ಕೆ ನೂರರಷ್ಟು ತಾತ್ಕಾಲಿಕ ಕ್ರಮ... ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಬಳಸುವ ಪೊಟ್ಟಣಗಳು ಮುದ್ರಣ ಆಗಿವೆ. ಈಗ ತೂಕದಲ್ಲಿ ಬದಲಾವಣೆ ತಂದು ಎಂಆರ್‌ಪಿಯನ್ನು ಮೊದಲಿನ ಹಂತದಲ್ಲಿ ಇರಿಸುವುದು ಕಷ್ಟ. ಹೀಗಾಗಿ, ನಾವು ಜಿಎಸ್‌ಟಿ ಪರಿಷ್ಕರಣೆಯ ಪ್ರಯೋಜನವನ್ನು ಈ ಬಗೆಯ ಅಸಾಂಪ್ರದಾಯಿಕ ಕ್ರಮದ ಮೂಲಕ ಗ್ರಾಹಕರಿಗೆ ವರ್ಗಾವಣೆ ಮಾಡುತ್ತಿದ್ದೇವೆ’ ಎಂದು ಪಾರ್ಲೆ ಪ್ರೊಡಕ್ಟ್ಸ್‌ನ ಉಪಾಧ್ಯಕ್ಷ ಮಯಾಂಕ್ ಶಾ ತಿಳಿಸಿದ್ದಾರೆ.
ಈ ಬೆಲೆಗೆ ಬಿಸ್ಕತ್ತಿನ ಪೊಟ್ಟಣ ಖರೀದಿಸುವಲ್ಲಿ ಗ್ರಾಹಕರು ಸಮಸ್ಯೆ ಅನುಭವಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಅವರು, ‘ಗ್ರಾಹಕರು ಒಂದಕ್ಕಿಂತ ಹೆಚ್ಚು ಪೊಟ್ಟಣ ಖರೀದಿಸಬಹುದು ಅಥವಾ ಯುಪಿಐ ಮೂಲಕ ಪಾವತಿ ಮಾಡಬಹುದು’ ಎಂದು ಉತ್ತರಿಸಿದರು.
‘ಇವು ಕಂಪನಿಗಳು ಅನುಸರಿಸುತ್ತಿರುವ ಅಲ್ಪಾವಧಿಯ ಕ್ರಮಗಳು. ಕಂಪನಿಗಳು ಉತ್ಪನ್ನಗಳ ತೂಕವನ್ನು ಹೆಚ್ಚು ಮಾಡಿ ಜನಪ್ರಿಯ ಬೆಲೆ ಶ್ರೇಣಿಯಾದ ₹2, ₹5 ಹಾಗೂ ₹10ನ್ನು ಮತ್ತೆ ಜಾರಿಗೆ ತರುತ್ತವೆ. ಏಕೆಂದರೆ ನಾಲ್ಕೂವರೆ ರೂಪಾಯಿ ಪಾವತಿ ಮಾಡುವುದು ವಾಸ್ತವದಲ್ಲಿ ಸುಲಭವಲ್ಲ’ ಎಂದು ನುವಾಮಾ ಇನ್‌ಸ್ಟಿಟ್ಯೂಷನ್ ಈಕ್ವಿಟಿಸ್ ಸಂಸ್ಥೆಯ ಅಬ್ನೀಶ್ ರಾಯ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.