ADVERTISEMENT

‘ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ’ ಯೋಜನೆ ಅನಾವರಣ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 19:57 IST
Last Updated 24 ಜನವರಿ 2025, 19:57 IST
ಗುಜರಾತ್ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಡಿ ಬೆಂಗಳೂರಿನಲ್ಲಿ ನಡೆದ ಎರಡನೇ ರೋಡ್‌ಶೋನಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರು
ಗುಜರಾತ್ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಡಿ ಬೆಂಗಳೂರಿನಲ್ಲಿ ನಡೆದ ಎರಡನೇ ರೋಡ್‌ಶೋನಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರು   

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ನಡೆದ ಗುಜರಾತ್ ಐ.ಟಿ/ ಐಟಿಇಎಸ್ ನೀತಿ 2022-27’ರ ರೋಡ್‌ ಷೋದಲ್ಲಿ ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ ‘ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ’ ಯೋಜನೆಯು ಅನಾವರಣಗೊಂಡಿದೆ.

ಗುಜರಾತ್ ಸರ್ಕಾರ,  ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಹಭಾಗಿತ್ವದಲ್ಲಿ ಗುಜರಾತ್ ಐ.ಟಿ/ ಐಟಿಇಎಸ್ ನೀತಿಗಾಗಿ ಬೆಂಗಳೂರಿನಲ್ಲಿ ಎರಡನೇ ರೋಡ್‌ ಷೋ ಆಯೋಜಿಸಲಾಗಿತ್ತು.

ಗುಜರಾತ್ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೋನಾ ಖಂಧರ್ ಮಾತನಾಡಿ, ಧೋಲೆರಾದಲ್ಲಿ ಸೆಮಿಕಂಡಕ್ಟರ್‌ ಕೇಂದ್ರ ಸ್ಥಾಪನೆ, ಜಾಗತಿಕ ಪಾಲುದಾರಿಕೆ, ಕೌಶಲ ವೃದ್ಧಿ ಹಾಗೂ ಸಂಶೋಧನೆಗೆ ಒತ್ತು ನೀಡುವ ಮೂಲಕ ಜಾಗತಿಕ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಉದ್ಯಮಗಳು ಮತ್ತು ನವೋದ್ಯಮಗಳನ್ನು ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದರು.

ADVERTISEMENT

ಅಹಮದಾಬಾದ್‌ನಲ್ಲಿ ಸ್ಥಾಪನೆಗೊಳ್ಳಲಿರುವ ‘ಮಿಲಿಯನ್‌ ಮೈಂಡ್ಸ್‌ ಟೆಕ್‌ ಸಿಟಿ’ಯಂತಹ ಯೋಜನೆಗಳು ಪ್ರಗತಿಯ ಮಹತ್ವಾಕಾಂಕ್ಷೆ ಜೊತೆ ಹೊಂದಿಕೊಳ್ಳುವ ಜಾಗತಿಕ ಮಟ್ಟದ ಮೂಲಸೌಲಭ್ಯವನ್ನು ಒದಗಿಸಿವೆ. ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಗುಜರಾತ್‌ ಆದ್ಯತೆಯ ರಾಜ್ಯವನ್ನಾಗಿಸಲು ನೆರವಾಗಲಿವೆ. ಗುಜರಾತ್‌ ರಾಜ್ಯವು ಕೇವಲ ಸ್ಥಳೀಯ ಬೆಳವಣಿಗೆ ಮಾತ್ರ ಆದ್ಯತೆ ನೀಡಿಲ್ಲ. 2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗಲು ಮಹತ್ವದ ಪಾತ್ರ ವಹಿಸಲಿದೆ  ಎಂದು ಹೇಳಿದರು.

‘ಮಿಲಿಯನ್ ಮೈಂಡ್ಸ್ ಟೆಕ್ ಸಿಟಿ’ಗೆ ಸಂಬಂಧಿಸಿದ ಮತ್ತೊಂದು ಟೌನ್‌ಶಿಪ್ ಅಭಿವೃದ್ಧಿಪಡಿಸುವುದಕ್ಕೆ ಸೀಮಿತವಾಗಿರದೆ, ಅಭಿವೃದ್ಧಿ ಹೊಂದುತ್ತಿರುವ ಪರಿಸರ ವ್ಯವಸ್ಥೆ ನಿರ್ಮಾಣಕ್ಕೂ ಒತ್ತು ನೀಡಲಾಗಿದೆ. ಇದು ನಾವೀನ್ಯ, ಐಷಾರಾಮಿ ಮತ್ತು ಸಮುದಾಯವು ಒಂದೆಡೆ ಸೇರುವ ಸ್ಥಳವಾಗಿರಲಿದೆ’ ಎಂದು ಗಣೇಶ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ ನಿರ್ದೇಶಕ ಅನ್ಮೋಲ್ ಪಟೇಲ್ ಹೇಳಿದರು. 

ಆರು ಅತ್ಯಾಧುನಿಕ ತಂತ್ರಜ್ಞಾನ ಪಾರ್ಕ್‌ಗಳು, ಉನ್ನತ ದರ್ಜೆಯ ನಿವಾಸಗಳು, ಪ್ರೀಮಿಯಂ ಹೋಟೆಲ್ ಮತ್ತು ಶಾಪಿಂಗ್ ಮಾಲ್‌ಗಳಿಗೆ ನೆಲೆಯಾಗಿರಲಿದೆʼ ಎಂದರು. 

‘ಗುಜರಾತ್ ಮತ್ತು ಕರ್ನಾಟಕದ ಐ.ಟಿ ಕ್ಷೇತ್ರದ ಪ್ರಮುಖರನ್ನು ಒಂದೆಡೆ ಸೇರಿಸುವ ಮೂಲಕ ಗುಜರಾತ್ ರಾಜ್ಯವನ್ನು ಐ.ಟಿ ಹೂಡಿಕೆಗಳಿಗೆ ಮೊದಲ ಆಯ್ಕೆಯನ್ನಾಗಿ ಮಾಡುವ ಕಾರ್ಯತಂತ್ರದ ಮೇಲೆ ಬೆಳಕು ಚೆಲ್ಲುವಲ್ಲಿ ಈ ರೋಡ್‌ ಷೋ ಪ್ರಮುಖ ಪಾತ್ರವಹಿಸಿದೆ’ ಎಂದು ಗಣೇಶ್ ಹೌಸಿಂಗ್‌ನ ಮಾರಾಟ ಹಾಗೂ ಮಾರುಕಟ್ಟೆ  ವಿಭಾಗದ ಅಧ್ಯಕ್ಷ ವೀರೇನ್ ಮೆಹ್ತಾ ಹೇಳಿದರು.

ಭಾರತದ ಕೈಗಾರಿಕಾ ಒಕ್ಕೂಟದ (ಸಿಐಐ) ಸಹಯೋಗದಲ್ಲಿ ಆಯೋಜಿಸಲಾಗಿದ್ದ ರೋಡ್‌ಷೋಗೆ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಭಾರತದಾದ್ಯಂತದ 200ಕ್ಕೂ ಹೆಚ್ಚು ಪ್ರಮುಖ ಐ.ಟಿ ಮತ್ತು ಐಟಿಇಎಸ್‌ ಕಂಪನಿಗಳನ್ನು ಆಕರ್ಷಿಸಿತು.

ಸಮಾರಂಭದಲ್ಲಿ ಗುಜರಾತ್ ಇನ್‌ಫಾರ್ಮ್ಯಾಟಿಕ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ತುಷಾರ್ ವೈ. ಭಟ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.