ADVERTISEMENT

ಈಕ್ವಿಟಿ ಎಂ.ಎಫ್‌. ಮೀರಿಸಿದ ಚಿನ್ನದ ಇಟಿಎಫ್‌

ಪಿಟಿಐ
Published 10 ಫೆಬ್ರುವರಿ 2026, 15:31 IST
Last Updated 10 ಫೆಬ್ರುವರಿ 2026, 15:31 IST
   

ನವದೆಹಲಿ: ಚಿನ್ನದಲ್ಲಿ ಹಣ ತೊಡಗಿಸುವ ಇಟಿಎಫ್‌ಗಳಲ್ಲಿನ ಹೂಡಿಕೆಯು ಜನವರಿ ತಿಂಗಳಲ್ಲಿ ತೀವ್ರವಾಗಿ ಹೆಚ್ಚಾಗಿದ್ದು, ₹24,040 ಕೋಟಿ ಆಗಿದೆ. ಇದು ಡಿಸೆಂಬರ್‌ ತಿಂಗಳಿನಲ್ಲಿ ₹11,647 ಕೋಟಿ ಆಗಿತ್ತು.

ಚಿನ್ನದ ಇಟಿಎಫ್‌ಗಳಲ್ಲಿ ಆಗಿರುವ ಹೂಡಿಕೆಯು ಇದೇ ಮೊದಲ ಬಾರಿಗೆ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿನ ಹೂಡಿಕೆಯ ಮೊತ್ತಕ್ಕಿಂತ ತುಸು ಹೆಚ್ಚಾಗಿದೆ. ಜನವರಿಯಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಒಟ್ಟು ₹24,028 ಕೋಟಿ ಹೂಡಿಕೆ ಆಗಿದೆ.

‘ಇತರ ಪ್ರಮುಖ ಹೂಡಿಕೆಗಳಿಗೆ ಹೋಲಿಸಿದರೆ ಚಿನ್ನ ಮತ್ತು ಬೆಳ್ಳಿ ಮೇಲಿನ ಹೂಡಿಕೆಗಳು ಒಂದು ವರ್ಷದ ಅವಧಿಯಲ್ಲಿ ಹೆಚ್ಚು ಲಾಭ ತಂದುಕೊಟ್ಟಿವೆ. ಜನವರಿಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಇಟಿಎಫ್‌ಗಳಲ್ಲಿ ಹೂಡಿಕೆ ಜಾಸ್ತಿ ಆಗಿರುವುದಕ್ಕೆ ಇದು ಪ್ರಮುಖ ಕಾರಣ’ ಎಂದು ದಿ ವೆಲ್ತ್‌ ಕಂಪನಿ ಮ್ಯೂಚುವಲ್‌ ಫಂಡ್‌ನ ಮುಖ್ಯ ಹೂಡಿಕೆ ಅಧಿಕಾರಿ (ಸಾಲಪತ್ರ) ಉಮೇಶ್ ಶರ್ಮ ತಿಳಿಸಿದ್ದಾರೆ.

ADVERTISEMENT

ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿನ್ನದ ಇಟಿಎಫ್‌ಗಳ ಮೇಲೆ ಇದುವರೆಗೆ ಒಟ್ಟು ₹61 ಸಾವಿರ ಕೋಟಿ ಹೂಡಿಕೆ ಆಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯು ಈಚಿನ ದಿನಗಳಲ್ಲಿ ತೀವ್ರವಾಗಿ ಹೆಚ್ಚಳ ಕಂಡಿರುವ ಕಾರಣದಿಂದಾಗಿ ಚಿನ್ನ ಹಾಗೂ ಬೆಳ್ಳಿಯ ಇಟಿಎಫ್‌ಗಳಿಗೆ ಬೇಡಿಕೆ ಜಾಸ್ತಿ ಆಗಿದೆ.

ಜನವರಿ ಅಂತ್ಯದ ಹೊತ್ತಿಗೆ ಚಿನ್ನದ ಇಟಿಎಫ್‌ಗಳು ನಿರ್ವಹಿಸುತ್ತಿರುವ ಒಟ್ಟು ಹೂಡಿಕೆ ಮೌಲ್ಯವು ₹1.84 ಲಕ್ಷ ಕೋಟಿ ಆಗಿದೆ. ಇದು ಹಿಂದಿನ ವರ್ಷದ ಇದೇ ಹೊತ್ತಿನಲ್ಲಿ ₹1.28 ಲಕ್ಷ ಕೋಟಿ ಆಗಿತ್ತು ಎಂಬ ವಿವರವು ಭಾರತೀಯ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟದ (ಎಎಂಎಫ್‌ಐ) ಬಳಿ ಇದೆ.

ಚಿನ್ನ ಹಾಗೂ ಬೆಳ್ಳಿಯ ಇಟಿಎಫ್‌ಗಳಿಗೆ ಹೂಡಿಕೆದಾರರು ಲೆಕ್ಕಾಚಾರದೊಂದಿಗೆ ಹೂಡಿಕೆ ಮಾಡುತ್ತಿರುವುದು ಸಮತೋಲನದ ನಡೆಯೊಂದನ್ನು ತೋರಿಸುವಂತಿದೆ ಎಂದು ಎಎಂಎಫ್‌ಐ ಸಿಇಒ ವೆಂಕಟ್ ಎನ್. ಚಲಸಾನಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.