ಸಾಂದರ್ಭಿಕ ಚಿತ್ರ
ಎ.ಐ ಚಿತ್ರ
ಹಣಕಾಸಿನ ಆಧುನಿಕ ಹೂಡಿಕೆಗಳ ಲಭ್ಯತೆ ಇದ್ದರೂ, ದೇಶದ ಯುವಜನರು ಚಿನ್ನದ ಮೇಲೆ ಹೂಡಿಕೆಯನ್ನೇ ನೆಚ್ಚಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿದೆ. ಸಮೀಕ್ಷೆ ವೇಳೆ ಉತ್ತರಿಸಿದ ಶೇ 62 ರಷ್ಟು ಮಂದಿ ಚಿನ್ನದ ಮೇಲಿನ ಹೂಡಿಕೆಯೇ ಮೊದಲ ಆದ್ಯತೆ ಎಂದು ಹೇಳಿದ್ದಾರೆ.
ಚಿನ್ನ ಖರೀದಿಯು ನಮ್ಮ ವೈಯಕ್ತಿಕ ಆಯ್ಕೆ ಎಂದು ಸಮೀಕ್ಷೆಯಲ್ಲಿ ಭಾಗಿಯಾದ ಶೇ 66.7ರಷ್ಟು ಮಂದಿ ಹೇಳಿದ್ದಾರೆ. ಅಲ್ಲಿದೆ ಶೇ 62 ರಷ್ಟು ಮಂದಿ ತಾವು ಇತ್ತೀಚೆಗೆ ಖರೀದಿ ಮಾಡಿದ ಚಿನ್ನದ ಪ್ರಮಾಣ ಶೇ 5 ಗ್ರಾಂಗಿಂತ ಕಡಿಮೆ. ಇದು ಜೆನ್ ಝೀ ಹಾಗೂ ಮಿಲ್ಲೆನಿಯಲ್ ವಯೋಮಾನದವರು ಚಿನ್ನದ ಮೇಲಿನ ಹೂಡಿಕೆಯನ್ನು ಹೇಗೆ ನೋಡುತ್ತಿದ್ದಾರೆ ಎನ್ನುವುದರ ಪ್ರತೀಕ.
‘ಸ್ಮಿಟ್ಟನ್ ಪಲ್ಸ್ ಎಐ’ ಎನ್ನುವ ಸಂಸ್ಥೆ ಈ ಸಮೀಕ್ಷೆ ನಡೆಸಿದ್ದು, 18–39 ವಯೋಮಾನದ 5 ಸಾವಿರ ಮಂದಿಯನ್ನು ಸಂದರ್ಶಿಸಿ ಈ ವರದಿಯನ್ನು ತಯಾರಿಸಲಾಗಿದೆ. ಸಂಪ್ರದಾಯ, ನಂಬಿಕೆ ಆಧಾರದ ಮೇಲೆ ನಡೆಯುತ್ತಿದ್ದ ಚಿನ್ನ ಖರೀದಿ ಪ್ರಕ್ರಿಯೆಯು, ಈಗ ಕ್ರಮೇಣವಾಗಿ ವ್ಯಕ್ತಿಗತ ಹಾಗೂ ತರ್ಕಬದ್ಧವಾದ ನಿರ್ಧಾರಗಳ ಮೇಲೆ ನಡೆಯುತ್ತದೆ ಎನ್ನುವುದನ್ನು ಈ ಸಮೀಕ್ಷೆ ತೋರಿಸಿದೆ.
ಇವತ್ತು ಹೂಡಿಕೆ ಮಾಡಲು ₹ 25 ಸಾವಿರ ಇದ್ದರೆ ಚಿನ್ನದ ಮೇಲೆ ಹೂಡಿಕೆ ಮಾಡುತ್ತೇವೆ ಎಂದು ಶೇ 61.9 ಮಂದಿ ಹೇಳಿದ್ದರೆ, ಶೇ 16.6 ಮಂದಿ ಮ್ಯೂಚುವಲ್ ಫಂಡ್, ಶೇ 13 ಸ್ಥಿರ ಠೇವಣಿ, ಶೇ 6.6 ಮಂದಿ ಸ್ಟಾಕ್‌ಗಳಲ್ಲಿ ಹಾಗೂ ಶೇ 1.9 ಮಂದಿ ಕ್ರಿಪ್ಟೊದಲ್ಲಿ ಹೂಡಿಕೆ ಮಾಡುತ್ತೇವೆ ಎಂದು ಉತ್ತರಿಸಿದ್ದಾರೆ.
ಆರ್ಥಿಕ ಹಿಂಜರಿತದ ಸಮಯದಲ್ಲಿ ಚಿನ್ನದ ಮೇಲಿನ ಹೂಡಿಕೆಯೇ ಹೆಚ್ಚು ಸುರಕ್ಷಿತ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 65.7 ಮಂದಿ ಹೇಳಿದ್ದಾರೆ. ಬ್ಯಾಂಕ್ ಉಳಿತಾಯ, ಮ್ಯೂಚುವಲ್ ಫಂಡ್, ಈಕ್ವಿಟಿಗಳಿಗಿಂತ ಚಿನ್ನದ ಮೇಲಿನ ಹೂಡಿಕೆಯೇ ಸುರಕ್ಷಿತ ಎನ್ನುವುದು ಅವರ ನಂಬಿಕೆ.
ಜೆನ್-ಝೀ ಮತ್ತು ಮಿಲೇನಿಯಲ್ಸ್ ತಲೆಮಾರಿನ ಯುವ ಸಮೂಹಕ್ಕೆ ಇಂದಿಗೂ ಚಿನ್ನವೇ ‘ಆಪತ್ಕಾಲದ ಬಾಂಧವ’ನಾಗಿದೆ ಎಂಬುದನ್ನು ಸಮೀಕ್ಷೆ ಒತ್ತಿ ಹೇಳಿದೆ.
ಜನರು ಈಗ ಸಾಂದರ್ಭಿಕವಾಗಿ (ಉದಾ: ಮದುವೆ) ದೊಡ್ಡ ಪ್ರಮಾಣದ ಖರೀದಿ ಮಾಡುವ ಬದಲು, ನಿಯಮಿತವಾಗಿ ಸಣ್ಣ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡುತ್ತಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ 61.9ರಷ್ಟು ಮಂದಿ ಇತ್ತೀಚೆಗೆ ಖರೀದಿ ಮಾಡಿದ ಚಿನ್ನದ ಪ್ರಮಾಣ 5 ಗ್ರಾಂಗಿಂತ ಕಡಿಮೆ ತೂಕದ್ದು. ಶೇ 27.5ರಷ್ಟು ಜನರು 2 ಗ್ರಾಂಗಿಂತ, ಶೇ. 34.4 ರಷ್ಟು ಜನರು 2 ರಿಂದ 5 ಗ್ರಾಂ ನಡುವಿನ ತೂಕದ ಚಿನ್ನವನ್ನು ಖರೀದಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಮೊದಲ ಬಾರಿ ಚಿನ್ನ ಖರೀದಿ ಮಾಡುವವರು ಈಗ ಸಮಾರಂಭಗಳಿಗೆ ಕಾಯುತ್ತಿಲ್ಲ. ಸುಮಾರು ಶೇ 24 ಮಂದಿ ತಮ್ಮ ಮೊದಲ ಸಂಬಳ ಅಥವಾ ವೈಯಕ್ತಿಕ ಆದಾಯ ಬಂದಾಗ ಮೊದಲ ಬಾರಿಗೆ ಚಿನ್ನ ಖರೀದಿಸಿದ್ದಾರೆ. ಶೇ 23.9 ರಷ್ಟು ಮಂದಿಗೆ ಹೂಡಿಕೆ ಎಂದು ಪರಿಗಣಿಸಿದ ಚಿನ್ನ ಖರೀದಿ ಮಾಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.