ADVERTISEMENT

ಚಿನ್ನದ ಬೆಲೆ ಏರಿಕೆ | ಈ ಆರ್ಥಿಕ ವರ್ಷದಲ್ಲಿ ಶೇ 10ರಷ್ಟು ಬೇಡಿಕೆ ಕುಸಿತ: ವರದಿ

ಪಿಟಿಐ
Published 29 ಮೇ 2025, 13:02 IST
Last Updated 29 ಮೇ 2025, 13:02 IST
ಚಿನ್ನ
ಚಿನ್ನ   

ಮುಂಬೈ: ಚಿನ್ನದ ಬೆಲೆಯಲ್ಲಿ ಶೇ 33ರಷ್ಟು ಏರಿಕೆಯಾಗಿದೆ. ಹಾಗಾಗಿ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೇಡಿಕೆಯು ಶೇ 9ರಿಂದ ಶೇ 10ರಷ್ಟು ತಗ್ಗುವ ನಿರೀಕ್ಷೆಯಿದೆ ಎಂದು ಕ್ರೆಡಿಟ್‌ ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ವರದಿ ಗುರುವಾರ ತಿಳಿಸಿದೆ.

ಕಳೆದ ಆರ್ಥಿಕ ವರ್ಷದಲ್ಲೂ ಬೇಡಿಕೆ ಪ್ರಮಾಣವು ಶೇ 7ರಷ್ಟು ಕಡಿಮೆಯಾಗಿತ್ತು. ಆದರೆ, ಚಿನ್ನದ ಮೇಲಿನ ಹೂಡಿಕೆಯು ಏರಿಕೆಯಾಗುತ್ತಿದೆ ಎಂದು ಹೇಳಿದೆ.

2023–24 ಮತ್ತು 2024–25ನೇ ಆರ್ಥಿಕ ವರ್ಷದಲ್ಲಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಕ್ರಮವಾಗಿ ಶೇ 17 ಮತ್ತು ಶೇ 25ರಷ್ಟು ಬೇಡಿಕೆ ಹೆಚ್ಚಳವಾಗಿತ್ತು. ಜಾಗತಿಕ ಅನಿಶ್ಚಿತ ಸ್ಥಿತಿ ಮತ್ತು ವ್ಯಾಪಾರದ ಬಿಕ್ಕಟ್ಟಿನಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಹಳದಿ ಲೋಹದ ಖರೀದಿಗೆ ಮುಂದಾಗಿರುವುದಕ್ಕೆ ಇದು ಕನ್ನಡಿ ಹಿಡಿದಿದೆ ಎಂದು ಹೇಳಿದೆ.

ADVERTISEMENT

ಪ್ರಸಕ್ತ ಆರ್ಥಿಕ ವರ್ಷದಲ್ಲೂ ಚಿನ್ನದ ಗಟ್ಟಿ ಮತ್ತು ನಾಣ್ಯಗಳ ಬೇಡಿಕೆಯು ಶೇ 10ರಷ್ಟು ಬೆಳವಣಿಗೆ ಕಾಣುವ ನಿರೀಕ್ಷೆಯಿ‌ದೆ. ದೇಶೀಯಮಟ್ಟದಲ್ಲಿ ಚಿನ್ನಾಭರಣಗಳ ಬೇಡಿಕೆ ಮೌಲ್ಯ ಶೇ 12ರಿಂದ ಶೇ 14ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ವಿವರಿಸಿದೆ.

‘ಚಿನ್ನದ ದರ ಏರಿಕೆ ಹೊರತಾಗಿಯೂ ದೊಡ್ಡ ಮಾರಾಟಗಾರರು ಶೇ 16ರಷ್ಟು ವರಮಾನ ಗಳಿಸುವ ಅಂದಾಜಿದೆ’ ಎಂದು ಐಸಿಆರ್‌ಎ ಹಿರಿಯ ಉಪಾಧ್ಯಕ್ಷ ಜಿತಿನ್‌ ಮಕ್ಕರ್‌ ಹೇಳಿದ್ದಾರೆ.

ದೇಶದ ಸಂಸ್ಕೃತಿಯಲ್ಲಿ ಚಿನ್ನಕ್ಕಿರುವ ಪ್ರಾಮುಖ್ಯತೆ, ವಿವಾಹ ಮತ್ತು ಮಂಗಳಕರ ದಿನಗಳಂದು ಖರೀದಿ ಪ್ರಮಾಣವನ್ನು ಹೆಚ್ಚಿಸಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಚಿನ್ನದ ದರವು ಸ್ಥಿರವಾಗಿದೆ. ಆದರೆ, ಜಾಗತಿಕ ಮಟ್ಟದಲ್ಲಿ ತಲೆದೋರುವ ಬಿಕ್ಕಟ್ಟು ಬೆಲೆ ಮೇಲೆ ಪರಿಣಾಮ ಬೀರಬಹುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.