ADVERTISEMENT

ಹೊಸ ವರ್ಷದಲ್ಲಿ ಚಿನ್ನದ ಬೆಲೆ ₹63 ಸಾವಿರ ತಲುಪುವ ಸಾಧ್ಯತೆ

ಪಿಟಿಐ
Published 27 ಡಿಸೆಂಬರ್ 2020, 15:11 IST
Last Updated 27 ಡಿಸೆಂಬರ್ 2020, 15:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಆರ್ಥಿಕ ಚೇತರಿಕೆಯ ಉದ್ದೇಶದ ಹೊಸ ಕ್ರಮಗಳಿಂದಾಗಿ ಹಾಗೂ ಅಮೆರಿಕದ ಡಾಲರ್‌ ದುರ್ಬಲವಾಗಿರುವ ಕಾರಣ 2021ರಲ್ಲಿ ಚಿನ್ನದ ದರ 10 ಗ್ರಾಂಗೆ ₹ 63 ಸಾವಿರದವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅನಿಶ್ಚಿತ ಸಂದರ್ಭಗಳಲ್ಲಿ ಹೂಡಿಕೆಗೆ ಸುರಕ್ಷಿತ ಮಾರ್ಗವಾಗಿ ಚಿನ್ನವನ್ನು ಪರಿಗಣಿಸಲಾಗುತ್ತದೆ. 2020ರಲ್ಲಿ ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಉಂಟಾದ ಆರ್ಥಿಕ ಮತ್ತು ಸಾಮಾಜಿಕ ಅನಿಶ್ಚಿತ ಸ್ಥಿತಿಯು ಚಿನ್ನದ ಮೇಲಿನ ಹೂಡಿಕೆಯನ್ನು ಹೆಚ್ಚಿಸಿತು. ಪರಿಣಾಮ, ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ನಲ್ಲಿ (ಎಂಸಿಎಕ್ಸ್‌) ಚಿನ್ನದ ದರ 10 ಗ್ರಾಂಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹ 56,191ಕ್ಕೆ ತಲುಪಿತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಆಗಸ್ಟ್‌ನಲ್ಲಿ ಒಂದು ಔನ್ಸ್‌ಗೆ 2,075 ಡಾಲರ್‌ಗಳಿಗೆ ತಲುಪಿತು.

ಜಾಗತಿಕ ಹಣಕಾಸು ನೀತಿಗಳಿಂದಾಗಿ ಬಡ್ಡಿದರ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿತು. ಇದರಿಂದಾಗಿ ನಗದು ಲಭ್ಯತೆಯೂ ಹೆಚ್ಚಾಯಿತು. ಇದು ಪ್ರಮುಖ ಕರೆನ್ಸಿಗಳ ಎದುರು ಚಿನ್ನದ ದರ ಏರಿಕೆ ಕಾಣುವಂತೆ ಮಾಡಿತು. ಆ ಮೂಲಕ ಹೂಡಿಕೆದಾರರನ್ನು ಆಕರ್ಷಿಸಿತು.

ADVERTISEMENT

ಆರ್ಥಿಕ ಉತ್ತೇಜನ ಕೊಡುಗೆಗಳಿಂದಾಗಿ ಡಾಲರ್‌ ದುರ್ಬಲಗೊಳ್ಳಲಿದೆ. ಚಿನ್ನದ ದರವು ಮತ್ತೊಮ್ಮೆ ಏರಿಕೆ ಕಾಣಲು ಇದು ನೆರವಾಗಲಿದೆ. ಭಾರಿ ಪ್ರಮಾಣದ ಉತ್ತೇಜನ ಕೊಡುಗೆಗಳಿಂದಾಗಿಯೂ 2021ರಲ್ಲಿ ಚಿನ್ನವು ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಕಾಮ್‌ಟ್ರೆಂಡ್ಸ್‌ ರಿಸ್ಕ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್‌ನ ಸಿಇಒ ಗುಣಶೇಖರ್‌ ತ್ಯಾಗರಾಜನ್‌ ಹೇಳಿದ್ದಾರೆ.

ಅಮೆರಿಕದಲ್ಲಿನ ರಾಜಕೀಯ ಬೆಳವಣಿಗೆಗಳು ಸಹ ಚಿನ್ನದ ದರ ಏರಿಕೆಗೆ ಕಾರಣವಾಗಬಹುದು. ಸೆನೆಟ್‌ನಲ್ಲಿ ಕಡಿಮೆ ಬಹುಮತದಿಂದಾಗಿ ಜೋ ಬೈಡೆನ್‌ ನೇತೃತ್ವದ ಆಡಳಿತಕ್ಕೆ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಲು ಕಷ್ಟವಾಗಬಹುದು. ಇದರಿಂದ ಚಿನ್ನದ ದರ ಏರಿಕೆ ಆಗಬಹುದು ಎಂದು ಅವರು ಹೇಳಿದ್ದಾರೆ.

2021ರಲ್ಲಿ ಚಿನ್ನದ ದರ ಏರುಮುಖವಾಗಿಯೇ ಇರಲಿದೆ. ಎಂಸಿಎಕ್ಸ್‌ನಲ್ಲಿ ₹ 57 ಸಾವಿರದಿಂದ ₹ 63 ಸಾವಿರದ ಆಸುಪಾಸಿನಲ್ಲಿ ಇರಲಿದೆ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಹಿರಿಯ ವಿಶ್ಲೇಷಕ ತಪನ್‌ ಪಟೇಲ್‌ ಹೇಳಿದ್ದಾರೆ.

ಚಿನ್ನದ ದರ ಏರಿಕೆಗೆ ಕಾರಣಗಳು

* ಕೇಂದ್ರೀಯ ಬ್ಯಾಂಕ್‌ಗಳು ಬಡ್ಡಿದರವನ್ನು ಕೆಳ ಮಟ್ಟದಲ್ಲಿ ಇರಿಸಿರುವುದು

* ಡಾಲರ್‌ ದುರ್ಬಲವಾಗಲಿರುವುದು

* ಆರ್ಥಿಕ ಉತ್ತೇಜನ ಕ್ರಮಗಳಿಂದ ನಗದು ಲಭ್ಯತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.