ಸಾಂಕೇತಿಕ ಚಿತ್ರ
ನವದೆಹಲಿ: 2024–25ನೇ ಆರ್ಥಿಕ ವರ್ಷದಲ್ಲಿ ದೇಶದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಶೇ 6.4ರಷ್ಟು ಪ್ರಗತಿ ಕಾಣುವ ನಿರೀಕ್ಷೆಯಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಅಂದಾಜಿಸಿದೆ. ಇದು ನಾಲ್ಕು ವರ್ಷಗಳಲ್ಲಿನ ಅತ್ಯಂತ ನಿಧಾನಗತಿಯ ಬೆಳವಣಿಗೆ ದರವಾಗಿದೆ.
ತಯಾರಿಕಾ ಮತ್ತು ಸೇವಾ ವಲಯದ ಬೆಳವಣಿಗೆ ಕುಸಿತವೇ ಜಿಡಿಪಿ ಇಳಿಕೆಗೆ ಕಾರಣ ಎಂದು ಮಂಗಳವಾರ ಬಿಡುಗಡೆಯಾಗಿರುವ ಮೊದಲ ಅಂದಾಜು ವರದಿ ತಿಳಿಸಿದೆ.
2020–21ನೇ ಆರ್ಥಿಕ ವರ್ಷದ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಜಿಡಿಪಿ ಬೆಳವಣಿಗೆಯು ಶೇ 5.8ರಷ್ಟು ಕಡಿಮೆ ದಾಖಲಾಗಿತ್ತು. ಆ ನಂತರದ ಆರ್ಥಿಕ ವರ್ಷಗಳಲ್ಲಿ ಚೇತರಿಕೆಯ ಹಳಿಗೆ ಮರಳಿತ್ತು. 2021–22ರಲ್ಲಿ ಶೇ 9.7, 2022–23ರಲ್ಲಿ ಶೇ 7 ಹಾಗೂ 2023–24ರಲ್ಲಿ ಶೇ 8.2ರಷ್ಟು ದಾಖಲಾಗಿತ್ತು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ 2024–25ರ ಜಿಡಿಪಿ ಮುನ್ನೋಟವನ್ನು ಪರಿಷ್ಕರಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಶೇ 6.6ರಷ್ಟು ಬೆಳವಣಿಗೆ ಕಾಣಲಿದೆ ಎಂದು ಅಂದಾಜಿಸಿದೆ. ಕೇಂದ್ರ ಹಣಕಾಸು ಸಚಿವಾಲಯವು ಶೇ 6.5ರಿಂದ ಶೇ 7ರಷ್ಟು ಪ್ರಗತಿ ಕಾಣಲಿದೆ ಎಂದು ಹೇಳಿದೆ. ಆದರೆ, ಸಾಂಖ್ಯಿಕ ಕಚೇರಿಯ ಅಂದಾಜು, ಆರ್‌ಬಿಐ ಹಾಗೂ ಹಣಕಾಸು ಸಚಿವಾಲಯದ ಅಂದಾಜಿಗಿಂತಲೂ ಕಡಿಮೆಯಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫೆಬ್ರುವರಿ 1ರಂದು 2025–26ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಸಿದ್ಧಪಡಿಸುವಿಕೆಗೆ ಈ ಅಂದಾಜನ್ನು ಬಳಸಿಕೊಳ್ಳಲಾಗುತ್ತದೆ.
ಕಳೆದ ಆರ್ಥಿಕ ವರ್ಷದಲ್ಲಿ ತಯಾರಿಕಾ ವಲಯವು ಶೇ 9.9ರಷ್ಟು ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ 5.5ಕ್ಕೆ ಇಳಿಕೆಯಾಗಲಿದೆ. ವ್ಯಾಪಾರ ಹೋಟೆಲ್ ಸಾರಿಗೆ ಮತ್ತು ಸಂವಹನ ವಿಭಾಗವನ್ನು ಒಳಗೊಂಡ ಸೇವಾ ವಲಯವು ಶೇ 6.4ರಿಂದ ಶೇ 5.8ರಷ್ಟು ಪ್ರಗತಿ ಸಾಧಿಸಲಿದೆ ಎಂದು ವರದಿ ಹೇಳಿದೆ.
2023–24ರಲ್ಲಿ ಶೇ 1.4ರಷ್ಟು ಇಳಿಕೆ ದಾಖಲಿಸಿದ್ದ ಕೃಷಿ ವಲಯದ ಬೆಳವಣಿಗೆಯು ಶೇ 3.8ರಷ್ಟು ಪ್ರಗತಿ ಸಾಧಿಸಲಿದೆ ಎಂದು ಹೇಳಿದೆ. 2024–25ನೇ ಆರ್ಥಿಕ ವರ್ಷದಲ್ಲಿ ಜಿಡಿಪಿ ಗಾತ್ರ 325.96 ಲಕ್ಷ ಕೋಟಿ ಆಗಿದೆ (3.8 ಟ್ರಿಲಿಯನ್ ಅಮೆರಿಕನ್ ಡಾಲರ್)
ಮುಂದಿನ ಆರ್ಥಿಕ ವರ್ಷವನ್ನು ಅದರ ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಲು ಜಿಡಿಪಿಯನ್ನು ಮಾರುಕಟ್ಟೆ ಬೆಲೆಗಳಲ್ಲಿ ಲೆಕ್ಕ ಹಾಕುವುದಕ್ಕೆ ಸಾಂಕೇತಿಕ (ನಾಮಿನಲ್) ಜಿಡಿಪಿ ಎಂದು ಕರೆಯಲಾಗುತ್ತದೆ. 2023–24ರಲ್ಲಿ ಶೇ 9.6ರಷ್ಟಿದ್ದ ಈ ಬೆಳವಣಿಗೆ ದರವು 2024–25ರಲ್ಲಿ ಶೇ 9.7ರಷ್ಟು ಇರಲಿದೆ ಎಂದು ವಿವರಿಸಿದೆ. ಸಾಮಾನ್ಯವಾಗಿ ಬೆಲೆಗಳು ಏರುತ್ತಿರುವುದರಿಂದ ಸಾಂಕೇತಿಕ ಜಿಡಿಪಿ ಆಧರಿತ ಬೆಳವಣಿಗೆ ದರವು ಗಣನೀಯವಾಗಿ ಹೆಚ್ಚಳವಾಗುತ್ತದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಸಾಂಕೇತಿಕ ಜಿಡಿಪಿ ಗಾತ್ರ 295.36 ಲಕ್ಷ ಕೋಟಿ ಇದ್ದರೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇದರ ಗಾತ್ರ ₹324.11 ಲಕ್ಷ ಕೋಟಿ ಆಗಿದೆ ಎಂದು ಹೇಳಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉತ್ಪಾದನೆಯಾದ ಸರಕು ಮತ್ತು ಸೇವೆಗಳ ಒಟ್ಟಾರೆ ಮೌಲ್ಯ ಸೇರ್ಪಡೆಯು (ಜಿವಿಎ) ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ 9.3ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.