ADVERTISEMENT

‘ನೆಕ್ಸಾನ್‌ ಇವಿ’ಗೆ ಬೆಂಕಿ: ವಿಚಾರಣೆಗೆ ಸರ್ಕಾರ ಆದೇಶ

ಪಿಟಿಐ
Published 23 ಜೂನ್ 2022, 15:50 IST
Last Updated 23 ಜೂನ್ 2022, 15:50 IST

ನವದೆಹಲಿ: ನೆಕ್ಸಾನ್ ವಿದ್ಯುತ್ ಚಾಲಿತ (ಇ.ವಿ.) ಕಾರಿಗೆ ಮುಂಬೈನಲ್ಲಿ ಬೆಂಕಿ ಹೊತ್ತಿಕೊಂಡ ಪ್ರಕರಣದ ಕುರಿತು ಸ್ವತಂತ್ರ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯಾವ ಕಾರಣದಿಂದಾಗಿ ಬೆಂಕಿ ಹೊತ್ತಿಕೊಂಡಿತು ಹಾಗೂ ಮುಂದೆ ಹೀಗಾಗದಂತೆ ನೋಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿಸುವಂತೆ ವಿಚಾರಣಾ ತಂಡಕ್ಕೆ ಹೇಳಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯೂ (ಐಐಎಸ್‌ಸಿ) ವಿಚಾರಣೆಯಲ್ಲಿ ಭಾಗಿಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಬೆಂಕಿ ಹೊತ್ತಿಕೊಂಡ ಪ್ರಕರಣ ಕುರಿತು ವಿಸ್ತೃತ ತನಿಖೆ ನಡೆಸುತ್ತಿರುವುದಾಗಿ ಟಾಟಾ ಮೋಟರ್ಸ್ ಹೇಳಿದೆ. ನೆಕ್ಸಾನ್ ಕಾರಿಗೆ ಬೆಂಕಿ ಹೊತ್ತಿಕೊಂಡ ದೃಶ್ಯವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಲವರು ಹಂಚಿಕೊಂಡಿದ್ದಾರೆ.

ADVERTISEMENT

ತನಿಖೆ ಪೂರ್ಣಗೊಂಡ ನಂತರದಲ್ಲಿ ವಿಸ್ತೃತ ಪ್ರತಿಕ್ರಿಯೆ ನೀಡಲಾಗುವುದು ಎಂದೂ ಕಂಪನಿ ಹೇಳಿದೆ. ‘30 ಸಾವಿರಕ್ಕೂ ಹೆಚ್ಚಿನ ವಿದ್ಯುತ್ ಚಾಲಿತ ವಾಹನಗಳು ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 10 ಕೋಟಿಗೂ ಹೆಚ್ಚು ಕಿಲೋ ಮೀಟರ್ ಕ್ರಮಿಸಿವೆ. ಆದರೆ ಈ ರೀತಿ ಆಗುತ್ತಿರುವುದು ಇದೇ ಮೊದಲು’ ಎಂದು ಅದು ಹೇಳಿದೆ. ಇ.ವಿ. ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಂಡ ಹಲವು ಪ್ರಕರಣಗಳು ಈ ಹಿಂದೆ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.