ADVERTISEMENT

ಥರ್ಡ್‌ ಪಾರ್ಟಿ ವಿಮಾ ಕಂತು ಹೆಚ್ಚಳ: ಪ್ರಸ್ತಾವ

ಪಿಟಿಐ
Published 6 ಮಾರ್ಚ್ 2022, 16:35 IST
Last Updated 6 ಮಾರ್ಚ್ 2022, 16:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಾರ್‌, ದ್ವಿಚಕ್ರ ವಾಹನ ಮತ್ತು ಸಾರಿಗೆ ವಾಹನಗಳ ಥರ್ಡ್‌ಪಾರ್ಟಿ (ಟಿಪಿ) ವಿಮೆಯ ಕಂತು ಹೆಚ್ಚಿಸಲು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಪ್ರಸ್ತಾಪಿಸಿದೆ. ಇದರಿಂದಾಗಿ ಏಪ್ರಿಲ್‌ 1 ರಿಂದ ಕಾರು ಮತ್ತು ದ್ವಿಚಕ್ರವಾಹನಗಳ ವಿಮಾ ಮೊತ್ತವು ಹೆಚ್ಚಾಗುವ ಸಾಧ್ಯತೆ ಇದೆ.

ಇದೇ ಮೊದಲ ಬಾರಿಗೆ ರಸ್ತೆ ಸಾರಿಗೆ ಸಚಿವಾಲಯವು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದೊಂದಿಗೆ (ಐಆರ್‌ಡಿಎಐ) ಸಮಾಲೋಚನೆ ನಡೆಸಿ ಥರ್ಡ್‌ ಪಾರ್ಟಿ ವಿಮೆ ಮೊತ್ತವನ್ನು ನಿರ್ಧರಿಸಲಿದೆ. ಸದ್ಯ, ವಿಮೆ ಕಂತು ಹೆಚ್ಚಳದ ನಿರ್ಧಾರವನ್ನುಐಆರ್‌ಡಿಎಐ ತೆಗೆದುಕೊಳ್ಳುತ್ತಿದೆ.

ಸಚಿವಾಲಯ ಹೊರಡಿಸಿರುವ ಕರಡು ಅಧಿಸೂಚನೆಯ ಪ್ರಕಾರ, 1000 ಸಿಸಿಯ ಕಾರಿನ ಥರ್ಡ್‌ಪಾರ್ಟಿ ವಿಮೆಯ ಬೆಲೆಯು 2019–20ರಲ್ಲಿ ₹ 2,072 ರಷ್ಟು ಇದ್ದಿದ್ದು, ₹ 2,094 ಕ್ಕೆ ಹೆಚ್ಚಳ ಆಗಲಿದೆ. 1000 ಸಿಸಿಯಿಂದ 1,500ಸಿಸಿ ಒಳಗಿನ ಕಾರುಗಳಿಗೆ ₹ 3,221 ರಿಂದ ₹ 3,416ಕ್ಕೆ ಏರಿಕೆ ಆಗಲಿದೆ.

ADVERTISEMENT

ಅಂತೆಯೇ 150 ಸಿಸಿಗೂ ಹೆಚ್ಚಿನ ಸಾಮರ್ಥ್ಯದ ದ್ವಿಚಕ್ರ ವಾಹನಗಳ ವಿಮಾ ಮೊತ್ತವು ₹1,366ರಷ್ಟು ಹಾಗೂ 350ಸಿಸಿಗೂ ಹೆಚ್ಚಿನ ಸಾಮರ್ಥ್ಯದ ದ್ಚಿಚಕ್ರ ವಾಹನಗಳ ವಿಮಾ ಮೊತ್ತವು ₹ 2,804ರಷ್ಟು ಆಗಲಿದೆ.

ವಿದ್ಯುತ್ ಚಾಲಿತ ಕಾರು, ದ್ವಿಚಕ್ರ ವಾಹನ, ಸರಕು ಮತ್ತು ಪ್ರಯಾಣಿಕರನ್ನು ಸಾಗಿಸುವ ವಾಹನಗಳಿಗೆ ಶೇ 15ರಷ್ಟು ರಿಯಾಯಿತಿ ನೀಡಲು ಪ್ರಸ್ತಾಪಿಸಲಾಗಿದೆ. 30ಕಿಲೋ ವಾಟ್‌ ಒಳಗಿನ ವಿದ್ಯುತ್ ಚಾಲಿತ ಕಾರಿನ ವಿಮಾ ಮೊತ್ತವು ₹ 1,780ರಷ್ಟು ಹಾಗೂ 30 ಕಿಲೋ ವಾಟ್‌ಗಿಂತ ಹೆಚ್ಚು ಮತ್ತು 60 ಕಿಲೋವಾಟ್‌ಗಿಂತ ಕಡಿಮೆಯದ್ದಕ್ಕೆ ವಿಮಾ ಕಂತು ಮೊತ್ತ ₹ 2,904 ನಿಗದಿಪಡಿಸಲಾಗಿದೆ. ಮಾರ್ಚ್ ಅಂತ್ಯದೊಳಗೆ ಕರಡು ಅಧಿಸೂಚನೆಯ ಕುರಿತು ಸಲಹೆಗಳನ್ನು ನೀಡುವಂತೆ ಸಚಿವಾಲಯ ಆಹ್ವಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.