ನವದೆಹಲಿ: ಕೇಂದ್ರ ಸರ್ಕಾರವು 5ನೇ ಸಮುದ್ರ ಮೀನುಗಾರಿಕೆ ಗಣತಿಗೆ ಚಾಲನೆ ನೀಡಿದೆ. ಈ ಬಾರಿ ಮೊಬೈಲ್ ಆ್ಯಪ್ ಮೂಲಕ ದೇಶದಲ್ಲಿರುವ 12 ಲಕ್ಷ ಮೀನುಗಾರರ ಕುಟುಂಬಗಳ ದತ್ತಾಂಶ ಸಂಗ್ರಹಿಸಲು ನಿರ್ಧರಿಸಿದೆ.
ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯು (ಸಿಎಂಎಫ್‌ಆರ್‌ಐ) ನೋಡಲ್ ಏಜೆನ್ಸಿಯಾಗಿದೆ. ಕರಾವಳಿ ತೀರ ಪ್ರದೇಶ ಹೊಂದಿರುವ ಒಂಬತ್ತು ರಾಜ್ಯಗಳಲ್ಲಿ ಗಣತಿ ನಡೆಯಲಿದೆ. ಪ್ರಸಕ್ತ ವರ್ಷದ ಡಿಸೆಂಬರ್ ಅಂತ್ಯದೊಳಗೆ ಗಣತಿ ಕಾರ್ಯ ಪೂರ್ಣಗೊಳ್ಳಲಿದೆ.
ಐಸಿಎಆರ್–ಸಿಎಂಎಫ್‌ಆರ್‌ಐನಿಂದ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಪರಿಣಾಕಾರಿ ಮತ್ತು ಪಾರದರ್ಶಕವಾಗಿ ದತ್ತಾಂಶ ಸಂಗ್ರಹಿಸಲು ಇದರಿಂದ ನೆರವಾಗಲಿದೆ ಎಂದು ತಿಳಿಸಿದೆ.
ಮೇ ಮತ್ತು ಜೂನ್‌ನಲ್ಲಿ ಮೀನುಗಾರರ ಕುಟುಂಬಗಳು ವಾಸಿಸುವ ಗ್ರಾಮಗಳ ಗಣತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಬಳಿಕ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕುಟುಂಬಗಳ ದತ್ತಾಂಶ ಸಂಗ್ರಹಿಸಲಾಗುವುದು ಎಂದು ತಿಳಿಸಿದೆ.
ಭೌತಿಕ ರೂಪದಲ್ಲಿ ಮಾಹಿತಿ ಸಂಗ್ರಹದ ವೇಳೆ ಆಗುವ ಲೋಪದೋಷ ತಪ್ಪಿಸಲು ಆ್ಯಪ್ ಅನ್ನು ವಿನ್ಯಾಸಗೊಳಿಸಲಾಗಿದೆ. ದೇಶದಲ್ಲಿ ಮೀನುಗಾರರ ಕುಟುಂಬಗಳಿಗೆ ಅಗತ್ಯವಿರುವ ಯೋಜನೆ ರೂಪಿಸಲು ಮತ್ತು ಅಗತ್ಯ ಸೌಲಭ್ಯ ಕಲ್ಪಿಸಲು ಈ ಗಣತಿ ನೆರವಾಗಲಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.