ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯ ಅಡಿಯಲ್ಲಿ ಸಂಗ್ರಹ ಆಗಿರುವ ತೆರಿಗೆ ಮೊತ್ತವು ಡಿಸೆಂಬರ್‌ನಲ್ಲಿ ದಾಖಲೆಯ ₹ 1.15 ಲಕ್ಷ ಕೋಟಿಗಳಿಗೆ ತಲುಪಿದೆ. ಈ ಮೊತ್ತವು ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಕಂಡುಬಂದ ಬೇಡಿಕೆ ಹೆಚ್ಚಳವನ್ನು ಪ್ರತಿಫಲಿಸುತ್ತಿದೆ.
2017ರ ಜುಲೈ 1ರಂದು ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರ ಆಗಿರುವ ಅತಿ ಹೆಚ್ಚಿನ ತೆರಿಗೆ ಸಂಗ್ರಹ ಇದು ಎಂದು ಕೇಂದ್ರ ಹಣಕಾಸು ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.
‘ಮಾಸಿಕ ಆದಾಯ ಸಂಗ್ರಹದಲ್ಲಿ ಕಳೆದ 21 ತಿಂಗಳಲ್ಲಿ ಆಗಿರುವ ದೊಡ್ಡ ಹೆಚ್ಚಳ ಇದು. ಆರ್ಥಿಕತೆಯಲ್ಲಿ ಕಂಡುಬಂದಿರುವ ವೇಗದ ಚೇತರಿಕೆ ಹಾಗೂ ಜಿಎಸ್‌ಟಿ ತೆರಿಗೆ ವಂಚನೆ ಮಾಡುವವರ ವಿರುದ್ಧ ದೇಶದಾದ್ಯಂತ ನಡೆಸಿದ ಅಭಿಯಾನದ ಪರಿಣಾಮ ಇದು’ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಡಿಸೆಂಬರ್ ತಿಂಗಳಿನಲ್ಲಿ ₹ 1 ಲಕ್ಷ ಕೋಟಿಗಿಂತ ಹೆಚ್ಚು ತೆರಿಗೆ ಸಂಗ್ರಹವಾಗುವ ಮೂಲಕ, ಸತತ ಮೂರು ತಿಂಗಳುಗಳಿಂದ ₹ 1 ಲಕ್ಷ ಕೋಟಿಗಿಂತ ಹೆಚ್ಚು ತೆರಿಗೆಯು ಜಿಎಸ್‌ಟಿ ವ್ಯವಸ್ಥೆಯಡಿ ಸಂಗ್ರಹ ಆದಂತಾಗಿದೆ. ಕಳೆದ ವರ್ಷದ ಡಿಸೆಂಬರ್‌ಲ್ಲಿ ಒಟ್ಟು ₹ 1.03 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗಿತ್ತು. ಆ ಮೊತ್ತಕ್ಕೆ ಹೋಲಿಸಿದರೆ ಈ ಬಾರಿ, ಶೇಕಡ 12ರಷ್ಟು ಹೆಚ್ಚು ಮೊತ್ತ ಸಂಗ್ರಹವಾದಂತೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.