ನವದೆಹಲಿ: ಹೇರ್ ಆಯಿಲ್‌ನಿಂದ ಸೇರಿದಂತೆ ಕಾರ್ನ್‌ಫ್ಲೇಕ್ಸ್, ಟಿವಿ ಸೆಟ್‌ಗಳಿಂದ ಹಿಡಿದು ಆರೋಗ್ಯ ಮತ್ತು ಜೀವ ವಿಮೆ ಪಾಲಿಸಿ ವರೆಗಿನ ಸಾಮಾನ್ಯ ಜನರು ಬಳಸುವ ವಸ್ತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರಗಳನ್ನು ಪರಿಷ್ಕರಿಸುವ ಮಹತ್ವದ ನಿರ್ಧಾರವನ್ನು ಜಿಎಸ್‌ಟಿ ಮಂಡಳಿ ಬುಧವಾರ ತೆಗೆದುಕೊಂಡಿದೆ.
ಅವಧಿ ವಿಮೆ, ಯುಲಿಪ್ ಅಥವಾ ಎಂಡೋಮೆಂಟ್ ಪಾಲಿಸಿ ಸೇರಿ ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಮ್‌ಗೆ ಜಿಎಸ್‌ಟಿಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಹೆಚ್ಚು ಜನರಿಗೆ ವಿಮಾ ಸೌಲಭ್ಯ ತಲುಪಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳು, ಹಿರಿಯ ನಾಗರಿಕರ ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಂಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. 2017ರಲ್ಲಿ ಈ ತೆರಿಗೆ ವ್ಯವಸ್ಥೆ ಜಾರಿಗೆ ಬಂದಾಗಿನಿಂದ ಈ ವಿಮಾ ಉತ್ಪನ್ನಗಳ ಪ್ರೀಮಿಯಂ ಮೇಲೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿತ್ತು.
ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಈಗ ಇರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ತಗ್ಗಿಸುವ ಪ್ರಸ್ತಾವಕ್ಕೆ ಮಂಡಳಿಯು ಒಪ್ಪಿಗೆ ನೀಡಿದೆ.
ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ. ಈ ಮೂಲಕ ದೇಶದ ಜನರಿಗೆ ಕೇಂದ್ರ ಸರ್ಕಾರ ದಸರಾ ಭರ್ಜರಿ ಉಡುಗೊರೆ ನೀಡಿದೆ.
ಮಂಡಳಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್,‘ಜಿಎಸ್‌ಟಿ ದರ ಪರಿಷ್ಕರಣೆ ಕುರಿತಂತೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. ಯಾವ ರಾಜ್ಯವೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ’ ಎಂದರು.
‘ಪ್ರಸ್ತುತ ಶೇ 5, 12, 18 ಹಾಗೂ ಶೇ 28ರಂತೆ ತೆರಿಗೆ ಹಂತಗಳಿವೆ. ಇವುಗಳನ್ನು ಪರಿಷ್ಕರಿಸಿ, ಕೇವಲ ಶೇ 5 ಹಾಗೂ ಶೇ 18ರಂತೆ ಎರಡು ಹಂತಗಳ ಜಿಎಸ್‌ಟಿ ವ್ಯವಸ್ಥೆ ಜಾರಿಗೊಳಿಸಲಾಗುವುದು. ಹೈಎಂಡ್ ಕಾರುಗಳು, ತಂಬಾಕು ಹಾಗೂ ಸಿಗರೇಟ್‌ಗಳು ಸೇರಿ ಕೆಲ ಐಷಾರಾಮಿ ವಸ್ತುಗಳ ಮೇಲೆ ವಿಶೇಷ ಶೇ 40ರಷ್ಟು ಜಿಎಸ್‌ಟಿ ವಿಧಿಸಲು ಮಂಡಳಿ ಅನುಮೋದಿಸಿದೆ’ ಎಂದು ವಿವರಿಸಿದರು.
‘ಗುಟ್ಕಾ, ತಂಬಾಕು ಮತ್ತು ತಂಬಾಕು ಉತ್ಪನ್ನಗಳು ಹಾಗೂ ಸಿಗರೇಟ್ ಹೊರತುಪಡಿಸಿ, ಉಳಿದ ಎಲ್ಲ ವಸ್ತುಗಳ ಮೇಲಿನ ಹೊಸ ದರಗಳು ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿವೆ’ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ಜಿಎಸ್‌ಟಿ ವ್ಯವಸ್ಥೆಯ ಸರಳೀಕರಣ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಅಂಗವಾಗಿ ಮಾಡಿದ ಭಾಷಣದಲ್ಲಿ ಘೋಷಿಸಿದ್ದರು. ಅಲ್ಲದೇ, ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿರುವ ಸಂದರ್ಭದಲ್ಲಿಯೇ ಈ ಜಿಎಸ್‌ಟಿ ವ್ಯವಸ್ಥೆಯಲ್ಲಿ ಸುಧಾರಣೆ ತಂದಿರುವುದು ಗಮನಾರ್ಹ.
ದಿನನಿತ್ಯದ ಬಳಕೆಯ ಆಹಾರ ಪದಾರ್ಥಗಳ ಮೇಲೆ ಯಾವುದೇ ಜಿಎಸ್‌ಟಿ ಇಲ್ಲ.
ಬೆಣ್ಣೆ ತುಪ್ಪ ಒಣಹಣ್ಣುಗಳು ಸಾಂದ್ರೀಕರಿಸಿದ ಹಾಲು ಸಾಸುಯೇಜ್ ಮಾಂಸ ಸಕ್ಕರೆ ಮಿಠಾಯಿಗಳು ಜಾಮ್ ಹಣ್ಣಿನ ಜೆಲ್ಲಿಗಳು ಎಳನೀರು ಕರಿದ ಪದಾರ್ಥಗಳು 20 ಲೀ. ಬಾಟಲುಗಳಲ್ಲಿ ಸಂಗ್ರಹಿಸಿರುವ ಕುಡಿಯುವ ನೀರು ಹಣ್ಣಿನ ತಿರುಳು ಅಥವಾ ಹಣ್ಣಿನ ರಸ ಐಸ್‌ಕ್ರೀಂ ಪೇಸ್ಟ್ರಿ ಬಿಸ್ಕತ್ತುಗಳು ಕಾರ್ನ್‌ಫ್ಲೇಕ್ಸ್‌ಗಳ ಮೇಲೆ ಈಗಿರುವ ಶೇ 18ರಷ್ಟು ಜಿಎಸ್‌ಟಿಯನ್ನು ಶೇ 5ಕ್ಕೆ ಇಳಿಸಲಾಗುತ್ತದೆ
ಎಲ್ಲ ಬಗೆಯ ಚಪಾತಿ ಮತ್ತ ಪರಾಠಗಳಿಗೆ ಯಾವುದೇ ತೆರಿಗೆ ಇಲ್ಲ. ಈ ಮೊದಲು ಇವುಗಳ ಮೇಲೆ ಶೇ 5ರಷ್ಟು ತೆರಿಗೆ ಇತ್ತು
ಟೂತ್‌ಪೌಡರ್ ಹಾಲುಣಿಸಲು ಬಳಸುವ ಬಾಟಲ್‌ಗಳು ಅಡುಗೆ ಮನೆ ಸಲಕರಣೆಗಳು ಬಂಬೂವಿನಿಂದ ತಯಾರಿಸಿದ ಫರ್ನಿಚರ್ ಹಣಿಗೆಗಳ ಮೇಲಿನ ಶೇ 12ರ ತೆರಿಗೆಯನ್ನು ಶೇ 5ಕ್ಕೆ ಇಳಿಸಲಾಗುತ್ತದೆ
ಶಾಂಪೂ ಟಾಲ್ಕಮ್ ಪೌಡರ್ ಟೂತ್‌ಪೇಸ್ಟ್ ಟೂತ್‌ಬ್ರಶ್ ಫೇಸ್ ಪೌಡರ್ ಸೋಪು ಹೇರ್ ಆಯಿಲ್ ಮೇಲೆ ಶೇ 18ರ ಬದಲು ಶೇ 5ರಷ್ಟು ತೆರಿಗೆ ವಿಧಿಸಲಾಗುವುದು
ಸಿಮೆಂಟ್‌ಗೆ ಈಗಿನ ಶೇ 28ರ ಬದಲು ಶೇ 18ರಷ್ಟು ತೆರಿಗೆ
1200 ಸಿ.ಸಿಗಿಂತ ಕಡಿಮೆ ಸಾಮರ್ಥ್ಯದ ಹಾಗೂ 4 ಸಾವಿರ ಎಂ.ಎಂಗಿಂತ ಹೆಚ್ಚು ಉದ್ದ ಇರದ ಪೆಟ್ರೋಲ್ ಎಲ್‌ಪಿಜಿ ಹಾಗೂ ಸಿಎನ್‌ಜಿ ವಾಹನಗಳ ಮೇಲಿನ ಶೇ 28ರಷ್ಟು ತೆರಿಗೆ ಶೇ18ಕ್ಕೆ ಇಳಿಕೆ
1500 ಸಿ.ಸಿ ವರೆಗಿನ ಹಾಗೂ 4 ಸಾವಿರ ಎಂ.ಎಂ ಉದ್ದದ ಡಿಸೇಲ್ ವಾಹನಗಳಿಗೂ ಶೇ 18ರಷ್ಟು ತೆರಿಗೆ. ಸದ್ಯ ಇವುಗಳ ಮೇಲೆಯೂ ಶೇ 28ರಷ್ಟು ತೆರಿಗೆ ಇದೆ
1200 ಸಿ.ಸಿ ಗಿಂತ ಹೆಚ್ಚು ಸಾಮರ್ಥ್ಯದ ಪೆಟ್ರೋಲ್ ಕಾರುಗಳು 1500 ಸಿ.ಸಿಗಿಂತ ಅಧಿಕ ಸಾಮರ್ಥ್ಯದ ಡಿಸೇಲ್ ಕಾರುಗಳಿಗೆ ಶೇ 40ರಷ್ಟು ತೆರಿಗೆ
350 ಸಿ.ಸಿ ವರೆಗಿನ ಮೋಟರ್‌ಸೈಕಲ್‌ಗಳು ಏರ್ ಕಂಡಿಷನರ್‌ಗಳು ಡಿಷ್ ವಾಶರ್‌ಗಳು ಟಿ.ವಿ ಸೇರಿದಂತೆ ಗ್ರಾಹಕ ಬಳಕೆಯ ಎಲೆಕ್ಟ್ರಾನಿಕ್ಸ್ ಸರಕುಗಳ ಮೇಲಿನ ಶೇ 28ರಷ್ಟು ತೆರಿಗೆಯನ್ನು ಶೇ18ಕ್ಕೆ ಇಳಿಸಲಾಗುವುದು
1200 ಸಿ.ಸಿಗಿಂತ ಅಧಿಕ ಸಾಮರ್ಥ್ಯದ ಹಾಗೂ 4 ಸಾವಿರ ಎಂ.ಎಂ ಉದ್ದದ ಎಲ್ಲ ಆಟೊಮೊಬೈಲ್‌ಗಳು 350 ಸಿ.ಸಿಗಿಂತ ಹೆಚ್ಚು ಸಾಮರ್ಥ್ಯದ ಮೋಟರ್ ಸೈಕಲ್‌ಗಳು ಯಾಚ್‌ಗಳು ವೈಯಕ್ತಿಕ ಬಳಕೆಯ ಏರ್‌ಕ್ರಾಫ್ಟ್‌ಗಳು ರೇಸಿಂಗ್ ಕಾರುಗಳ ಮೇಲೆ ಶೇ 40ರಷ್ಟು ತೆರಿಗೆ
ಎಲ್ಲ ಇ.ವಿಗಳ ಮೇಲೆ ಈಗ ಇರುವ ಶೇ 5ರಷ್ಟು ಜಿಎಸ್‌ಟಿ ಮುಂದುವರಿಕೆ
ಜಿಎಸ್‌ಟಿ ಕಡಿತದ ಲಾಭ ಸಾಮಾನ್ಯ ವ್ಯಕ್ತಿಗೂ ಸಿಗುವಂತೆ ವಿಮಾ ಕಂಪನಿಗಳು ಕ್ರಮ ತೆಗೆದುಕೊಳ್ಳಬೇಕು. ವಿಮೆ ಕೈಗೆಟುಕುವಂತೆ ಮಾಡಿ ಹೆಚ್ಚು ಜನರಿಗೆ ತಲುಪಿಸಬೇಕು–ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.