ನವದೆಹಲಿ: ನಿತ್ಯ ಬಳಕೆಯ ಉತ್ಪನ್ನಗಳು, ಆಹಾರ ಉತ್ಪನ್ನಗಳು, ವಾಹನಗಳು ಸೇರಿದಂತೆ ಸರಿಸುಮಾರು 375 ಉತ್ಪನ್ನಗಳ ಬೆಲೆಯು ನವರಾತ್ರಿಯ ಮೊದಲ ದಿನವಾದ ಸೋಮವಾರದಿಂದ ಕಡಿಮೆ ಆಗಲಿವೆ.
ವಿವಿಧ ಉತ್ಪನ್ನಗಳು ಹಾಗೂ ಸೇವೆಗಳ ಮೇಲಿನ ತೆರಿಗೆ ಪ್ರಮಾಣವನ್ನು ಜಿಎಸ್‌ಟಿ ಮಂಡಳಿ ಪರಿಷ್ಕರಿಸಿದ್ದು, ಪರಿಷ್ಕೃತ ದರಗಳು ಸೋಮವಾರದಿಂದ ಜಾರಿಗೆ ಬರುತ್ತಿವೆ. ಇದರ ಪ್ರಯೋಜನವನ್ನು ಬಹುತೇಕ ಕಂಪನಿಗಳು ಗ್ರಾಹಕರಿಗೆ ವರ್ಗಾವಣೆ ಮಾಡಿವೆ.
ಇಷ್ಟು ವರ್ಷ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ನಾಲ್ಕು ತೆರಿಗೆ ಹಂತಗಳು (ಶೇ 5, 12, 18 ಮತ್ತು 28) ಇದ್ದವು. ಆದರೆ ಇನ್ನು ಮುಂದೆ ಜಿಎಸ್‌ಟಿ ವ್ಯವಸ್ಥೆಯ ಅಡಿಯಲ್ಲಿ ಎರಡು ತೆರಿಗೆ ಹಂತಗಳು (ಶೇ 5 ಮತ್ತು 18) ಇರಲಿವೆ. ಐಷಾರಾಮಿ ಉತ್ಪನ್ನಗಳು ಹಾಗೂ ತಂಬಾಕಿನ ಉತ್ಪನ್ನಗಳಿಗೆ ಶೇ 40ರಷ್ಟು ತೆರಿಗೆ ಇರಲಿದೆ. ಈ ಬದಲಾವಣೆಗಳ ಪರಿಣಾಮವಾಗಿ ದೇಶದ ಮಾರುಕಟ್ಟೆಯಲ್ಲಿ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳನ್ನು (ಎಫ್‌ಎಂಸಿಜಿ) ತಯಾರಿಸುವ ಕಂಪನಿಗಳು ಪರಿಷ್ಕೃತ ದರವನ್ನು ಪ್ರಕಟಿಸಿವೆ. ಸೋಪು, ಶಾಂಪೂ, ಟೂತ್‌ಪೇಸ್ಟ್ ಸೇರಿದಂತೆ ತಮ್ಮ ಹತ್ತು ಹಲವು ಉತ್ಪನ್ನಗಳ ಮೇಲೆ ಹೊಸ ಎಂಆರ್‌ಪಿ ನಮೂದಿಸಿವೆ.
ಕುರುಕಲು, ಕಾಫಿ ಮತ್ತು ಚಹಾ ಪುಡಿ, ಐಸ್‌ಕ್ರೀಂ, ಚಾಕೊಲೇಟ್ ಹಾಗೂ ಇತರ ಆಹಾರ ವಸ್ತುಗಳ ತಯಾರಿಕಾ ಕಂಪನಿಗಳು ಕೂಡ ತೆರಿಗೆ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿವೆ.
ಈ ಕಂಪನಿಗಳು ಪರಿಷ್ಕೃತ ಎಂಆರ್‌ಪಿ ಇರುವ ಉತ್ಪನ್ನಗಳನ್ನು ವಿತರಕರಿಗೆ, ಇ–ವಾಣಿಜ್ಯ ಕಂಪನಿಗಳ ಗೋದಾಮುಗಳಿಗೆ, ಸಾಂಪ್ರದಾಯಿಕ ಕಿರಾಣಿ ಅಂಗಡಿಗಳಿಗೆ ರವಾನಿಸಿರುವುದಾಗಿ ಹೇಳಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಉತ್ಪನ್ನಗಳ ಬೆಲೆಯನ್ನು ವಿಶೇಷವಾದ ರಿಯಾಯಿತಿಗಳ ಮೂಲಕ ಸರಿಹೊಂದಿಸಲಾಗಿದೆ ಎಂದು ಹೇಳಿವೆ.
ಡಾಬರ್, ಐಟಿಸಿ, ಪ್ರಾಕ್ಟರ್ ಆ್ಯಂಡ್ ಗ್ಯಾಂಬಲ್, ಇಮಾಮಿ, ನೆಸ್ಲೆ, ಆರ್‌ಸಿಪಿಎಲ್, ಅಮೂಲ್, ಎಚ್‌ಯುಎಲ್‌ನಂತಹ ಪ್ರಮುಖ ಕಂಪನಿಗಳು ಪರಿಷ್ಕೃತ ದರದ ಪಟ್ಟಿಯನ್ನು ತಮ್ಮ ವಿತರಕರಿಗೆ ರವಾನಿಸಿವೆ. ಅಲ್ಲದೆ, ತಮ್ಮ ವೆಬ್‌ಸೈಟ್‌ಗಳ ಮೂಲಕ ಹೊಸ ದರವನ್ನು ಗ್ರಾಹಕರಿಗೂ ತಿಳಿಸಿವೆ.
ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಫಿಕ್ಕಿ) ಈಚೆಗೆ ಸಿದ್ಧಪಡಿಸಿರುವ ವರದಿಯೊಂದು, ಜಿಎಸ್‌ಟಿ ದರ ಪರಿಷ್ಕರಣೆಯ ಪರಿಣಾಮವಾಗಿ ಅಲ್ಪಾವಧಿಯಲ್ಲಿ ವರಮಾನ ನಷ್ಟ ಉಂಟಾದರೂ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿ ಆಗುವ ಏರಿಕೆಯು ವರಮಾನ ನಷ್ಟವನ್ನು ಸರಿಹೊಂದಿಸಿಕೊಡುತ್ತದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.