ADVERTISEMENT

HDFC ಬ್ಯಾಂಕ್: ಸಾಲದ ಮೇಲಿನ ಬಡ್ಡಿದರ ಶೇ 0.35ರಷ್ಟು ಹೆಚ್ಚಳ, ಏರಲಿದೆ ಇಎಂಐ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 9:58 IST
Last Updated 7 ಜೂನ್ 2022, 9:58 IST
   

ಮುಂಬೈ: ದೇಶದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಎಚ್‌ಡಿಎಫ್‌ಸಿ ಸಾಲದ ಮೇಲಿನ ಬಡ್ಡಿದರವನ್ನು ಶೇಕಡ 0.35ರಷ್ಟು ಹೆಚ್ಚಳ ಮಾಡಿರುವುದಾಗಿ ಮಂಗಳವಾರ ಪ್ರಕಟಿಸಿದೆ.

ಕೆಲವು ತಿಂಗಳ ಅಂತರದಲ್ಲಿ ಎಚ್‌ಡಿಎಫ್‌ಸಿ ಎರಡನೇ ಬಾರಿಗೆ ಸಾಲದ ಮೇಲಿನ ಬಡ್ಡಿ ಹೆಚ್ಚಳ ಮಾಡಿದ್ದು, ಒಟ್ಟು ಶೇಕಡ 0.60ರಷ್ಟು ಏರಿಕೆಯಾದಂತಾಗಿದೆ. ಶೇಕಡ 0.35ರಷ್ಟು ಬಡ್ಡಿ ಹೆಚ್ಚಳವು ಜೂನ್‌ 7ರಿಂದ ಅನ್ವಯವಾಗುವುದಾಗಿ ಬ್ಯಾಂಕ್‌ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಗ್ರಾಹಕರಿಗೆ ನೀಡುವ ಒಂದು ವರ್ಷದ ಸಾಲದ ಮೇಲಿನ ಬಡ್ಡಿದರವು (ಎಂಸಿಎಲ್‌ಆರ್‌) ಪರಿಷ್ಕರಣೆಯ ನಂತರ ಶೇಕಡ 7.50ರಿಂದ 7.85ಕ್ಕೆ ಏರಿಕೆಯಾಗಲಿದೆ. ಮೂರು ವರ್ಷದ ಎಂಸಿಎಲ್‌ಆರ್‌ ಶೇಕಡ 7.70ರಿಂದ 8.05ರಷ್ಟಾಗಲಿದೆ.

ADVERTISEMENT

ಹಣದುಬ್ಬರ ಪರಿಸ್ಥಿತಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಮೇ 4ರಂದು ರೆಪೊ ದರವನ್ನು ಶೇಕಡ 0.40ರಷ್ಟು ಹೆಚ್ಚಿಸಿತ್ತು. ಆದರೆ, ಹಣದುಬ್ಬರ ಕಡಿಮೆ ಆಗದೇ ಇರುವುದರಿಂದ ರೆಪೊ ದರವನ್ನು ಮತ್ತೆ ಕನಿಷ್ಠ ಶೇ 0.35ರಷ್ಟು ಹೆಚ್ಚಿಸುವ ಸಾಧ್ಯತೆ ಇರುವುದಾಗಿ ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸಭೆಯ ನಿರ್ಧಾರಗಳನ್ನು ಬುಧವಾರ ಘೋಷಿಸಲಿದೆ.

ಚಿಲ್ಲರೆ ಹಣದುಬ್ಬರವು ಏಪ್ರಿಲ್‌ನಲ್ಲಿ ಶೇ 7.79ಕ್ಕೆ ಏರಿಕೆ ಅಗಿದ್ದು, ಎಂಟು ವರ್ಷಗಳ ಗರಿಷ್ಠ ಮಟ್ಟಕ್ಕೆ ತಲುಪಿದೆ. ಸಗಟು ಹಣದುಬ್ಬರ ಸಹ ಏಪ್ರಿಲ್‌ನಲ್ಲಿ ಶೇ 15.08ಕ್ಕೆ ದಾಖಲೆಯ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.