ADVERTISEMENT

ಜಿಡಿಪಿ ಶೇ 7.5ರಷ್ಟು ಪ್ರಗತಿ ನಿರೀಕ್ಷೆ

ಪಿಟಿಐ
Published 31 ಜುಲೈ 2024, 14:08 IST
Last Updated 31 ಜುಲೈ 2024, 14:08 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಸಂಸ್ಥೆಯು 2024–25ನೇ ಆರ್ಥಿಕ ವರ್ಷಕ್ಕೆ ಸಂಬಂಧಿಸಿದಂತೆ ಭಾರತದ ಜಿಡಿಪಿ ಬೆಳವಣಿಗೆಯನ್ನು ಪರಿಷ್ಕರಿಸಿದ್ದು, ಶೇ 7.5ರಷ್ಟು ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ.

ಈ ಮೊದಲು ಶೇ 7ರಷ್ಟು ಬೆಳವಣಿಗೆ ದಾಖಲಿಸಲಿದೆ ಎಂದು ಸಂಸ್ಥೆಯ ವರದಿ ತಿಳಿಸಿತ್ತು.  

ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸಾರ್ವಜನಿಕ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಏರಿಕೆಯಾಗಿದೆ. ಕಾರ್ಪೊರೇಟ್‌ ಕಂಪನಿಗಳು ಮತ್ತು ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಜೊತೆಗೆ, ಖಾಸಗಿ ವಲಯದ ಆರಂಭಿಕ ಬಂಡವಾಳ ವೆಚ್ಚ ಹೆಚ್ಚಳಕ್ಕೆ ಬಜೆಟ್‌ ಪೂರಕವಾಗಿದೆ. ಇದು ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ADVERTISEMENT

ಕೃಷಿ ವಲಯದ ಅಭಿವೃದ್ಧಿ ಮತ್ತು ಗ್ರಾಮೀಣರ ದಿನಬಳಕೆಯ ವೆಚ್ಚ ಹೆಚ್ಚಳಕ್ಕೆ ಬಜೆಟ್‌ ನೀತಿಗಳು ಪೂರಕವಾಗಿವೆ. ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ (ಎಂಎಸ್‌ಎಂಇ) ಸಾಲ ನೀಡಿಕೆಯಲ್ಲಿ ಸುಧಾರಣೆಯಾಗುವ ಭರವಸೆ ಸಿಕ್ಕಿದೆ. ಹೊಸ ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಲಾಗಿದೆ. ಹಾಗಾಗಿ, ಜಿಡಿಪಿ ಬೆಳವಣಿಗೆಯು ಸದೃಢವಾಗಿರಲಿದೆ ಎಂದು ಹೇಳಿದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ ಶೇ 7.2ರಷ್ಟು ಹಾಗೂ ಕೇಂದ್ರ ಹಣಕಾಸು ಸಚಿವಾಲಯದ ಆರ್ಥಿಕ ಸಮೀಕ್ಷೆಯು ಶೇ 6.5ರಿಂದ ಶೇ 7ರಷ್ಟು ಜಿಡಿಪಿ ಪ್ರಗತಿ ಕಾಣಲಿದೆ ಎಂದು ಅಂದಾಜಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.