ADVERTISEMENT

ವಿದೇಶಿ ನೇರ ಬಂಡವಾಳ ಹೂಡಿಕೆ: ಟಾಪ್–10 ದೇಶಗಳ ಸಾಲಿನಲ್ಲಿ ಭಾರತ

ಪಿಟಿಐ
Published 9 ಜೂನ್ 2022, 19:32 IST
Last Updated 9 ಜೂನ್ 2022, 19:32 IST
   

ವಿಶ್ವಸಂಸ್ಥೆ: 2021ರಲ್ಲಿ ಭಾರತಕ್ಕೆ ಹರಿದುಬಂದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಮೊತ್ತವು ಕಡಿಮೆ ಆಗಿದ್ದರೂ, ಭಾರತವು ಜಾಗತಿಕ ಮಟ್ಟದಲ್ಲಿ ಎಫ್‌ಡಿಐ ಆಕರ್ಷಿಸಿದ ಮೊದಲ ಹತ್ತು ರಾಷ್ಟ್ರಗಳ ಸಾಲಿನಲ್ಲಿ ಸ್ಥಾನ ಪಡೆದಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

2021ರಲ್ಲಿ ಭಾರತವು ₹ 3.50 ಲಕ್ಷ ಕೋಟಿ (45 ಬಿಲಿಯನ್ ಡಾಲರ್) ಎಫ್‌ಡಿಐ ಆಕರ್ಷಿಸಿದೆ ಎಂದು ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ಸಭೆಯ (ಯುಎನ್‌ಸಿಟಿಎಡಿ) ವಿಶ್ವ ಹೂಡಿಕೆ ವರದಿ ಹೇಳಿದೆ.

ಉಕ್ರೇನ್–ರಷ್ಯಾ ಯುದ್ದ, ಇಂಧನ ಹಾಗೂ ಆಹಾರ ಉತ್ಪನ್ನಗಳ ಬೆಲೆ ಏರಿಕೆ, ಹೂಡಿಕೆದಾರರಲ್ಲಿನ ಅನಿಶ್ಚಿತತೆಯ ಕಾರಣದಿಂದಾಗಿ 2022ರಲ್ಲಿ ಜಾಗತಿಕ ಮಟ್ಟದಲ್ಲಿ ಎಫ್‌ಡಿಐ ಹರಿವು ಕಡಿಮೆ ಆಗಬಹುದು ಎಂದು ಅದು ಅಂದಾಜಿಸಿದೆ.

ADVERTISEMENT

2020ರಲ್ಲಿ ಭಾರತವು ₹ 4.97 ಲಕ್ಷ ಕೋಟಿ (64 ಬಿಲಿಯನ್ ಡಾಲರ್) ಎಫ್‌ಡಿಐ ಆಕರ್ಷಿಸಿತ್ತು. ಇದಕ್ಕೆ ಹೋಲಿಸಿದರೆ 2021ರಲ್ಲಿ ಎಫ್‌ಡಿಐ ಒಳಹರಿವಿನ ಮೊತ್ತವು ₹ 1.47 ಲಕ್ಷ ಕೋಟಿಯಷ್ಟು ಕಡಿಮೆ ಆಗಿದೆ. 2021ರಲ್ಲಿ ವಿಶ್ವದಲ್ಲಿ ಅತಿಹೆಚ್ಚು ಎಫ್‌ಡಿಐ ಆಕರ್ಷಿಸಿದ ದೇಶಗಳ ಸಾಲಿನಲ್ಲಿ ಭಾರತವು ಏಳನೆಯ ಸ್ಥಾನ ಪಡೆದಿದೆ.

‘2021ರಲ್ಲಿ ಭಾರತಕ್ಕೆ ಬಂದ ಎಫ್‌ಡಿಐ ಮೊತ್ತ ಕಡಿಮೆ ಆಗಿದ್ದರೂ, ಹೊಸ ಅಂತರರಾಷ್ಟ್ರೀಯ ಹೂಡಿಕೆ ಒಪ್ಪಂದಗಳ ಘೋಷಣೆಯು 108ಕ್ಕೆ ಏರಿಕೆ ಆಗಿದೆ. ಹಿಂದಿನ ಹತ್ತು ವರ್ಷಗಳನ್ನು ಪರಿಗಣಿಸಿದರೆ, ಪ್ರತಿ ವರ್ಷ ಸರಾಸರಿ ಇಂತಹ 20 ಒಪ್ಪಂದಗಳು ಆಗುತ್ತಿದ್ದವು’ ಎಂದು ವರದಿಯು ವಿವರಿಸಿದೆ.

ದಕ್ಷಿಣ ಏಷ್ಯಾದಿಂದ, ಅದರಲ್ಲೂ ಮುಖ್ಯವಾಗಿ ಭಾರತದಿಂದ, ಬೇರೆ ದೇಶಗಳಲ್ಲಿ ಆದ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣವು ಶೇ 43ರಷ್ಟು ಹೆಚ್ಚಳ ಕಂಡಿದೆ.

ಎಫ್‌ಡಿಐ: ಟಾಪ್ 10 ದೇಶಗಳು

ಅಮೆರಿಕ

ಚೀನಾ

ಹಾಂಗ್‌ಕಾಂಗ್‌

ಸಿಂಗಪುರ

ಕೆನಡಾ

ಬ್ರೆಜಿಲ್

ಭಾರತ

ದಕ್ಷಿಣ ಆಫ್ರಿಕಾ

ರಷ್ಯಾ

ಮೆಕ್ಸಿಕೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.