ADVERTISEMENT

ಉದ್ಯಮಗಳಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ನಿರಂತರ ಯತ್ನ: ಅಮಿತಾಭ್ ಕಾಂತ್

ಪಿಟಿಐ
Published 28 ಆಗಸ್ಟ್ 2020, 13:48 IST
Last Updated 28 ಆಗಸ್ಟ್ 2020, 13:48 IST
ಅಮಿತಾಭ್‌ ಕಾಂತ್‌
ಅಮಿತಾಭ್‌ ಕಾಂತ್‌   

ನವದೆಹಲಿ: ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ, ನವೋದ್ಯಮಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅವಿರತ ಪ್ರಯತ್ನ ನಡೆಸುವುದನ್ನು ಮುಂದುವರಿಸಲಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಮಿತಾಭ್ ಕಾಂತ್ ಹೇಳಿದ್ದಾರೆ. ಅಷ್ಟೇ ಅಲ್ಲ, ದೇಶದಲ್ಲಿನ ವಾಣಿಜ್ಯೋದ್ಯಮ ವಾತಾವರಣ ನಿರಂತರವಾಗಿ ಸುಧಾರಣೆ ಕಾಣುತ್ತಿದೆ ಎಂದೂ ಹೇಳಿದ್ದಾರೆ.

ಭಾರತದ ಪ್ರಜೆಗಳ ಜೀವನವು ಇನ್ನಷ್ಟು ಸಹನೀಯ ಆಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದನ್ನು ಸರ್ಕಾರವು ಆದ್ಯತೆಯ ಮೇಲೆ ಅನುಷ್ಠಾನಗೊಳಿಸುವ ಕೆಲಸ ಮಾಡಲಿದೆ ಎಂದು ಅವರು ಹೇಳಿದ್ದಾರೆ.

ವಾಣಿಜ್ಯೋದ್ಯಮ ನಡೆಸುವುದು ಎಷ್ಟರಮಟ್ಟಿಗೆ ಸುಲಲಿತ ಆಗಿದೆ ಎಂಬುದನ್ನು ಹೇಳುವ ವರದಿ ಪ್ರಕಟಿಸುವುದನ್ನು ವಿಶ್ವಬ್ಯಾಂಕ್‌ ತಡೆಹಿಡಿದಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡುವಾಗ ಕಾಂತ್ ಅವರು, ಈ ಮಾತುಗಳನ್ನು ಹೇಳಿದರು. ವರದಿಗೆ ಅಗತ್ಯವಿರುವ ಮಾಹಿತಿಯನ್ನು ಕೊಡುವಲ್ಲಿ ಅವ್ಯವಹಾರಗಳು ನಡೆದಿವೆ ಎಂಬ ಕಾರಣಕ್ಕೆ ವರದಿ ಪ್ರಕಟಿಸುವುದನ್ನು ತಡೆಹಿಡಿಯಲಾಗಿದೆ.

ADVERTISEMENT

ಸುಲಲಿತ ವಹಿವಾಟಿಗೆ ಸಂಬಂಧಿಸಿದ 2020ರ ವರದಿಯ ಅನುಸಾರ ಭಾರತವು 14 ಸ್ಥಾನಗಳಷ್ಟು ಏರಿಕೆ ಕಂಡು, 63ನೇ ಸ್ಥಾನದಲ್ಲಿ ಇತ್ತು. ಐದು ವರ್ಷಗಳ ಅವಧಿಯಲ್ಲಿ ಭಾರತವು 79 ಸ್ಥಾನಗಳಷ್ಟು ಏರಿಕೆ ಕಂಡಿತ್ತು. ಸೌದಿ ಅರೇಬಿಯಾ, ಜೋರ್ಡಾನ್, ಟೊಗೊ, ಬಹರೇನ್, ತಜಿಕಿಸ್ತಾನ, ಪಾಕಿಸ್ತಾನ, ಕುವೈತ್, ಚೀನಾ, ಭಾರತ ಮತ್ತು ನೈಜೀರಿಯಾ ದೇಶಗಳು ಅತ್ಯಂತ ಗಮನಾರ್ಹವಾದ ಸುಧಾರಣೆಗಳನ್ನು ತಂದುಕೊಂಡಿವೆ ಎಂದು ಕೂಡ ಈ ವರದಿ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.