
ನವದೆಹಲಿ: ದೇಶದಲ್ಲಿ 10 ಕೋಟಿ ಬ್ಯಾರಲ್‌ನಷ್ಟು ಕಚ್ಚಾ ತೈಲದ ದಾಸ್ತಾನು ಇದೆ. ಹೊರ್ಮುಜ್ ಜಲಸಂಧಿಯಲ್ಲಿ ತೈಲ ಸಾಗಣೆಗೆ ಅಡ್ಡಿ ಉಂಟಾದರೆ, ಈ ದಾಸ್ತಾನು ಮುಂದಿನ 40ರಿಂದ 45 ದಿನಗಳವರೆಗೆ ದೇಶದ ತೈಲದ ಅಗತ್ಯವನ್ನು ಪೂರೈಸಬಹುದು ಎಂದು ಜಾಗತಿಕ ವ್ಯಾಪಾರ ವಿಶ್ಲೇಷಕ ಸಂಸ್ಥೆ ಕೆಫ್ಲೆರ್ ತಿಳಿಸಿದೆ.
ಭಾರತವು ತನ್ನ ಅಗತ್ಯವಿರುವ ಕಚ್ಚಾ ತೈಲದ ಪೈಕಿ ಶೇ 88ರಷ್ಟು ಆಮದು ಮಾಡಿಕೊಳ್ಳುತ್ತದೆ. ಈ ಪೈಕಿ, ಪಶ್ಚಿಮ ಏಷ್ಯಾದ ದೇಶಗಳಿಂದ ಶೇ 50ರಷ್ಟು ತೈಲ ಪೂರೈಕೆ ಆಗುತ್ತಿದ್ದು, ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗಣೆ ಆಗುತ್ತಿದೆ.
‘ಈ ಮಾರ್ಗದಲ್ಲಿ ಕಚ್ಚಾ ತೈಲ ಪೂರೈಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡರೆ, ಸಾಗಣೆ ಮೇಲೆ ಪರಿಣಾಮ ಬೀರಲಿದೆ. ದೀರ್ಘಾವಧಿವರೆಗೆ ಜಲಸಂಧಿಯಲ್ಲಿ ಸಂಚಾರ ಸ್ಥಗಿತವಾದರೆ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದ್ದು, ತೈಲ ಬೆಲೆ ಏರಿಕೆ ಆಗಬಹುದು’ ಎಂದು ಕೆಫ್ಲೆರ್‌ನ ಸಂಶೋಧನಾ ವಿಶ್ಲೇಷಕ (ಸಂಸ್ಕರಣೆ ಮತ್ತು ಮಾಡೆಲಿಂಗ್)
ಸುಮಿತ್ ರಿತೋಲಿಯಾ ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿ ಮುಚ್ಚುವುದರಿಂದ ಆರಂಭದಲ್ಲಿ ಪರಿಣಾಮ ಬೀರುವುದು ಸರಕು ಸಾಗಣೆ ಮೇಲೆ. ಆದಾಗ್ಯೂ, ದೇಶದ ತೈಲ ಸಂಸ್ಕರಣಾಗಾರಗಳು ತೈಲದ ದಾಸ್ತಾನು ಹೊಂದಿದ್ದು, ಈಗಾಗಲೇ ತೈಲ ತುಂಬಿರುವ ಹಡಗುಗಳು ಸಹ ದೇಶಕ್ಕೆ ಬರುತ್ತಿವೆ ಎಂದು ತಿಳಿಸಿದ್ದಾರೆ.
ಹೊರ್ಮುಜ್ ಜಲಸಂಧಿಯ ಮೂಲಕ ಪ್ರತಿನಿತ್ಯ ಸರಾಸರಿ 25 ಲಕ್ಷ ಬ್ಯಾರಲ್ ಕಚ್ಚಾ ತೈಲ ಆಮದಾಗುತ್ತದೆ. 2024–25ರ ಆರ್ಥಿಕ ವರ್ಷದಲ್ಲಿ ದೇಶವು ಕಚ್ಚಾ ತೈಲ ಆಮದಿಗೆ ₹12.61 ಲಕ್ಷ ಕೋಟಿಯಷ್ಟು ವ್ಯಯಿಸಿದೆ. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜನವರಿವರೆಗೆ 20.6 ಕೋಟಿ ಟನ್ ಕಚ್ಚಾ ತೈಲ ಆಮದಾಗಿದೆ. ಇದಕ್ಕಾಗಿ ₹9.24 ಲಕ್ಷ ಕೋಟಿ ಖರ್ಚು ಮಾಡಿದೆ.
ಭಾರತವು ವಿಶ್ವದಲ್ಲಿಯೇ ಮೂರನೇ ಅತಿದೊಡ್ಡ ತೈಲ ಆಮದು ರಾಷ್ಟ್ರವಾಗಿದೆ. ಕತಾರ್‌ನಲ್ಲಿರುವ ದ್ರವೀಕೃತ ನೈಸರ್ಗಿಕ ಅನಿಲ (ಎಲ್‌ಎನ್‌ಜಿ) ಪೂರೈಕೆದಾರರೂ ಸಹ ಭಾರತಕ್ಕೆ ತೈಲವನ್ನು ಸಾಗಿಸಲು ಈ ಜಲಸಂಧಿಯನ್ನೇ ಬಳಸುತ್ತಾರೆ ಎಂದು ಹೇಳಿದೆ.
ಒಂದು ವೇಳೆ ಹೊರ್ಮುಜ್ ಜಲಸಂಧಿ ಮುಚ್ಚಿದರೆ, ಭಾರತವು ಪಶ್ಚಿಮ ಆಫ್ರಿಕಾ, ಲ್ಯಾಟಿನ್ ಅಮೆರಿಕ ಮತ್ತು ಅಮೆರಿಕದಿಂದ ಆಮದು ಮಾಡಿಕೊಳ್ಳುತ್ತದೆ. ಕೊರತೆಯನ್ನು ಸರಿದೂಗಿಸಲು ರಷ್ಯಾದಿಂದಲೂ ಸಹ ಭಾರತ ಆಮದು ಮಾಡಿಕೊಳ್ಳಬಹುದು.
2024–25ರಲ್ಲಿ ಭಾರತವು 2.37 ಕೋಟಿ ಟನ್‌ನಷ್ಟು ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಿತ್ತು. ಇದು ದೇಶದ ಒಟ್ಟು ಇಂಧನ ಬಳಕೆಯಲ್ಲಿ ಶೇ 10ರಷ್ಟು. ಪ್ರಸಕ್ತ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಜನವರಿವರೆಗೆ 5.33 ಕೋಟಿ ಟನ್ ರಫ್ತು ಮಾಡಿದೆ ಎಂದು ತಿಳಿಸಿದೆ.
ಎಂಟು ವಾರಕ್ಕೆ ಸಾಕಾಗುವಷ್ಟು ಇಂಧನ
ನವದೆಹಲಿ: ದೇಶದಲ್ಲಿ ಮುಂದಿನ ಆರರಿಂದ ಎಂಟು ವಾರಗಳಿಗೆ ಸಾಕಾಗುವಷ್ಟು ಪೆಟ್ರೋಲ್, ಡೀಸೆಲ್ ಮತ್ತು ಇತರೆ ಇಂಧನ ದಾಸ್ತಾನು ಇದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೈಲ ದಾಸ್ತಾನು ಟ್ಯಾಂಕ್‌ಗಳು, ಪೈಪ್‌ಲೈನ್‌ಗಳು ಮತ್ತು ದೇಶಕ್ಕೆ ಬರುತ್ತಿರುವ ಹಡಗುಗಳಲ್ಲಿನ ತೈಲವು ದೇಶದ 25 ದಿನಗಳ ಅಗತ್ಯವನ್ನು ಪೂರೈಸಲಿದೆ. ಸಂಸ್ಕರಣಾಗಾರಗಳು, ಸಂಗ್ರಹ ಮತ್ತು ಇತರೆ ದಾಸ್ತಾನು ಘಟಕಗಳಲ್ಲಿ ಇಷ್ಟೇ ದಿನಗಳಿಗೆ ಆಗುವಷ್ಟು ಇಂಧನದ ದಾಸ್ತಾನು ಇದೆ ಎಂದು ಹೇಳಿದ್ದಾರೆ.
ದೇಶದಲ್ಲಿ ತಕ್ಷಣಕ್ಕೆ ತೈಲ ಕೊರೆತೆ ಉಂಟಾಗುವ ಸಾಧ್ಯತೆ ಇಲ್ಲ. ಕಚ್ಚಾ ತೈಲದ ಬೆಲೆ ಏರಿಕೆ, ಸಾಗಣೆ ಮತ್ತು ವಿಮಾ ವೆಚ್ಚದಲ್ಲಿನ ಹೆಚ್ಚಳವು ದೇಶದ ಆಮದು ಮತ್ತು ಹಣದುಬ್ಬರದ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
‘ದೇಶದಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ (ಎಟಿಎಫ್) ದಾಸ್ತಾನು ಪ್ರಮಾಣ ಉತ್ತಮ ಸ್ಥಿತಿಯಲ್ಲಿದೆ’ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಆದರೆ, ದಾಸ್ತಾನು ಎಷ್ಟಿದೆ ಎಂದು ತಿಳಿಸಿಲ್ಲ.
ದೇಶಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಮತ್ತು ದಾಸ್ತಾನು ಸ್ಥಿತಿಯ ಮೇಲೆ ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸಚಿವಾಲಯವು 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ ಎಂದು ಹೇಳಿದ್ದಾರೆ.
ಕಚ್ಚಾ ತೈಲ ದರ ಏರಿಕೆ
ಲಂಡನ್: ಬ್ರೆಂಟ್ ಕಚ್ಚಾ ತೈಲ ದರವು ಮಂಗಳವಾರದ ವಹಿವಾಟಿನಲ್ಲಿ ಶೇ 8ರಷ್ಟು ಏರಿಕೆಯಾಗಿದ್ದು, ಪ್ರತೀ ಬ್ಯಾರಲ್ ದರವು 85.12 ಡಾಲರ್‌ಗೆ ತಲುಪಿದೆ. ಇದು 2024ರ ಜುಲೈ ಬಳಿಕ ದಾಖಲಾದ ಗರಿಷ್ಠ ಏರಿಕೆ ಆಗಿದೆ.
ವೆಸ್ಟ್ ಟೆಕ್ಸಾಸ್ ಇಂಟರ್‌ಮೀಡಿಯೇಟ್ ದರವು ಶೇ 7ರಷ್ಟು ಹೆಚ್ಚಾಗಿ, ಪ್ರತೀ ಬ್ಯಾರಲ್ 76.47 ಡಾಲರ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.