
ಜಿಡಿಪಿ
ಮುಂಬೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆ ಶೇ 7.4ರಷ್ಟಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ ಅಂದಾಜನ್ನು ಪರಿಷ್ಕರಿಸಿದೆ. ಈ ಮೊದಲು ಶೇ 7.3ರಷ್ಟಾಗಲಿದೆ ಎಂದು ಹೇಳಿತ್ತು.
ಮುಂದಿನ ಆರ್ಥಿಕ ವರ್ಷದ ಮೊದಲ ಮತ್ತು ಎರಡನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಕ್ರಮವಾಗಿ ಶೇ 6.9 ಮತ್ತು ಶೇ 7ರಷ್ಟಾಗಲಿದೆ ಎಂದು ಅಂದಾಜಿಸಿದೆ.
ಈ ಮೊದಲು ಡಿಸೆಂಬರ್‌ನಲ್ಲಿ ಜಿಡಿಪಿಯು ಇದೇ ಅವಧಿಯಲ್ಲಿ ಕ್ರಮವಾಗಿ ಶೇ 6.7 ಮತ್ತು ಶೇ 6.8ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. ಮುಂದಿನ ಆರ್ಥಿಕ ವರ್ಷದ ಮೊದಲಾರ್ಧದಲ್ಲಿ ಜಿಡಿಪಿಯು ಶೇ 6.95ರಷ್ಟಾಗಲಿದೆ.
2026–27ರ ಪೂರ್ಣ ಆರ್ಥಿಕ ವರ್ಷದ ಜಿಡಿಪಿಯನ್ನು ಏಪ್ರಿಲ್‌ನಲ್ಲಿ ನಡೆಯುವ ಮುಂದಿನ ಎಂಪಿಸಿ ಸಭೆಯಲ್ಲಿ ಆರ್‌ಬಿಐ ಪ್ರಕಟಿಸಲಿದೆ.
‘ವ್ಯಾಪಾರ ಒಪ್ಪಂದಗಳು, ಜಿಎಸ್‌ಟಿ ದರ ಪರಿಷ್ಕರಣೆ ಮತ್ತು ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವು ಜಿಡಿಪಿ ಪರಿಷ್ಕರಣೆಗೆ ಕಾರಣ’ ಎಂದು ಆರ್‌ಬಿಐನ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಹಣಕಾಸು ನೀತಿ ಸಮಿತಿಯ (ಎಂಪಿಸಿ) ನಿರ್ಧಾರ ಪ್ರಕಟಿಸಿದ ಬಳಿಕ ಹೇಳಿದ್ದಾರೆ.
ದೇಶದಲ್ಲಿ ಜನರ ಖರೀದಿ ಸಾಮರ್ಥ್ಯ ಮತ್ತು ಸ್ಥಿರವಾದ ಹೂಡಿಕೆಯ ಪ್ರಮಾಣ ಹೆಚ್ಚಳವಾಗಿದೆ. ಇದು ಜಿಡಿಪಿ ಬೆಳವಣಿಗೆಗೆ ಸಹಕಾರಿ ಆಗಿದೆ ಎಂದು ಹೇಳಿದ್ದಾರೆ.
ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಹೆಚ್ಚಿದೆ. ಇದು ಕೃಷಿ ಚಟುವಟಿಕೆ ಪ್ರಗತಿಗೆ ನೆರವಾಗಿವೆ. ನಿರ್ಮಾಣ ಮತ್ತು ಸೇವಾ ವಲಯವು ದೇಶೀಯ ಬೇಡಿಕೆಯನ್ನು ಹೆಚ್ಚಿಸಿವೆ ಎಂದು ತಿಳಿಸಿದ್ದಾರೆ.
ಭಾರತ–ಐರೋಪ್ಯ ಮುಕ್ತ ವ್ಯಾಪಾರ ಒಪ್ಪಂದ, ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಸೇರಿ ಹಲವು ವ್ಯಾಪಾರ ಒಪ್ಪಂದಗಳು ದೇಶದ ರಫ್ತಿಗೆ ಸಹಕಾರಿ ಆಗಲಿವೆ. ಅಲ್ಲದೆ, ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಕ್ರಮಗಳು ಸಹ ಬೆಳವಣಿಗೆಗೆ ಕಾರಣವಾಗಲಿವೆ ಎಂದು ಹೇಳಿದ್ದಾರೆ.
––
ವಿದೇಶಿ ವಿನಿಮಯ ಸಂಗ್ರಹ ಏರಿಕೆ
ಜನವರಿ 30ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹದ ಪ್ರಮಾಣ ₹1.30 ಲಕ್ಷ ಕೋಟಿಯಷ್ಟು ಹೆಚ್ಚಳವಾಗಿದೆ ಎಂದು ಆರ್‌ಬಿಐ ಶುಕ್ರವಾರ ತಿಳಿಸಿದೆ. ಪ್ರಸ್ತುತ ಒಟ್ಟು ಮೀಸಲು ಸಂಗ್ರಹ ₹65.59 ಲಕ್ಷ ಕೋಟಿಯಾಗಿದೆ. ಇದು ಇದುವರೆಗಿನ ಗರಿಷ್ಠ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಚಿನ್ನದ ಮೀಸಲು ಸಂಗ್ರಹವು ₹12.47 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.