
ಭಾರತೀಯ ರಿಸರ್ವ್ ಬ್ಯಾಂಕ್
ಮುಂಬೈ (ಪಿಟಿಐ): 2024–25ನೇ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು ಶೇ 7.5ರಷ್ಟು ಪ್ರಗತಿ ಕಾಣಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಸಿಕ ವರದಿಯು ಅಂದಾಜಿಸಿದೆ.
ಗ್ರಾಮೀಣ ಪ್ರದೇಶದಲ್ಲಿನ ಬೇಡಿಕೆ ಹೆಚ್ಚಳದ ಜೊತೆಗೆ, ಆಹಾರೇತರ ಖರ್ಚಿನ ಏರಿಕೆಯಿಂದಾಗಿ ಈ ಪ್ರಗತಿ ಸಾಧ್ಯವಾಗಲಿದೆ ಮಂಗಳವಾರ ಬಿಡುಗಡೆಯಾಗಿರುವ ವರದಿ ತಿಳಿಸಿದೆ.
ಜಾಗತಿಕ ಬಿಕ್ಕಟ್ಟಿನಿಂದಾಗಿ ಪೂರೈಕೆ ಸರಪಳಿಯು ಅಸ್ತವ್ಯಸ್ತಗೊಂಡಿದೆ. ಇದರ ನಡುವೆಯೂ ಭಾರತದ ಆರ್ಥಿಕತೆಯು ಚೇತರಿಕೆ ಕಂಡಿದೆ ಎಂದು ಹೇಳಿದೆ.
ಆರ್ಥಿಕ ಚಟುವಟಿಕೆ ಸೂಚ್ಯಂಕದ ಪ್ರಕಾರ ಏಪ್ರಿಲ್‌ನಲ್ಲಿ ಆರ್ಥಿಕ ಚಟುವಟಿಕೆಗಳು ಸರಿಯಾದ ದಿಕ್ಕಿಗೆ ಮರಳಿವೆ. ದೇಶೀಯ ಬೇಡಿಕೆಯು ವೇಗ ಪಡೆದಿದೆ. ಇದು ಜಿಡಿಪಿ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನ ಏಪ್ರಿಲ್‌ನಲ್ಲಿ ಟೋಲ್ ಸಂಗ್ರಹದಲ್ಲಿ ಶೇ 8.6ರಷ್ಟು ಏರಿಕೆಯಾಗಿದೆ. ವಾಹನಗಳ ಮಾರಾಟದಲ್ಲಿ ಶೇ 25.4ರಷ್ಟು ಹೆಚ್ಚಳವಾಗಿದೆ. ಆಹಾರೇತರ ಖರ್ಚಿನ ಏರಿಕೆಯು ಗ್ರಾಮೀಣ ಪ್ರದೇಶದ ಚೇತರಿಕೆಗೆ ನೆರವಾಗಲಿದೆ ಎಂದು ಹೇಳಿದೆ.
ಅಲ್ಲದೆ, ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರವು ಇಳಿಕೆಯಾಗಿದೆ. ಹಣದುಬ್ಬರವನ್ನು ಶೇ 4ರ ಮಿತಿಯಲ್ಲಿ ಕಾಯ್ದುಕೊಳ್ಳುವ ಆರ್‌ಬಿಐನ ಗುರಿಯತ್ತ ಸಾಗಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.