ADVERTISEMENT

ರೂಪಾಯಿ ಕುಸಿದಿರುವುದು ಅಮೆರಿಕ ಡಾಲರ್ ಎದುರಷ್ಟೇ: ನಿರ್ಮಲಾ ಸೀತಾರಾಮನ್

ಪಿಟಿಐ
Published 2 ಫೆಬ್ರುವರಿ 2025, 10:54 IST
Last Updated 2 ಫೆಬ್ರುವರಿ 2025, 10:54 IST
<div class="paragraphs"><p>ನಿರ್ಮಲಾ ಸೀತಾರಾಮನ್</p></div>

ನಿರ್ಮಲಾ ಸೀತಾರಾಮನ್

   

ಪಿಟಿಐ ಚಿತ್ರ

ನವದೆಹಲಿ: ‘ಅಮೆರಿಕದ ಡಾಲರ್‌ ಬಲಗೊಳ್ಳುತ್ತಿದೆ. ಇದರ ಎದುರು ಮಾತ್ರ ರೂಪಾಯಿ ಮೌಲ್ಯ ಕುಸಿಯುತ್ತಿದೆ. ಆದರೆ, ಇತರೆ ಎಲ್ಲ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯ ಸ್ಥಿರವಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ADVERTISEMENT

ಸುದ್ದಿಸಂಸ್ಥೆ ಪಿಟಿಐಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ ಕೆಲವು ತಿಂಗಳಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಶೇ 3ರಷ್ಟು ಕುಸಿದಿದೆ. ಇದು ಕಳವಳಕಾರಿ ವಿಷಯವಾಗಿದೆ. ಮೌಲ್ಯದ ಇಳಿಕೆಯು ವಸ್ತುಗಳ ಆಮದು ವೆಚ್ಚವನ್ನು ದುಬಾರಿ ಮಾಡಲಿದೆ. ಆದರೆ, ಇತರೆ ದೇಶಗಳ ಕರೆನ್ಸಿ ಎದುರು ರೂಪಾಯಿ ಮೌಲ್ಯ ಇಳಿಯುತ್ತಿದೆ ಎನ್ನುವುದನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.

ತೆರಿಗೆ ಸಂಗ್ರಹ, ಸಾರ್ವಜನಿಕ ಸರಕುಗಳು ಹಾಗೂ ಕಲ್ಯಾಣ ಪರ ಚಟುವಟಿಕೆಗಳ ಮೇಲಿನ ವೆಚ್ಚ, ಹಣದುಬ್ಬರದ ನಿಯಂತ್ರಣ, ಆರ್ಥಿಕ ಪ್ರಗತಿಗೆ ಉತ್ತೇಜನ ಸೇರಿದಂತೆ ಆರ್ಥಿಕತೆಯ ಅಂಶಗಳು ಸದೃಢವಾಗಿವೆ. ಈ ಅಂಶಗಳು ದುರ್ಬಲವಾಗಿದ್ದರೆ, ಎಲ್ಲಾ ಕರೆನ್ಸಿಗಳ ಎದುರು ರೂಪಾಯಿ ಮೌಲ್ಯ ಸ್ಥಿರವಾಗಿರುತ್ತಿರಲಿಲ್ಲ ಎಂದರು.

2025ರಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತದ ಸುಳಿವು ನೀಡಿದ ನಂತರ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದೆ. ಇದರಿಂದ ರೂಪಾಯಿ ಮೌಲ್ಯ ಇಳಿಯುತ್ತಿದೆ. ರೂಪಾಯಿ ಮೌಲ್ಯ ಇಳಿಕೆ ತಡೆಗಟ್ಟಲು ರಿಸರ್ವ್ ಬ್ಯಾಂಕ್‌ ತನ್ನ ವಿದೇಶಿ ವಿನಿಮಯ ಮೀಸಲು ಸಂಗ್ರಹದಿಂದ ₹6.67 ಲಕ್ಷ ಕೋಟಿ ಬಳಸಿದೆ. ಪ್ರಸ್ತುತ ವಿದೇಶಿ ವಿನಿಮಯ ಮೀಸಲು ಸಂಗ್ರಹ ₹54.57 ಲಕ್ಷ ಕೋಟಿ ಇದೆ.

ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೂಪಾಯಿ ಮೌಲ್ಯ ಸ್ಥಿರತೆಗೆ ಮುಂದಾಗಿದೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಮೆರಿಕದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದರಿಂದ ಡಾಲರ್ ಮೌಲ್ಯ ಏರಿಕೆಯಾಗಿದ್ದು, ರೂಪಾಯಿ ಮೌಲ್ಯದಲ್ಲಿ ಏರಿಳಿತ ಉಂಟಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.