ADVERTISEMENT

ರಫ್ತು| ಫೋನ್‌ಗೆ ಅಗ್ರ ಸ್ಥಾನ: ಮಾಹಿತಿ ಹಂಚಿಕೊಂಡ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್

ಪಿಟಿಐ
Published 25 ಫೆಬ್ರುವರಿ 2026, 22:40 IST
Last Updated 25 ಫೆಬ್ರುವರಿ 2026, 22:40 IST
<div class="paragraphs"><p>ಫೋನ್‌</p></div>

ಫೋನ್‌

   

ನವದೆಹಲಿ: ಭಾರತದಿಂದ ರಫ್ತಾಗುವ ಸರಕುಗಳ ವರ್ಗದಲ್ಲಿ ಈಗ ಸ್ಮಾರ್ಟ್‌ಫೋನ್‌ಗಳು ಮೊದಲ ಸ್ಥಾನಕ್ಕೆ ಬಂದಿವೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಐ.ಟಿ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ.

2025ರ ಕ್ಯಾಲೆಂಡರ್‌ ವರ್ಷದಲ್ಲಿ ಭಾರತದಿಂದ 30 ಬಿಲಿಯನ್‌ ಡಾಲರ್‌ (₹2.72 ಲಕ್ಷ ಕೋಟಿ) ಮೌಲ್ಯದ ಸ್ಮಾರ್ಟ್‌ಫೋನ್‌ಗಳು ರಫ್ತಾಗಿವೆ ಎಂದು ಅವರು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿದ್ದಾರೆ.

ADVERTISEMENT

‘ಭಾರತವು ಈಗ ಜಗತ್ತಿನ ಸ್ಮಾರ್ಟ್‌ಫೋನ್‌ ತಯಾರಿಕಾ ಕಾರ್ಖಾನೆ ಆಗುತ್ತಿದೆ’ ಎಂದು ವೈಷ್ಣವ್ ಹೇಳಿದ್ದಾರೆ. ಈ ಸಂಬಂಧ ಅವರು ಚಿ‌ತ್ರವೊಂದನ್ನು ಹಂಚಿಕೊಂಡಿದ್ದಾರೆ.

2024–25ನೇ ಸಾಲಿನಲ್ಲಿ ಭಾರತದಲ್ಲಿ ಅಂದಾಜು ₹5.5 ಲಕ್ಷ ಕೋಟಿ ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ತಯಾರು ಮಾಡಲಾಗಿದೆ, ಅಂದಾಜು ₹2 ಲಕ್ಷ ಕೋಟಿ ಮೌಲ್ಯದ ಮೊಬೈಲ್‌ ಫೋನ್‌ಗಳನ್ನು ರಫ್ತು ಮಾಡಲಾಗಿದೆ.

2025ರಲ್ಲಿ ದೇಶದಿಂದ ರಫ್ತಾಗಿರುವ ಎಲೆಕ್ಟ್ರಾನಿಕ್ಸ್‌ ಸರಕುಗಳ ಮೌಲ್ಯವು ₹4 ಲಕ್ಷ ಕೋಟಿಯನ್ನು ದಾಟಿದೆ. ದೇಶದಲ್ಲಿ ನಾಲ್ಕು ಸೆಮಿಕಂಡಕ್ಟರ್ ತಯಾರಿಕಾ ಘಟಕಗಳು ಈ ವರ್ಷ ಉತ್ಪಾದನೆ ಆರಂಭಿಸಿದ ನಂತರದಲ್ಲಿ ಈ ಮೌಲ್ಯವು ಇನ್ನಷ್ಟು ಹೆಚ್ಚಾಗಲಿದೆ ಎಂಬ ಅಂದಾಜು ಮಾಡಲಾಗಿದೆ.

ಚೀನಾ ಮೇಲೆ ಅಮೆರಿಕ ಹೆಚ್ಚಿನ ಸುಂಕ ಹೇರಿದ ನಂತರದಲ್ಲಿ ಆ್ಯಪಲ್‌ ಕಂಪನಿಯು ಭಾರತದಲ್ಲಿ ತಯಾರಿಕಾ ಚಟುವಟಿಕೆಯನ್ನು ಹೆಚ್ಚಿಸಿದೆ ಎಂದು ಮಾರುಕಟ್ಟೆ ಸಂಶೋಧನೆ ಹಾಗೂ ವಿಶ್ಲೇಷಣಾ ಸಂಸ್ಥೆ ‘ಕೌಂಟರ್‌
ಪಾಯಿಂಟ್‌’ನ ಸಹ ಸಂಸ್ಥಾಪಕ ನೀಲ್ ಶಾ ಹೇಳಿದ್ದಾರೆ.

‘ಭಾರತದಲ್ಲಿ ಅಂದಾಜು 30 ಕೋಟಿ ಮೊಬೈಲ್‌ ಫೋನ್‌ಗಳು ತಯಾರಾಗಲಿವೆ ಎಂದು ನಿರೀಕ್ಷಿಸಲಾಗಿದೆ. 2025ರಲ್ಲಿ ಇಲ್ಲಿ ತಯಾರಾದ ಪ್ರತಿ ನಾಲ್ಕು ಮೊಬೈಲ್‌ ಫೋನ್‌ಗಳಲ್ಲಿ ಒಂದು ರಫ್ತಾಗಿದೆ ಎಂದು ಅಂದಾಜು ಮಾಡಲಾಗಿದೆ’ ಎಂದು ಅವರು ಹೇಳಿದ್ದಾರೆ.

‘ಅಮೆರಿಕವು ಇಲ್ಲಿ ತಯಾರಾದ ಮೊಬೈಲ್‌ ಫೋನ್‌ಗಳಿಗೆ ದೊಡ್ಡ ಮಾರುಕಟ್ಟೆ. ಆ್ಯಪಲ್‌, ಸ್ಯಾಮ್‌ಸಂಗ್‌, ಮೋಟೊರೊಲಾ ಕಂಪನಿಗಳು ರಫ್ತಿನಲ್ಲಿ ಮುಂಚೂಣಿಯಲ್ಲಿ ಇವೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.