ನವದೆಹಲಿ: ಅಮೆರಿಕದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದಕ್ಕಾಗಿ ಭಾರತ ಮಾತುಕತೆ ನಡೆಸುತ್ತಿದೆ ಎಂದು ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಮಂಗಳವಾರ ಹೇಳಿದ್ದಾರೆ.
ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಶೇ 50ರಷ್ಟು ಸುಂಕವನ್ನು ಅಮೆರಿಕ ಹೇರಿದ ನಂತರವೂ ರಷ್ಯಾದಿಂದ ತೈಲ ಆಮದು ಮುಂದುವರಿದಿದೆ. ಇದರ ಜತೆಯಲ್ಲೇ ಅಮೆರಿಕದೊಂದಿಗೆ ವಾಣಿಜ್ಯ ಒಪ್ಪಂದಗಳ ಸಂಬಂಧ ಮಾತುಕತೆ ನಡೆಯುತ್ತಿದೆ ಎಂದು ಗೋಯಲ್ ಹೇಳಿದ್ದಾರೆ.
ಭಾರತದಿಂದ ಆಮದಾಗುವ ಕೆಲ ವಸ್ತುಗಳ ಮೇಲೆ ಅಮೆರಿಕವು ಶೇ 25ರಷ್ಟು ಸುಂಕ ಹೇರಿತ್ತು. ಇದರ ಜತೆಗೆ ರಷ್ಯಾದಿಂದ ತೈಲ ಖರೀದಿಸುತ್ತಿರುವುದಕ್ಕೆ ಪ್ರತಿಯಾಗಿ ಶೇ 25ರಷ್ಟು ಹೆಚ್ಚುವರಿ ಸುಂಕವನ್ನು ಹೇರಿದೆ. ಆ. 27ರಿಂದ ಇದು ಜಾರಿಗೆ ಬಂದಿದೆ. ಭಾರತವು ಅಮೆರಿಕಕ್ಕೆ ರಫ್ತು ಮಾಡುವ ಒಟ್ಟು ಸರಕಿನಲ್ಲಿ ಶೇ 55ರಷ್ಟರ ಮೇಲೆ ಹೆಚ್ಚುವರಿ ಸುಂಕದ ಪರಿಣಾಮ ಉಂಟಾಗಲಿದೆ. ಇದರಿಂದ, ಜವಳಿ, ಚರ್ಮ, ಆಭರಣ ಉದ್ಯಮಗಳಿಗೆ ಪೆಟ್ಟು ಬೀಳಬಹುದು ಎನ್ನಲಾಗಿದೆ.
ಸುಂಕ ಸಮರ ಕುರಿತು ಸೋಮವಾರ ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘ಅಮೆರಿಕದ ಸರಕುಗಳ ಮೇಲಿನ ಸುಂಕವನ್ನು ಸಂಪೂರ್ಣವಾಗಿ ತೆಗೆಯುವುದಾಗಿ ಭಾರತ ಈಗ ಹೇಳುತ್ತಿದೆ. ಆದರೆ, ಈಗಾಗಲೇ ಸಮಯ ಮೀರಿ ಹೋಗಿದೆ’ ಎಂದಿದ್ದರು.
‘ಭಾರತವು ಅಮೆರಿಕಕ್ಕೆ ಅಪಾರ ಪ್ರಮಾಣದ ಸರಕುಗಳನ್ನು ರಫ್ತು ಮಾಡುತ್ತದೆ. ಆದರೆ, ನಾವು ಅವರಿಗೆ ಅತೀ ಕಡಿಮೆ ಪ್ರಮಾಣದ ಸರಕುಗಳನ್ನು ಮಾರಾಟ ಮಾಡುತ್ತಿದ್ದೇವೆ. ಇದಕ್ಕೆ ಕಾರಣ, ಭಾರತ ನಮ್ಮ ವಸ್ತುಗಳ ಮೇಲೆ ವಿಧಿಸಿರುವ ಹೆಚ್ಚು ಪ್ರಮಾಣದ ಸುಂಕವಾಗಿದೆ. ಹಲವು ದಶಕಗಳಿಂದಲೂ ಇದು ಹೀಗೆಯೇ ಇದೆ. ಭಾರತದೊಂದಿಗಿನ ನಮ್ಮ ವ್ಯವಹಾರವು ಏಕಪಕ್ಷೀಯ ವಿಪತ್ತಿನಂತಾಗಿದೆ’ ಎಂದಿದ್ದರು.
‘ಭಾರತವು ತೈಲ, ಮಿಲಿಟರಿ ಉತ್ಪನ್ನಗಳನ್ನು ರಷ್ಯಾದಿಂದ ಖರೀದಿಸುತ್ತಿದೆ. ಅಮೆರಿಕದಿಂದ ಅತ್ಯಲ್ಪ ಪ್ರಮಾಣದ ಖರೀದಿ ಮಾಡುತ್ತಿದೆ. ಈ ವಿಚಾರವು ಕೆಲವೇ ಮಂದಿಗಷ್ಟೇ ತಿಳಿದಿದೆ. ಈಗ ಸಂಪೂರ್ಣ ಸುಂಕವನ್ನು ಕಡಿತಗೊಳಿಸುವ ವಿಚಾರವನ್ನು ಭಾರತ ಪ್ರಸ್ತಾಪಿಸುತ್ತಿದೆ. ಆದರೆ, ಸಮಯ ಮೀರಿ ಹೋಗಿದೆ. ಭಾರತ ಈ ವಿಚಾರವನ್ನು ಹಲವು ವರ್ಷಗಳ ಹಿಂದೆಯೇ ಯೋಚಿಸಬೇಕಿತ್ತು’ ಎಂದೂ ಟ್ರಂಪ್ ಹೇಳಿದ್ದರು.
ತಿಯಾನ್‌ಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯ ಭಾಗವಾಗಿ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಹಾಗೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಪ್ರಧಾನಿ ಮೋದಿ ದ್ವಿಪಕ್ಷೀಯ ಸಭೆ ನಡೆಸಿರುವ ಬೆನ್ನಲ್ಲೇ ಟ್ರಂಪ್ ಅವರ ಈ ಹೇಳಿಕೆ ಮಹತ್ವ ಪಡೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.