ADVERTISEMENT

ಆರ್ಥಿಕತೆ ಪುನಶ್ಚೇತನ | ಸಚಿವರು, ಹಣಕಾಸು ನಿಯಂತ್ರಕರ ಜತೆ ಪ್ರಧಾನಿ ಮೋದಿ ಸಭೆ

ಪಿಟಿಐ
Published 31 ಜುಲೈ 2020, 2:56 IST
Last Updated 31 ಜುಲೈ 2020, 2:56 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದಿಂದ ತತ್ತರಿಸಿರುವ ಆರ್ಥಿಕತೆಯ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಸಚಿವರು, ಹಣಕಾಸು ನಿಯಂತ್ರಕರ ಜತೆ ಗುರುವಾರ ಸಭೆ ನಡೆಸಿದ್ದಾರೆ. ಮುಖ್ಯವಾಗಿ, ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಏನೇನು ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಸೆಬಿ ಅಧ್ಯಕ್ಷ ಅಜಯ್ ತ್ಯಾಗಿ, ಐಆರ್‌ಡಿಎಐ ಅಧ್ಯಕ್ಷ ಎಸ್‌ಸಿ ಖುಂಟಿಯಾ, ಪಿಎಫ್‌ಆರ್‌ಡಿಎ ಅಧ್ಯಕ್ಷ ಸುಪ್ರತಿಮ್ ಬಂಡೋಪಾಧ್ಯಾಯ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಸಭೆಯಲ್ಲಿ ಭಾಗವಹಿಸಿದ್ದಾರೆ. ಹಿರಿಯ ಸರ್ಕಾರಿ ಅಧಿಕಾರಿಗಳೂ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಸಭೆ ನಡೆದಿದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯು ಶೇ 4ರಷ್ಟು ಕುಸಿಯುವ ಸಾಧ್ಯತೆ ಇದೆ ಎಂದುಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಇತ್ತೀಚೆಗೆ ಹೇಳಿತ್ತು.

ಕೊರೊನೋತ್ತರ ಜಗತ್ತನ್ನು ಎದುರಿಸಲು ಏನೇನು ಸಿದ್ಧತೆ ಮಾಡಿಕೊಳ್ಳಬೇಕು, ‘ಆತ್ಮ ನಿರ್ಭರ’ಭಾರತ ಸಾಕಾರಕ್ಕೆ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ.

ಹಣಕಾಸು ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಗೆ ನೆರವಾಗುವ ನಿಟ್ಟಿನಲ್ಲಿ ಫೆಬ್ರುವರಿಯಿಂದೀಚೆಗೆ ಆರ್‌ಬಿಐ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಹಣಕಾಸು ಹರಿವು ಹೆಚ್ಚಿಸಲು ಕ್ರಮ, ಬಡ್ಡಿ ದರದಲ್ಲಿ ದಾಖಲೆಯ ಕಡಿತವೂ ಒಳಗೊಂಡಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ್ದ ₹20 ಲಕ್ಷ ಕೋಟಿ ಪ್ಯಾಕೇಜ್‌ನ ಶೇ 40ರಷ್ಟು ಆರ್‌ಬಿಐ ಕೈಗೊಂಡ ಹಣಕಾಸು ಹರಿವು ಕ್ರಮಗಳನ್ನು ಒಳಗೊಂಡಿದೆ. ಈಚೆಗೆ, ಹಣಕಾಸು ನೀತಿಯಲ್ಲಿಯೂ ಆರ್‌ಬಿಐ ಸಡಿಲಿಕೆ ಮಾಡಿದೆ. ಇಷ್ಟೇ ಅಲ್ಲದೆ ಸೆಬಿ, ಐಆರ್‌ಡಿಎಐ, ಪಿಎಫ್‌ಆರ್‌ಡಿಎ ಸಹ ಕೈಗಾರಿಕೆಗಳು ಮತ್ತು ಸಾರ್ವಜನಿಕರನ್ನು ಗಮನದಲ್ಲಿಟ್ಟುಕೊಂಡು ಅನೇಕ ಕ್ರಮಗಳನ್ನು ಕೈಗೊಂಡಿವೆ.

ವಾಣಿಜ್ಯೋದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿಸುವಲ್ಲಿ ಹಾಗೂ ಹೂಡಿಕೆಯನ್ನು ಪ್ರೋತ್ಸಾಹಿಸುವಲ್ಲಿ ಭಾರತ ನಡೆಸಿದ ಪ್ರಯತ್ನಗಳು ಫಲ ನೀಡಿವೆ. ಆದರೂ ಸುಸ್ಥಿರ ಹಾಗೂ ಇನ್ನಷ್ಟು ಒಳಗೊಳ್ಳುವ ಬೆಳವಣಿಗೆ ಸಾಧಿಸಲು ಭಾರತವು ಹೆಚ್ಚಿನ ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ ಇತ್ತೀಚೆಗೆ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.