
ಪ್ರಸ್ತುತ ಭಾರತದ ಆರ್ಥಿಕತೆಯಲ್ಲಿ ಒಂದು ವಿಚಿತ್ರವಾದ ಬೆಳವಣಿಗೆ ನಡೆಯುತ್ತಿದ್ದು, ಇದು ಪ್ರತಿಯೊಬ್ಬರ ಜೇಬಿನ ಮೇಲೂ ಪರಿಣಾಮ ಬೀರುತ್ತಿದೆ. ಒಂದೆಡೆ, ನವೆಂಬರ್ 28ರ ಅಧಿಕೃತ ಅಂಕಿಅಂಶಗಳ ಪ್ರಕಾರ, ಜುಲೈನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಭಾರತೀಯ ಆರ್ಥಿಕತೆ ಕಳೆದ ಆರು ತ್ರೈಮಾಸಿಕಗಳಲ್ಲೇ ಅತ್ಯಧಿಕ ವೇಗದ ಪ್ರಗತಿ ಸಾಧಿಸಿದೆ. ಇನ್ನೊಂದೆಡೆ, ನಮ್ಮ ಭಾರತೀಯ ರೂಪಾಯಿ ದಿನೇ ದಿನೇ ಕುಸಿಯುತ್ತಲೇ ಸಾಗಿದೆ. ಡಿಸೆಂಬರ್ 3, ಬುಧವಾರದಂದು, ರೂಪಾಯಿ ಇನ್ನಷ್ಟು ಕುಸಿತ ಕಂಡು, ಡಾಲರ್ ಎದುರು ₹ 90.05 ರೂಪಾಯಿ ಮೌಲ್ಯ ಹೊಂದಿತ್ತು. ಈ ವರ್ಷವೊಂದರಲ್ಲೇ ರೂಪಾಯಿ 4%ಕ್ಕೂ ಹೆಚ್ಚಿನ ಕುಸಿತ ಕಂಡಿದೆ. ನಮ್ಮ ರೂಪಾಯಿ ಕುಸಿತ ಕಾಣುತ್ತಿದ್ದರೂ, ನಮ್ಮ ಆರ್ಥಿಕತೆ ಹೇಗೆ ಇಷ್ಟು ಪ್ರಗತಿ ಕಾಣುತ್ತಿದೆ? ಈ ಒಗಟನ್ನು ಸುಲಭವಾಗಿ ಬಿಡಿಸಿ ಅರ್ಥೈಸಿಕೊಳ್ಳಲು ಪ್ರಯತ್ನಿಸೋಣ.
ಮೊದಲನೆಯದಾಗಿ, ಹಣದ ಮೌಲ್ಯ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೇಗಿರುತ್ತದೋ, ಹಣವೂ ಅದೇ ರೀತಿ ಏರಿಳಿತ ಕಾಣುತ್ತದೆ. ಬೇಡಿಕೆ ಹೆಚ್ಚಾಗಿ, ಪೂರೈಕೆ ಅಷ್ಟೇ ಇದ್ದಾಗ ಬೆಲೆಗಳು ಹೆಚ್ಚಾಗುತ್ತವೆ. ಬೇಡಿಕೆ ಕಡಿಮೆಯಾಗಿ, ಪೂರೈಕೆ ಅಷ್ಟೇ ಇದ್ದಾಗ ಬೆಲೆ ಕಡಿಮೆಯಾಗುತ್ತದೆ. ಇಲ್ಲಿ ಒಂದೇ ವ್ಯತ್ಯಾಸವೆಂದರೆ, ಅಂತರರಾಷ್ಟ್ರೀಯ ವಿನಿಮಯ ಮಾರುಕಟ್ಟೆಯಲ್ಲಿ ಒಂದು ದೇಶದ ಹಣವನ್ನು ಇನ್ನೊಂದು ದೇಶದ ಹಣದೊಡನೆ ವ್ಯಾಪಾರ ಮಾಡಲಾಗುತ್ತದೆಯೇ ಹೊರತು, ವಸ್ತುಗಳನ್ನಲ್ಲ. ಒಂದು ಹಣಕ್ಕೆ ಬೇಡಿಕೆ ಕಡಿಮೆಯಾಗಿ, ಅದರ ಪೂರೈಕೆ ಅಷ್ಟೇ ಪ್ರಮಾಣದಲ್ಲಿ ಇದ್ದಾಗ ಅದರ ಮೌಲ್ಯ ಕುಸಿಯುತ್ತದೆ. ನಿಮಗೆ ಈ ವರ್ಷದ ಆರಂಭದಲ್ಲಿ ಏನನ್ನಾದರೂ ಖರೀದಿಸಲು ₹ 100 ಬೇಕಾಗಿದ್ದರೆ, ಈಗ ಅದನ್ನು ಖರೀದಿಸಲು ₹ 104 ಬೇಕು. ಈಗ ನಿಮ್ಮ ಹಣ ನಿಜಕ್ಕೂ ಬೆಲೆ ಕಳೆದುಕೊಂಡಿದೆ!
ಉತ್ತಮ ಜಿಡಿಪಿ ಪ್ರಗತಿಯ ಹೊರತಾಗಿಯೂ ರೂಪಾಯಿ ಏಕೆ ಕುಸಿಯುತ್ತಿದೆ? ಹಣಕ್ಕೆ ಬೇಡಿಕೆ ಸೃಷ್ಟಿಸುವುದು ಏನು ಎಂದು ಅರ್ಥ ಮಾಡಿಕೊಳ್ಳುವುದರಲ್ಲಿ ಇದರ ಉತ್ತರವಿದೆ. ಇದಕ್ಕೆ ಮುಖ್ಯ ಅಂಶ ವಿದೇಶಿಗರು ಎಷ್ಟರಮಟ್ಟಿಗೆ ಒಂದು ದೇಶದ ಹಣವನ್ನು ಸಂಪತ್ತಾಗಿ ಹೊಂದಲು ಬಯಸುತ್ತಾರೆ ಎನ್ನುವುದಾಗಿದೆ. ವಿದೇಶಿಗರು ಭಾರತೀಯ ಉತ್ಪನ್ನಗಳನ್ನು ಖರೀದಿಸಲು ಅಥವಾ ಭಾರತೀಯ ಕಂಪನಿಗಳಲ್ಲಿ ಹೂಡಿಕೆ ನಡೆಸಲು ಮೊದಲು ಭಾರತೀಯ ರೂಪಾಯಿಯನ್ನು ಖರೀದಿಸಬೇಕು. ವಿದೇಶೀ ಬೇಡಿಕೆ ಹೆಚ್ಚಾದಾಗ, ರೂಪಾಯಿ ಮೌಲ್ಯ ಹೆಚ್ಚಾಗುತ್ತದೆ. ವಿದೇಶೀ ಬೇಡಿಕೆ ಕಡಿಮೆಯಾದಾಗ ರೂಪಾಯಿ ಮೌಲ್ಯವೂ ಕಡಿಮೆಯಾಗುತ್ತದೆ. ಈಗ ವಿದೇಶೀ ಸಾಂಸ್ಥಿಕ ಹೂಡಿಕೆದಾರರು (ಫಾರೀನ್ ಇನ್ಸ್ಟಿಟ್ಯೂಷನಲ್ ಇನ್ವೆಸ್ಟರ್ಸ್ - ಎಫ್ಐಐ) ಭಾರತದಿಂದ ಅಪಾರ ಪ್ರಮಾಣದ ಹೂಡಿಕೆ ಹಣವನ್ನು ಹಿಂಪಡೆಯುತ್ತಿದ್ದಾರೆ. 2025ರ ವರ್ಷವಿಡೀ ವಿದೇಶೀ ಹೂಡಿಕೆದಾರರು ಬಿಲಿಯನ್‌ಗಟ್ಟಲೆ ಡಾಲರ್ ಮೊತ್ತವನ್ನು ಷೇರು ಮಾರುಕಟ್ಟೆಗಳಿಂದ ಮತ್ತು ಇತರ ಹೂಡಿಕೆಗಳಿಂದ ಹಿಂದೆ ಪಡೆದಿದ್ದಾರೆ. ಅವರು ಹೊರ ನಡೆದಾಗ, ತಮ್ಮಲ್ಲಿದ್ದ ರೂಪಾಯಿಯನ್ನು ಮರಳಿ ಡಾಲರ್ ಆಗಿ ಪರಿವರ್ತಿಸುತ್ತಾರೆ. ಇದರಿಂದ ಮಾರುಕಟ್ಟೆಯಲ್ಲಿ ರೂಪಾಯಿಯ ಪ್ರವಾಹ ಉಂಟಾಗಿ, ಡಾಲರ್‌ಗೆ ಅಪಾರ ಬೇಡಿಕೆ ಸೃಷ್ಟಿಯಾಗುತ್ತದೆ. ಈ ಸರಳ ಬೇಡಿಕೆ ಮತ್ತು ಪೂರೈಕೆ ವ್ಯತ್ಯಾಸ ರೂಪಾಯಿ ಮೌಲ್ಯವನ್ನು ಕುಸಿಯುವಂತೆ ಮಾಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಕುಸಿತವನ್ನು ತಡೆಯಲು ಅಪಾರ ಪ್ರಯತ್ನ ನಡೆಸುತ್ತಿದೆ. ಸೆಪ್ಟೆಂಬರ್ 2025ರ ಬಳಿಕ, ಆರ್‌ಬಿಐ ರೂಪಾಯಿಗೆ ಬೆಂಲ ನೀಡುವ ಸಲುವಾಗಿ ನಮ್ಮ ವಿದೇಶೀ ವಿನಿಮಯ ಸಂಗ್ರಹದಿಂದ 26 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಮೊತ್ತವನ್ನು ಮಾರಾಟ ಮಾಡಿದೆ. ಇದನ್ನು ಸರಳವಾಗಿ ವಿವರಿಸುವುದಾದರೆ: ಡಾಲರ್ ಅತಿಯಾಗಿ ದುಬಾರಿಯಾದಾಗ, ಆರ್‌ಬಿಐ ಮಾರುಕಟ್ಟೆಗೆ ಇನ್ನಷ್ಟು ಡಾಲರ್‌ಗಳನ್ನು ಬಿಡುಗಡೆಗೊಳಿಸುತ್ತದೆ. ಹೆಚ್ಚು ಡಾಲರ್ ಮಾರುಕಟ್ಟೆಗೆ ಪ್ರವೇಶಿಸಿದಾಗ, ಡಾಲರ್ ಮೌಲ್ಯ ಕುಸಿದು, ರೂಪಾಯಿ ಬೆಲೆ ಕುಸಿತವಾಗುವುದು ತಡೆಗಟ್ಟುತ್ತದೆ. ಆರ್‌ಬಿಐ ಇತ್ತೀಚೆಗೆ 1.9 ಬಿಲಿಯನ್ ಡಾಲರ್ ಮಾರಾಟ ಮಾಡಿದ್ದು, ನಮ್ಮ ವಿದೇಶೀ ವಿನಿಮಯ ಸಂಗ್ರಹ 687 ಬಿಲಿಯನ್ ಡಾಲರ್‌ಗೆ ಇಳಿದಿದೆ. ಈ ಪ್ರಮಾಣದ ಭಾರೀ ಮಧ್ಯಪ್ರವೇಶದ ಹೊರತಾಗಿಯೂ, ಬಲವಾದ ಬಾಹ್ಯ ಒತ್ತಡಗಳು ರೂಪಾಯಿ ಮೌಲ್ಯವನ್ನು ಕುಸಿಯುವಂತೆ ಮಾಡುತ್ತಿವೆ. ಅಮೆರಿಕದ ಅಪಾರ ಬಡ್ಡಿದರಗಳು ಅಮೆರಿಕದಲ್ಲಿ ಹೂಡಿಕೆ ಮಾಡುವುದು ಹೆಚ್ಚು ಆಕರ್ಷಕ ಎನಿಸುವಂತೆ ಮಾಡಿದ್ದು, ಭಾರತದಿಂದ ಹಣ ಹಿಂಪಡೆಯಲು ಕಾರಣವಾಗಿದೆ. ಡಾಲರ್‌ಗೆ ಜಾಗತಿಕ ಬೇಡಿಕೆ ಹೆಚ್ಚಾಗುತ್ತಿದ್ದು, ಇದರೊಡನೆ ಅಮೆರಿಕದ ಸುಂಕದ ಏರಿಕೆಯೂ ಹೆಚ್ಚಿನ ಒತ್ತಡ ಸೃಷ್ಟಿಸಿದೆ.
ಇಲ್ಲಿ ವಿಷಯ ಇನ್ನಷ್ಟು ಸಂಕೀರ್ಣವಾಗುತ್ತದೆ. ನಮ್ಮ ಆಂತರಿಕ ಖರೀದಿ ಸಾಕಷ್ಟು ಬಲವಾಗಿರುವುದರಿಂದ, ಉತ್ತಮ ಉತ್ಪಾದನಾ ಚಟುವಟಿಕೆಗಳು ನಡೆಯುವುದರಿಂದ, ಮತ್ತು ಸೇವಾ ವಲಯದ ಉತ್ತಮ ಪ್ರದರ್ಶನದಿಂದ ನಮ್ಮ ಜಿಡಿಪಿ ಶಕ್ತಿಯುತವಾಗಿದೆ. ಭಾರತೀಯರು ಹೆಚ್ಚು ಹೆಚ್ಚು ಖರೀದಿಸುತ್ತಿದ್ದು, ಉದ್ಯಮಗಳು ಹೆಚ್ಚು ಉತ್ಪಾದಿಸುತ್ತಿವೆ. ಇದರಿಂದ ನಮ್ಮ ಆಂತರಿಕ ಆರ್ಥಿಕತೆಯೂ ಶಕ್ತಿಯುತವಾಗಿದೆ. ಆದರೆ, ಈ ಪ್ರಗತಿ ನಮ್ಮ ಆಮದೂ ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ನಮ್ಮ ವಾಹನಗಳಿಗೆ ಹೆಚ್ಚಿನ ಕಚ್ಚಾ ತೈಲ ಬೇಕು, ನಮ್ಮ ಫೋನ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ಎಲೆಕ್ಟ್ರಾನಿಕ್ ಬಿಡಿಭಾಗಗಳು ಬೇಕು, ಕಾರ್ಖಾನೆಗಳಿಗೆ ಯಂತ್ರೋಪಕರಣಗಳು ಮತ್ತಿತರ ವಸ್ತುಗಳು ಬೇಕು. ಭಾರತದ ವ್ಯಾಪಾರ ಕೊರತೆ, ಅಂದರೆ ನಾವು ನಡೆಸುವ ಆಮದು ಮತ್ತು ರಫ್ತಿನ ನಡುವಿನ ವ್ಯತ್ಯಾಸ ಅಕ್ಟೋಬರ್ ಒಂದು ತಿಂಗಳಲ್ಲಿ ದಾಖಲೆಯ 41.7 ಬಿಲಿಯನ್ ಡಾಲರ್ ತಲುಪಿತ್ತು. ನಮ್ಮಿಂದ ಜಗತ್ತು ಖರೀದಿಸುವುದಕ್ಕಿಂತ ಸಾಕಷ್ಟು ಹೆಚ್ಚನ್ನು ನಾವು ಜಗತ್ತಿನಿಂದ ಖರೀದಿಸುತ್ತಿದ್ದೇವೆ. ನಾವು ಪ್ರತಿ ಸಲವೂ ಏನಾದರೂ ಆಮದು ಮಾಡಿಕೊಂಡಾಗ, ಅದಕ್ಕೆ ಪಾವತಿಸಲು ನಮಗೆ ಡಾಲರ್ ಬೇಕಾಗುತ್ತದೆ. ಡಾಲರ್‌ಗೆ ಇರುವ ನಿರಂತರ ಬೇಡಿಕೆ ರೂಪಾಯಿ ಮೌಲ್ಯವನ್ನು ಕೆಳಗಿಳಿಸುತ್ತಲೇ ಇದೆ.
ದುರ್ಬಲ ರೂಪಾಯಿ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಸೃಷ್ಟಿಸುತ್ತದೆ. ರೂಪಾಯಿ ಬೆಲೆಯಲ್ಲಿ ಕಚ್ಚಾತೈಲದ ಬೆಲೆ ಹೆಚ್ಚಾಗುವ ಕಾರಣಕ್ಕೆ ನೀವು ಪೆಟ್ರೋಲ್ ಪಂಪಿಗೆ ತೆರಳಿದಾಗ, ನೀವೂ ಹೆಚ್ಚಿನ ಬೆಲೆ ತೆರಬೇಕಾಗುತ್ತದೆ. ಎಲೆಕ್ಟ್ರಾನಿಕ್ ವಸ್ತುಗಳು ದುಬಾರಿಯಾಗುತ್ತವೆ. ನೀವು ಏನಾದರೂ ವಿದೇಶಕ್ಕೆ ಓದಲು ತೆರಳುವುದಿದ್ದರೆ, ಅಥವಾ ಅಂತರರಾಷ್ಟ್ರೀಯ ಪ್ರವಾಸ ಕೈಗೊಂಡರೆ, ನಿಮ್ಮ ಖರ್ಚು ನಾಟಕೀಯ ಹೆಚ್ಚಳ ಕಾಣುತ್ತದೆ. ಡಾಲರ್‌ನಲ್ಲಿ ಸಾಲ ಪಡೆದುಕೊಂಡ ಕಂಪನಿಗಳು ಈಗ ಅದನ್ನು ಮರುಪಾವತಿಸಲು ಹೆಚ್ಚಿನ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ರೂಪಾಯಿ ದುರ್ಬಲಗೊಂಡಾಗ, ಆಮದು ಉತ್ಪನ್ನಗಳು ದುಬಾರಿಯಾಗಿ, ಹಣದುಬ್ಬರವೂ ಹೆಚ್ಚಾಗುತ್ತದೆ. ಅಂತಿಮವಾಗಿ ಈ ಹೆಚ್ಚಿನ ಬೆಲೆ ಗ್ರಾಹಕರ ಕಿಸೆಯನ್ನೇ ಸುಡುತ್ತದೆ. ಇದು ಆರ್‌ಬಿಐ ಮೇಲೆ ಅಪಾರ ಒತ್ತಡ ಸೃಷ್ಟಿಸಿ, ಅದು ಹಣಕಾಸು ನೀತಿಯನ್ನು ಪುನರಾಲೋಚಿಸುವಂತೆ ಮಾಡುತ್ತದೆ.
ದುರ್ಬಲ ರೂಪಾಯಿಯಿಂದ ಒಂದಷ್ಟು ಜನರಿಗೆ ಲಾಭವಾಗುತ್ತದೆ. ರಫ್ತುದಾರರು ಮತ್ತು ಐಟಿ ಕಂಪನಿಗಳು ಡಾಲರ್‌ನಲ್ಲಿ ಆದಾಯ ಪಡೆಯುವುದರಿಂದ, ಅವುಗಳ ರೂಪಾಯಿ ಆದಾಯ ಹೆಚ್ಚಾಗುತ್ತದೆ. ನಿಮ್ಮ ಕಂಪನಿಯ ಸೇವೆಗಳಿಗೆ 1,000 ಡಾಲರ್ ಪಾವತಿ ಇದ್ದರೆ, ಸೋಮವಾರ ನಿಮಗೆ ₹ 89,530 ರೂಪಾಯಿ ಲಭಿಸಿದರೆ, ಬುಧವಾರ ₹ 90,050 ರೂಪಾಯಿ ಸಿಗುತ್ತದೆ. ರೂಪಾಯಿಯ ಕುಸಿತದಿಂದ ಅಲ್ಲಿ 520 ರೂಪಾಯಿ ಲಾಭವಾಗುತ್ತದೆ. ಆದರೆ, ಇದೇ ಕಂಪನಿಗಳು ಹೆಚ್ಚಿನ ಬೆಲೆಯಲ್ಲಿ ಆಮದು ಕಚ್ಚಾವಸ್ತುಗಳನ್ನು ಖರೀದಿಸಬೇಕಾದರೆ ಆಗ ಈ ಪ್ರಯೋಜನ ಕೈತಪ್ಪುತ್ತದೆ. ರೂಪಾಯಿ ಹೀಗೆ ನಿರಂತರವಾಗಿ ಅನಿಶ್ಚಿತವಾಗಿರುವುದರಿಂದ ಅಂತಿಮವಾಗಿ ಭಾರತಕ್ಕೆ ವಿದೇಶೀ ಹೂಡಿಕೆಯೇ ಕಡಿಮೆಯಾಗಬಹುದು ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದು, ಇದು ಅಪಾಯಕಾರಿ ಬೆಳವಣಿಗೆಯಾಗಲಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಈಗಾಗಲೇ ಭಾರತದ ಪ್ರಗತಿಯ ಮುನ್ಸೂಚನೆಯನ್ನು ಮುಂದಿನ ಹಣಕಾಸು ವರ್ಷದಲ್ಲಿ 6.2%ಗೆ ಇಳಿಯಬಹುದು ಎಂಬ ಮುನ್ಸೂಚನೆ ನೀಡಿದೆ. ಅಮೆರಿಕದ ಹೆಚ್ಚಿನ ಸುಂಕ ಮುಂದುವರಿಯಬಹುದು ಎಂದು ಅದು ಅಂದಾಜಿಸಿದೆ. ಅಮೆರಿಕದೊಡನೆ ಇನ್ನೂ ಒಪ್ಪಂದಕ್ಕೆ ಸಹಿ ಹಾಕದಿರುವ ಕೆಲವೇ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿದ್ದು, ಈ ಅನಿಶ್ಚಿತತೆ ಹೂಡಿಕೆದಾರರ ಆತ್ಮವಿಶ್ವಾಸ ಕಡಿಮೆಯಾಗಿಸಿದೆ. ಈ ಪರಿಸ್ಥಿತಿಯನ್ನು ಇನ್ನಷ್ಟು ತೀವ್ರವಾಗಿಸುವುದು ಎಂದರೆ, ನವೆಂಬರ್‌ನಲ್ಲಿ ಜಾಗತಿಕವಾಗಿ ಅಮೆರಿಕನ್ ಡಾಲರ್ ದುರ್ಬಲಗೊಂಡಿದ್ದರೂ, ನಮ್ಮ ರೂಪಾಯಿ ಕುಸಿತ ಕಂಡಿದೆ. ಮೆಕ್ಸಕೋದ ಪಿಸೊ, ಬ್ರೆಜಿಲ್‌ನ ರಿಯಲ್, ಮತ್ತು ದಕ್ಷಿಣ ಆಫ್ರಿಕಾದ ರಾಂಡ್ ಶಕ್ತಿ ಗಳಿಸಿದರೂ, ನಮ್ಮ ರೂಪಾಯಿ ಮಾತ್ರ ಅಪಾರ ಒತ್ತಡದಲ್ಲಿ ಸಿಲುಕಿದೆ.
ಇಲ್ಲಿನ ಸ್ಪಷ್ಟ ವಿಚಾರ ಏನೆಂದರೆ, ಆರ್ಥಿಕ ಪ್ರಗತಿ ಮತ್ತು ಹಣಕಾಸಿನ ಶಕ್ತಿ ಯಾವಾಗಲೂ ಒಂದಕ್ಕೊಂದು ಜೊತೆಯಾಗಿ ಸಾಗಬೇಕೆಂದಿಲ್ಲ. ನಮ್ಮ ಆರ್ಥಿಕತೆ ಪ್ರಗತಿ ಹೊಂದುತ್ತಿದ್ದರೂ, ವಿದೇಶೀ ಹೂಡಿಕೆದಾರರು ವಿಶ್ವಾಸ ಕಳೆದುಕೊಂಡರೆ, ನಮ್ಮ ಆಮದು ರಫ್ತಿಗಿಂತ ಸಾಕಷ್ಟು ಹೆಚ್ಚಾಗಿದ್ದರೆ, ಮತ್ತು ಜಾಗತಿಕ ಸ್ಥಿತಿಗತಿಗಳು ಡಾಲರ್‌ಗೆ ಪೂರಕವಾಗಿದ್ದರೆ, ನಮ್ಮ ಹಣದ ಮೌಲ್ಯ ಇಳಿಕೆ ಕಾಣಬಹುದು. ಈಗ ಪ್ರಬಲ ಆಂತರಿಕ ಪ್ರಗತಿಯ ಹೊರತಾಗಿಯೂ, ಬಾಹ್ಯ ಒತ್ತಡ ರೂಪಾಯಿಯನ್ನು ದುರ್ಬಲಗೊಳಿಸಿವೆ ಅಮೆರಿಕದೊಡನೆ ಮುಂದಿನ ವ್ಯಾಪಾರ ಮಾತುಕತೆ ಹೇಗೆ ಸಾಗುತ್ತದೆ, ವಿದೇಶೀ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಗೆ ಬರುತ್ತಾರೆಯೇ ಎನ್ನುವುದರ ಮೇಲೆ ಮುಂದಿನ ತಿಂಗಳುಗಳು ಭವಿಷ್ಯವನ್ನು ನಿರ್ಧರಿಸಲಿವೆ.
ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.