ADVERTISEMENT

ರಷ್ಯಾ ತೈಲ: ಎಚ್‌ಪಿಸಿಎಲ್‌ನಿಂದ ಖರೀದಿ, ರಿಲಯನ್ಸ್ ಹಿಂದೇಟು

ಭಾರತಕ್ಕೆ ರಿಯಾಯಿತಿ ದರದಲ್ಲಿ ತೈಲ ಮಾರುತ್ತಿರುವ ರಷ್ಯಾ

ರಾಯಿಟರ್ಸ್
Published 17 ಮಾರ್ಚ್ 2022, 21:42 IST
Last Updated 17 ಮಾರ್ಚ್ 2022, 21:42 IST
   

ನವದೆಹಲಿ: ಕೇಂದ್ರ ಸರ್ಕಾರದ ಒಡೆತನದ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (ಎಚ್‌ಪಿಸಿಎಲ್) ರಷ್ಯಾದಿಂದ ಕಚ್ಚಾ ತೈಲ ಖರೀದಿಸಿದೆ. ಆದರೆ, ಪಾಶ್ಚಿಮಾತ್ಯ ದೇಶಗಳು ಹೇರಿರುವ ನಿರ್ಬಂಧದ ಕಾರಣದಿಂದಾಗಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌, ರಷ್ಯಾದಿಂದ ಕಚ್ಚಾ ತೈಲ ಖರೀದಿಸದೆ ಇರುವ ಸಾಧ್ಯತೆ ಇದೆ.

10 ಲಕ್ಷ ಬ್ಯಾರೆಲ್ ಯೂರಲ್ಸ್ ಕಚ್ಚಾ ತೈಲ ಖರೀದಿಗೆ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊಕೆಮಿಕಲ್ಸ್ ಲಿಮಿಟೆಡ್‌ (ಎಂಆರ್‌ಪಿಎಲ್) ಕಂಪನಿಯು ಟೆಂಡರ್ ಕರೆದಿದೆ.

‘ರಷ್ಯಾದಿಂದ ಖರೀದಿಸಲು ಸಾಧ್ಯವಾದರೂ, ನಿರ್ಬಂಧಗಳ ಕಾರಣದಿಂದಾಗಿ ನಾವು ಅದರಿಂದ ದೂರ ಉಳಿಯುತ್ತೇವೆ’ ಎಂದು ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ನ ಹಿರಿಯ ಉಪಾಧ್ಯಕ್ಷ ರಾಜೇಶ್ ರಾವತ್ ಹೇಳಿದ್ದಾರೆ. ರಿಲಯನ್ಸ್ ಕಂಪನಿಯು ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುವುದು ಮಧ್ಯಪ್ರಾಚ್ಯದ ದೇಶಗಳು ಹಾಗೂ ಅಮೆರಿಕದಿಂದ.

ADVERTISEMENT

ಪಾಶ್ಚಿಮಾತ್ಯ ದೇಶಗಳು ಹೇರಿರುವ ನಿರ್ಬಂಧದ ಕಾರಣದಿಂದಾಗಿ ಹಲವು ಕಂಪನಿಗಳು ಮತ್ತು ದೇಶಗಳು ರಷ್ಯಾದಿಂದ ಕಚ್ಚಾ ತೈಲ ತರಿಸಿಕೊಳ್ಳುತ್ತಿಲ್ಲ. ರಷ್ಯಾ ದೇಶವು ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ನಂತರದಲ್ಲಿ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ರಷ್ಯಾದಿಂದ 30 ಲಕ್ಷ ಬ್ಯಾರೆಲ್‌ ಯೂರಲ್ಸ್ ಕಚ್ಚಾ ತೈಲ ಖರೀದಿಸಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆಗೆ ಹೋಲಿಸಿದರೆ, ಪ್ರತಿ ಬ್ಯಾರೆಲ್‌ಗೆ 20–25 ಡಾಲರ್‌ ಕಡಿಮೆ ಬೆಲೆಗೆ ಯೂರಲ್ಸ್ ಕಚ್ಚಾ ತೈಲವನ್ನು ಐಒಸಿ ಖರೀದಿಸಿದೆ.

ಎಚ್‌ಪಿಸಿಎಲ್‌ ಕಂಪನಿಯು ರಷ್ಯಾದಿಂದ 20 ಲಕ್ಷ ಬ್ಯಾರೆಲ್ ಯೂರಲ್ಸ್ ಕಚ್ಚಾ ತೈಲ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ. ಎಚ್‌ಪಿಸಿಎಲ್‌ ಹೀಗೆ ಖರೀದಿಸುತ್ತಿರುವುದು ಬಹಳ ಅಪರೂಪ. ಯುರೋಪಿನ ವ್ಯಾಪಾರಿ ಕಂಪನಿ ವಿಟೋಲ್‌ನ ಮೂಲಕ ಈ ಖರೀದಿ ನಡೆದಿದೆ.

ಐಒಸಿ ಕಂಪನಿಯು ರಷ್ಯಾದ ರೊಸ್ನೆಫ್ಟ್ ಕಂಪನಿ ಜೊತೆ 2020ರಿಂದಲೂ ಒಪ್ಪಂದ ಹೊಂದಿದೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ವೆಚ್ಚ ಹೆಚ್ಚು ಎಂಬ ಕಾರಣಕ್ಕೆ, ಅಲ್ಲಿಂದ ತೈಲ ತರಿಸಿಕೊಳ್ಳುತ್ತಿರಲಿಲ್ಲ. ಆದರೆ, ಈಗ ರಿಯಾಯಿತಿ ಬೆಲೆಯಲ್ಲಿ ತೈಲ ಒದಗಿಸಲು ರಷ್ಯಾ ಮುಂದಾಗಿರುವ ಕಾರಣ, ಭಾರತದ ಕಂಪನಿಗಳು ಆ ಕಡೆ ಮುಖ ಮಾಡಿವೆ ಎಂದು ಮೂಲಗಳು ಹೇಳಿವೆ.

ಆರ್ಥಿಕ ನಿರ್ಬಂಧಗಳ ಕಾರಣದಿಂದಾಗಿ ತೈಲದ ಸಾಗಣೆ ಹಾಗೂ ವಿಮೆ ವಿಚಾರದಲ್ಲಿ ತೊಂದರೆ ಎದುರಾಗದಿರಲಿ ಎಂದು ಭಾರತದ ಕಂಪನಿಗಳು, ಸಾಗಣೆಯ ಹೊಣೆಯನ್ನು ವರ್ತಕರಿಗೇ ವಹಿಸುತ್ತಿವೆ. ಸದ್ಯಕ್ಕೆ ಪಾವತಿಗಳು ಡಾಲರ್‌ ಮೂಲಕ ನಡೆಯುತ್ತಿವೆ ಎಂದು ಗೊತ್ತಾಗಿದೆ. ರಷ್ಯಾದಿಂದ ತೈಲ ಮತ್ತು ಇತರ ಇಂಧನಗಳನ್ನು ಖರೀದಿಸಿ, ಅಂತರರಾಷ್ಟ್ರೀಯ ಪಾವತಿ ವ್ಯವಸ್ಥೆ ಮೂಲಕ ಹಣ ಕೊಡಲು ಅವಕಾಶ ಇದೆ.

ರಷ್ಯಾದಿಂದ ವಿನಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸಿದರೆ ಭಾರತವು ತಾನು ವಿಧಿಸಿದ ನಿರ್ಬಂಧಗಳನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ ಎಂದು ಅಮೆರಿಕವು ಸ್ಪಷ್ಟಪಡಿಸಿದೆ.

ಬೆಲೆ ಹೆಚ್ಚಳ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಗುರುವಾರ ಶೇಕಡ 3.97ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ಗೆ 101.91 ಡಾಲರ್‌ಗೆ ತಲುಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.