ADVERTISEMENT

ವಿಮಾನ ಸಂಚಾರದಲ್ಲಿ ವ್ಯತ್ಯಯ: ಇಂಡಿಗೊ ಮಾಲೀಕರು ಯಾರು?

ಏಜೆನ್ಸೀಸ್
Published 6 ಡಿಸೆಂಬರ್ 2025, 4:45 IST
Last Updated 6 ಡಿಸೆಂಬರ್ 2025, 4:45 IST
<div class="paragraphs"><p>ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ</p></div>

ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ

   

ಕೃಪೆ: ಪಿಟಿಐ

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಎನಿಸಿರುವ 'ಇಂಡಿಗೊ' ವಿಮಾನಗಳ ಹಾರಾಟದಲ್ಲಿ ತೀವ್ರ ವ್ಯತ್ಯಯವಾಗಿದೆ. ಇನ್ನೂ ಎರಡು ಮೂರು ದಿನ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಡಿಸೆಂಬರ್‌ 10ರಿಂದ 15ರ ವೇಳೆಗೆ ಸಂಚಾರ ಸಹಜ ಸ್ಥಿತಿಗೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ. ಇದರಿಂದಾಗಿ, ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.

ADVERTISEMENT

ಶುಕ್ರವಾರದ ವರೆಗೆ ಸಾವಿರಾರು ಮಾರ್ಗಗಳಲ್ಲಿ ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತಗೊಂಡಿತ್ತು. ಪ್ರಯಾಣಿಕರಿಗೆ ತೊಂದರೆಯಾಗಿರುವುದಕ್ಕೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಪೀಟರ್‌ ಎಲ್ಬರ್ಸ್‌ ಅವರು ವಿಡಿಯೊ ಸಂದೇಶದ ಮೂಲಕ ಕ್ಷಮೆಯಾಚಿಸಿದ್ದಾರೆ.

ಸಂಚಾರವನ್ನು ಸಹಜಸ್ಥಿತಿಗೆ ತರಲು ಇನ್ನಷ್ಟು ಕ್ರಮ ಕೈಗೊಳ್ಳಬೇಕಿದೆ ಎಂಬುದನ್ನು ಒಪ್ಪಿಕೊಂಡಿರುವ ಅವರು, ಎಲ್ಲ ವ್ಯವಸ್ಥೆಗಳು ಹಾಗೂ ವೇಳಾಪಟ್ಟಿಯನ್ನು ಮರುನಿಗದಿ ಮಾಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.

ಇಂಡಿಗೊ ಏರ್‌ಲೈನ್ಸ್‌ ಮಾಲೀಕರು ಯಾರು?
1989ರಲ್ಲಿ ಆರಂಭವಾದ ಇಂಟರ್‌ಗ್ಲೋಬ್‌ ಏವಿಯೇಷನ್‌ನ ವ್ಯವಸ್ಥಾಪಕ ನಿರ್ದೇಶಕ ರಾಹುಲ್‌ ಭಾಟಿಯಾ ಹಾಗೂ ರಾಕೇಶ್ ಗಂಗ್ವಾಲ್ ಅವರು ಇಂಡಿಗೊ ಏರ್‌ಲೈನ್ಸ್‌ನ ಸಹ ಸಂಸ್ಥಾಪಕರು.

2022ರಲ್ಲಿ ಕಂಪನಿಯ ನಿರ್ದೇಶಕರ ಮಂಡಳಿಯಿಂದ ಕೆಳಗಿಳಿದ ಗಂಗ್ವಾಲ್‌ ಅವರು, ನಂತರದ ದಿನಗಳಲ್ಲಿ ಇಂಡಿಗೊದಲ್ಲಿನ ಪಾಲು ಹಾಗೂ ಒಡೆತನದ ಮೇಲಿನ ಹಿಡಿತವನ್ನು ಕ್ರಮೇಣ ಕಡಿಮೆ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಅವರು ಮತ್ತು ಅವರ ಕುಟುಂಬವು ಇಂಡಿಗೊ ಷೇರುಗಳ ಪೈಕಿ, ಈಗ ಶೇ 13.5ರಷ್ಟನ್ನು ಮಾತ್ರವೇ ಹೊಂದಿದೆ. ಹೀಗಾಗಿ, ರಾಹುಲ್‌ ಭಾಟಿಯಾ ಅವರು ಪ್ರಮುಖ ಪ್ರವರ್ತಕರಾಗಿ ಉಳಿದಿದ್ದಾರೆ.

2006ರಲ್ಲಿ ಆರಂಭವಾದ ಇಂಡಿಗೊದ ಮಾರುಕಟ್ಟೆ ಮೌಲ್ಯ 2025ರ ಹೊತ್ತಿಗೆ ₹ 2.10 ಲಕ್ಷ ಕೋಟಿ (23.4 ಬಿಲಿಯನ್‌ ಡಾಲರ್‌) ಇದೆ ಎಂದು ಅಂದಾಜಿಸಲಾಗಿದೆ.

ಇಂಟರ್‌ಗ್ಲೋಬ್‌ ವೆಬ್‌ಸೈಟ್‌ನಲ್ಲಿರುವ ಮಾಹಿತಿ ಪ್ರಕಾರ ರಾಹುಲ್‌ ಅವರು, ಕೆನಡಾದ ಒಂಟಾರಿಯೊದಲ್ಲಿರುವ ವಾಟರ್‌ಲೂ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಷಯದಲ್ಲಿ ಪದವಿ ಪಡೆದಿದ್ದಾರೆ.

ಅವರ ನೇತೃತ್ವದಲ್ಲಿ ಇಂಡಿಗೊ ಆಡಳಿತ ಮಂಡಳಿ ಬಲ ಪಡೆದುಕೊಂಡಿದೆ. ಆತಿಥ್ಯ, ಲಾಜಿಸ್ಟಿಕ್‌, ತಂತ್ರಜ್ಞಾನ, ವಿಮಾನಯಾನ ನಿರ್ವಹಣೆ, ನುರಿತ ಪೈಲಟ್‌ಗಳು, ಎಂಜಿನಿಯರಿಂಗ್‌ ಸುಧಾರಣೆಗಳೊಂದಿಗೆ ಇಂಡಿಗೊ ಸಾಮರ್ಥ್ಯ ವೃದ್ಧಿಸಿದೆ.

ನಿವ್ವಳ ಮೌಲ್ಯ
ಭಾರತದ ಅಗ್ರ ವಾಯುಯಾನ ಸಂಸ್ಥೆ ಇಂಡಿಗೊದ ಪ್ರಮುಖ ಪ್ರವರ್ತಕರಾಗಿರುವುದಷ್ಟೇ ಅಲ್ಲದೆ, ಇಂಟರ್‌ಗ್ಲೋಬ್‌ ಏವಿಯೇಷನ್‌ ಅನ್ನೂ ಮುನ್ನಡೆಸುತ್ತಿದ್ದಾರೆ. ಅದರಲ್ಲಿಯೂ ಶೇ 0.01ರಷ್ಟು ನೇರ ಪಾಲನ್ನು ಅಥವಾ 40,000 ಷೇರುಗಳನ್ನು ಹೊಂದಿದ್ದಾರೆ ಎಂದು ಬಿಎಸ್‌ಇ ದತ್ತಾಂಶಗಳಿಂದ ತಿಳಿದುಬಂದಿದೆ.

ಫೋರ್ಬ್ಸ್‌ ಮಾಹಿತಿ ಪ್ರಕಾರ, ರಾಹುಲ್‌ ಅವರ ನಿವ್ವಳ ಮೌಲ್ಯವು 2025ರ ಡಿಸೆಂಬರ್ 5ರ ವೇಳೆಗೆ ₹ 72 ಸಾವಿರ ಕೋಟಿ (ಸುಮಾರು $8.1 ಬಿಲಿಯನ್) ಎಂದು ಅಂದಾಜಿಸಲಾಗಿದೆ. ಫೋರ್ಬ್ಸ್ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಅವರು 420ನೇ ಸ್ಥಾನದಲ್ಲಿದ್ದಾರೆ.

ಇಂಡಿಗೊ ಬಿಕ್ಕಟ್ಟಿನ ಕಾರಣ ಅವರ ನಿವ್ವಳ ಮೌಲ್ಯದಲ್ಲಿ ಶೇ 1.02ರಷ್ಟು ಅಂದರೆ ₹ 755 ಕೋಟಿಯಷ್ಟು (84 ಮಿಲಿಯನ್‌ ಡಾಲರ್‌) ಶುಕ್ರವಾರ ಒಂದೇ ದಿನ ಕುಸಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.