ADVERTISEMENT

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ವರಮಾನ ನಷ್ಟ ₹ 19 ಸಾವಿರ ಕೋಟಿ

ಇಂಧನ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪರಿಣಾಮ: ಮೂಡಿಸ್‌ ವರದಿ

ಪಿಟಿಐ
Published 24 ಮಾರ್ಚ್ 2022, 12:53 IST
Last Updated 24 ಮಾರ್ಚ್ 2022, 12:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ಕಂಪನಿಗಳು ಕಚ್ಚಾ ತೈಲ ದರ ಹೆಚ್ಚಳಕ್ಕೆ ಅನುಗುಣವಾಗಿ ಬಹಳ ದಿನಗಳವರೆಗೆ ಇಂಧನ ದರ ಹೆಚ್ಚಿಸದ ಕಾರಣದಿಂದಾಗಿ ಮಾರ್ಚ್‌ನಲ್ಲಿ ಅಂದಾಜು ₹ 19 ಸಾವಿರ ಕೋಟಿ ನಷ್ಟ ಅನುಭವಿಸಿವೆ ಎಂದು ಮೂಡಿಸ್‌ ಇನ್‌ವೆಸ್ಟರ್ಸ್‌ ಸರ್ವಿಸಸ್‌ ಗುರುವಾರ ಹೇಳಿದೆ.

ಇಂಡಿಯನ್ ಆಯಿಲ್ (ಐಒಸಿ) ನಷ್ಟವು ₹ 7,600 ಕೋಟಿಯಿಂದ ₹ 8,360 ಕೋಟಿಯಷ್ಟು ಇರಲಿದೆ. ಭಾರತ್ ‍ಪೆಟ್ರೋಲಿಯಂ (ಬಿಪಿಸಿಎಲ್‌) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ (ಎಚ್‌ಪಿಸಿಎಲ್‌) ಕಂಪನಿಗಳ ನಷ್ಟವು ತಲಾ ₹ 4,180 ಕೋಟಿಯಿಂದ ₹4,940 ಕೋಟಿಯಷ್ಟು ಆಗುವ ಅಂದಾಜು ಮಾಡಲಾಗಿದೆ ಎಂದು ತಿಳಿಸಿದೆ.

ಕಚ್ಚಾ ತೈಲ ದರವು ನವೆಂಬರ್‌ ಆರಂಭದಲ್ಲಿ ಬ್ಯಾರಲ್‌ಗೆ 82 ಡಾಲರ್‌ ಇದ್ದಿದ್ದು, ಮಾರ್ಚ್‌ ತಿಂಗಳ ಮೂರು ವಾರಗಳಲ್ಲಿ ಸರಾಸರಿ 111 ಡಾಲರ್‌ವರೆಗೆ ಏರಿಕೆ ಕಂಡಿತ್ತು. ಹೀಗಿದ್ದರೂ 2021ರ ನವೆಂಬರ್‌ 4ರಿಂದ 2022ರ ಮಾರ್ಚ್‌ 21ರವರೆಗೆ ಪೆಟ್ರೋಲ್‌, ಡೀಸೆಲ್ ದರ ಹೆಚ್ಚಿಸಿರಲಿಲ್ಲ.

ADVERTISEMENT

ಐಒಸಿ, ಬಿಪಿಸಿಎಲ್‌ ಮತ್ತು ಎಚ್‌ಪಿಸಿಎಲ್‌ ಕಂಪನಿಗಳು ಮಾರ್ಚ್‌ 22 ಮತ್ತು 23ರಂದು ಪೆಟ್ರೋಲ್‌, ಡೀಸೆಲ್ ದರವನ್ನು ಪ್ರತಿ ಲೀಟರಿಗೆ ತಲಾ 80 ಪೈಸೆ ಹೆಚ್ಚಿಸಿವೆ. ಆದರೆ, ಗುರುವಾರ ಯಾವುದೇ ಬದಲಾವಣೆ ಮಾಡಿಲ್ಲ.

ಸದ್ಯದ ಮಾರುಕಟ್ಟೆ ದರದ ಆಧಾರದ ಮೇಲೆ, ತೈಲ ಮಾರಾಟ ಕಂಪನಿಗಳ ವರಮಾನದಲ್ಲಿ ಈಗ ಪ್ರತಿ ಬ್ಯಾರಲ್‌ಗೆ ಪೆಟ್ರೋಲ್‌ ಮತ್ತು ಡೀಸೆಲ್ ಮಾರಾಟದಿಂದ ₹ 1,824 ನಷ್ಟ ಆಗುತ್ತಿದೆ ಎಂದು ಅದು ಮಾಹಿತಿ ನೀಡಿದೆ.

ಒಂದೊಮ್ಮೆ ಕಚ್ಚಾ ತೈಲ ದರವು ಬ್ಯಾರಲ್‌ಗೆ 111 ಡಾಲರ್‌ ಮಟ್ಟದಲ್ಲಿಯೇ ಮುಂದುವರಿದರೆ, ಇದಕ್ಕೆ ಅನುಗುಣವಾಗಿ ಕಂಪನಿಗಳು ಮಾರಾಟ ದರ ಹೆಚ್ಚಿಸದೇ ಇದ್ದರೆ, ಪೆಟ್ರೋಲ್‌ ಮತ್ತು ಡೀಸೆಲ್‌ ಮಾರಾಟದಿಂದ ಈ ಮೂರು ಕಂಪನಿಗಳು ನಿತ್ಯ ಒಟ್ಟು ₹ 490 ಕೋಟಿಯಿಂದ ₹ 532 ಕೋಟಿವರೆಗೆ ನಷ್ಟ ಅನುಭವಿಸಲಿವೆ ಎಂದು ಹೇಳಿದೆ.

ಹೂಡಿಕೆ ಮೌಲ್ಯ ಕುಸಿತ: ರಷ್ಯಾದ ಮೇಲೆ ಆಮದು ನಿಷೇಧ ಮತ್ತು ಅಂತರರಾಷ್ಟ್ರೀಯ ನಿರ್ಬಂಧಗಳು ಇರುವುದರಿಂದ ಭಾರತದ ಕಂಪನಿಗಳು ರಷ್ಯಾದ ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿ ಮಾಡಿರುವ ಹೂಡಿಕೆಯ ಮೌಲ್ಯವು ಕುಸಿಯುವ ಸಾಧ್ಯತೆ ಇದೆ ಎಂದು ಕೂಡ ಮೂಡಿಸ್‌ ಹೇಳಿದೆ.

ಒಎನ್‌ಜಿಸಿ, ಆಯಿಲ್‌ ಇಂಡಿಯಾ, ಇಂಡಿಯನ್‌ ಆಯಿಲ್‌ ಮತ್ತು ಭಾರತ್‌ ಪೆಟ್ರೋಲಿಯಂ ಕಂಪನಿಗಳು ರಷ್ಯಾದ ತೈಲ ಮತ್ತು ಅನಿಲ ಕಂಪನಿಗಳಲ್ಲಿ ₹ 1.21 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಿವೆ.

ನಿರ್ಬಂಧಗಳ ಕಾರಣದಿಂದಾಗಿ ರಷ್ಯಾದ ತೈಲ ಮತ್ತು ಅನಿಲ ಕ್ಷೇತ್ರದ ಉತ್ಪಾದನಾ ಸಾಮರ್ಥ್ಯ ತಗ್ಗಲಿದೆ. ಇದರಿಂದಾಗಿ ಭಾರತದ ಕಂಪನಿಗಳಿಗೆ ನಷ್ಟವಾಗಲಿದೆ ಎಂದು ಮೂಡಿಸ್‌ ಹೇಳಿದೆ. ಬಿಪಿ ಮತ್ತು ಶೆಲ್‌ನಂತಹ ಬಹುರಾಷ್ಟ್ರೀಯ ಕಂಪನಿಗಳು ರಷ್ಯಾದಲ್ಲಿ ಹೂಡಿಕೆ ಮಾಡುವುದರಿಂದ ಹೊರಬರುವುದಾಗಿ ಘೋಷಿಸಿವೆ. ಆದರೆ, ಭಾರತದ ಕಂಪನಿಗಳು ಅಂತಹ ಯಾವುದೇ ನಿರ್ಧಾರವನ್ನು ಈವರೆಗೆ ತೆಗೆದುಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.