
ನವದೆಹಲಿ: ಪಶ್ಚಿಮ ಏಷ್ಯಾದಲ್ಲಿನ ಸಮರವು ವ್ಯಾಪಾರ ವಹಿವಾಟಿಗೆ ಧಕ್ಕೆ ಉಂಟುಮಾಡಬಹುದು, ಸರಕು ಸಾಗಣೆ ಮತ್ತು ವಿಮಾ ವೆಚ್ಚವನ್ನು ಹೆಚ್ಚಿಸಬಹುದು, ಸರಕು ಸಾಗಣೆಯಲ್ಲಿ ವಿಳಂಬಕ್ಕೆ ಕಾರಣವಾಗಬಹುದು, ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಗೆ ದಾರಿ ಮಾಡಿಕೊಟ್ಟು ಭಾರತದ ಆಮದು ವೆಚ್ಚಗಳು ಹೆಚ್ಚುವಂತೆ ಮಾಡಬಹುದು ಎಂದು ಪರಿಣತರು ಅಂದಾಜು ಮಾಡಿದ್ದಾರೆ.
ಪಶ್ಚಿಮದ ದೇಶಗಳು ವಿಧಿಸಿದ ವಿವಿಧ ನಿರ್ಬಂಧಗಳ ಕಾರಣದಿಂದಾಗಿ ಭಾರತ ಮತ್ತು ಇರಾನ್ ನಡುವಿನ ವ್ಯಾಪಾರವು ಈಚಿನ ವರ್ಷಗಳಲ್ಲಿ ಕಡಿಮೆ ಆಗಿದೆ. ಆದರೆ ಬಹರೇನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ ಜೊತೆಗಿನ ವ್ಯಾಪಾರ ವಹಿವಾಟು ಹೆಚ್ಚಳವಾಗಿದೆ.
ಸಮರವು ದೀರ್ಘ ಅವಧಿಗೆ ಮುಂದುವರಿದರೆ ಭಾರತದ ವ್ಯಾಪಾರ ವಹಿವಾಟುಗಳಿಗೆ ಧಕ್ಕೆ ಆಗಬಹುದು ಎಂದು ತಜ್ಞರು ಹೇಳಿದ್ದಾರೆ.
ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿದೆ ಎಂದು ವರದಿಗಳು ಹೇಳುತ್ತಿವೆ. ‘ಇಲ್ಲಿ ಉಂಟಾಗುವ ಯಾವುದೇ ಅಡಚಣೆಯು ಸರಕು ಸಾಗಣೆ ಮತ್ತು ವಿಮಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅದರಿಂದಾಗಿ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆಯು ಹೆಚ್ಚಳ ಕಾಣುತ್ತದೆ. ಇದರ ಪರಿಣಾಮವು ಭಾರತದ ಆಮದು ವೆಚ್ಚಗಳಲ್ಲಿ ನೇರವಾಗಿ ಕಾಣಿಸಿಕೊಳ್ಳುತ್ತದೆ’ ಎಂದು ಜಿಟಿಆರ್‌ಐ (ಗ್ಲೋಬಲ್ ಟ್ರೇಡ್ ರಿಸರ್ಚ್ ಇನಿಷಿಯೇಟಿವ್) ಹೇಳಿದೆ.
ಈ ಯುದ್ಧದ ಕಾರಣದಿಂದಾಗಿ ಜಲಮಾರ್ಗಗಳಿಗೆ ಧಕ್ಕೆ ಆಗಿದೆ. ಇದು ಭಾರತದ ರಫ್ತುದಾರರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 130 ಡಾಲರ್‌ವರೆಗೂ ಹೆಚ್ಚಳ ಆಗಬಹುದು. ಈ ರೀತಿ ಆದಲ್ಲಿ ಹಣದುಬ್ಬರ ಹೆಚ್ಚಬಹುದು ಎಂದು ವ್ಯಾಪಾರ ತಜ್ಞ ಬಿಸ್ವಜಿತ್ ಧರ್ ಅಂದಾಜಿಸಿದ್ದಾರೆ.
ಯುದ್ಧದ ಕಾರಣದಿಂದಾಗಿ ಹಳೆಯ ಸರಕು ಸಾಗಣೆ ಮಾರ್ಗಗಳಲ್ಲಿ ಅಡಚಣೆ ಈಗಾಗಲೇ ಕಾಣುತ್ತಿದೆ ಎಂದು ಭಾರತೀಯ ರಫ್ತುದಾರರ ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ಅಧ್ಯಕ್ಷ ಎಸ್.ಸಿ. ರಲ್ಹಾನ್ ತಿಳಿಸಿದ್ದಾರೆ.
‘ವಿಮಾನ ಮಾರ್ಗಗಳಲ್ಲಿ ಬದಲಾಣೆ ತರಲಾಗುತ್ತಿದೆ. ಕೆಂಪು ಸಮುದ್ರ ಮತ್ತು ಕೊಲ್ಲಿ ರಾಷ್ಟ್ರಗಳ ಸನಿಹದ ಪ್ರಮುಖ ಜಲಸಂಧಿಗಳ ಮೂಲಕ ಸಾಗುವ ಸಮುದ್ರ ಮಾರ್ಗಗಳಲ್ಲಿ ಅನಿಶ್ಚಿತ ಸ್ಥಿತಿ ಹೆಚ್ಚಾಗಿದೆ’ ಎಂದು ರಲ್ಹಾನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.