ADVERTISEMENT

ಐಟಿಆರ್ ಸಲ್ಲಿಕೆಗೆ ಡಿಸೆಂಬರ್ 31ರವರೆಗೆ ಅವಕಾಶ: ₹ 5 ಸಾವಿರದವರೆಗೆ ದಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2025, 11:43 IST
Last Updated 20 ಡಿಸೆಂಬರ್ 2025, 11:43 IST
ಐಟಿಆರ್
ಐಟಿಆರ್   

2024–25 ರ ಹಣಕಾಸು ವರ್ಷದ ವಿಳಂಬಿತ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಗಡುವು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ.₹ 5 ಸಾವಿರದ ವರೆಗೆ ದಂಡ ಶುಲ್ಕ ಪಾವತಿಸಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಸೆಪ್ಟೆಂಬರ್ 16ರ ಗುಡುವು ತಪ್ಪಿಸಿಕೊಂಡವರಿಗೆ ಹಾಗೂ ರಿಟರ್ನ್ಸ್ ಸಲ್ಲಿಕೆಯಲ್ಲಿ ದೋಷ ಇರುವವರಿಗೆ ಇದು ಅನುಕೂಲವಾಗಲಿದೆ.

ಆದಾಯ ತೆರಿಗೆ ಸೆಕ್ಷನ್ 234 ಎಫ್ ನಡಿ ದಂಡ ಶುಲ್ಕ ಪಾವತಿಸಿ ರಿಟರ್ನ್ಸ್ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

ವಿಳಂಬಿತ ಸಲ್ಲಿಕೆಗೆ ದಂಡ

ವಿಳಂಬಿತ ಐಟಿಆರ್ ಸಲ್ಲಿಕೆಗೆ ದಂಡ ವಿಧಿಸುವ ಪ್ತಸ್ತಾವ ಐಟಿ ಕಾಯ್ದೆಯ ಸೆಕ್ಷನ್ 234ಎಫ್‌ನಲ್ಲಿದೆ. ಉದಾಹಣೆಗೆ 2024–25ರ ಹಣಕಾಸು ವರ್ಷಕ್ಕೆ ಐಟಿಆರ್ ಸಲ್ಲಿಸುವ ಕೊನೆಯ ದಿನಾಂಕ 2025 ಸೆಪ್ಟೆಂಬರ್ 16 ಆಗಿತ್ತು. ವಿಳಂಬಿತ ಸಲ್ಲಿಕೆಗೆ ದಂಡ ಶುಲ್ಕ ವಿಧಿಸಲಾಗುತ್ತದೆ. ವ್ಯಕ್ತಿಯ ಆದಾಯಕ್ಕನುಗುಣವಾಗಿ ₹ 1000 ಅಥವಾ ₹ 5,000 ದಂಡ ಪಾವತಿ ಮಾಡಬೇಕು.

ADVERTISEMENT

ಗಡುವು ಮೀರಿದ ಬಳಿಕ, ಡಿಸೆಂಬರ್ 31ರ ಒಳಗಾಗಿ ಐಟಿಆರ್ ಸಲ್ಲಿಸುವು ವ್ಯಕ್ತಿಯ ಆದಾಯ ತೆರಿಗೆ ಪಾವತಿ ₹ 5 ಲಕ್ಷಕ್ಕಿಂತ ಹೆಚ್ಚಿದ್ದರೆ ₹ 5 ಸಾವಿರ ದಂಡ ಶುಲ್ಕ ಪಾವತಿ ಮಾಡಬೇಕು. ₹ 5 ಲಕ್ಷಕ್ಕಿಂತ ಕಡಿಮೆ ಇದ್ದರೆ ₹ 1 ಸಾವಿರ ದಂಡ.

ಸರಿಯಾದ ಸಮಯಕ್ಕೆ ಐಟಿಆರ್ ಸಲ್ಲಿಸುವುದರಿಂದ ಆಗುವ ಲಾಭಗಳು

ನೀಡಿದ ಗಡುವಿನೊಳಗೆ ಐಟಿಆರ್ ಸಲ್ಲಿಸುವುದು ಜವಾಬ್ದಾರಿಯೂ ಹೌದು, ನಿಮಗೆ ನೀವೆ ಮಾಡಿಕೊಳ್ಳುವ ಉಪಕಾರವೂ ಹೌದು. ಸೂಕ್ತ ಸಮಯಕ್ಕೆ ಐಟಿಆರ್ ಸಲ್ಲಿಕೆಯು ಹಲವು ವಿಷಯದಲ್ಲಿ ನಿಮಗೆ ಲಾಭದಾಯಕ.

  • ಸಾಲ ಪಡೆಯುವುದು ಸುಲಭ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದರೆ ವಾಹನ, ಗೃಹ, ವೈಯಕ್ತಿಕ ಸಾಲ ಪಡೆಯುವುದು ಸುಲಭವಾಗಲಿದೆ.

  • ತೆರಿಗೆ ಮರುಪಾವತಿ: ನೀವು ಆದಾಯ ತೆರಿಗೆ ಇಲಾಖೆಗೆ ಹೆಚ್ಚುವರಿ ತೆರಿಗೆ ಪಾವತಿ ಮಾಡಿದ್ದರೆ, ಅದನ್ನು ಮರುಪಾವತಿ ಮಾಡಿಕೊಳ್ಳಲೂ ಐಟಿಆರ್ ಸಲ್ಲಿಕೆ ಮಾಡಬೇಕು.

  • ಆದಾಯ ಹಾಗೂ ವಿಳಾಸದ ಪುರಾವೆ: ಐಟಿಆರ್ ಅನ್ನು ನಿಮ್ಮ ಆದಾಯ ಹಾಗೂ ವಿಳಾಸದ ಪುರಾವೆಯಾಗಿಯೂ ಬಳಕೆ ಮಾಡಬಹುದು. ಸಾಲ ಹಾಗೂ ವೀಸಾಗೆ ಅರ್ಜಿ ಸಲ್ಲಿಸಲು ಇದು ಮುಖ್ಯ.

  • ತ್ವರಿತ ವೀಸಾ: ಬಹುಪಾಲು ರಾಯಭಾರ ಹಾಗೂ ದೂತವಾಸ ಕಚೇರಿಗಳು ವೀಸಾ ಪ್ರಕ್ರಿಯೆಗೆ ಕನಿಷ್ಠ ಎರಡು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಕೇಳುತ್ತದೆ.

  • ನಷ್ಟ ಪರಿಹಾರ: ಸರಿಯಾದ ಸಮಯಕ್ಕೆ ಐಟಿಆರ್ ಸಲ್ಲಿಸಿದರೆ, ಈ ವರ್ಷದ ನಷ್ಟವನ್ನು ಭವಿಷ್ಯದ ಲಾಭದೊಂದಿಗೆ ಸರಿದೂಗಿಸಬಹುದು.

  • ದಂಡ ಹಾಗೂ ಕಾನೂನು ಕ್ರಮದಿಂದ ರಕ್ಷಣೆ: ಸರಿಯಾದ ಸಮಯಕ್ಕೆ ಐಟಿಆರ್ ಸಲ್ಲಿಸಿದರೆ ದಂಡವನ್ನು ತಪ್ಪಿಸುವುದರ ಜೊತೆಗೆ ಕಾನೂನು ಕ್ರಮದಿಂದಲೂ ತಪ್ಪಿಸಿಕೊಳ್ಳಬಹುದು.

ನೋಟಿಸ್‌ ಬಳಿಕವೂ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ವಿಫಲವಾದರಲ್ಲಿ ಆದಾಯ ತೆರಿಗೆ ಅಧಿಕಾರಿ ಕಾನೂನು ಕ್ರಮ ತೆಗೆದುಕೊಳ್ಳಬಹುದು. ಆರೋಪ ಸಾಬೀತಾದರೆ ಮೂರು ತಿಂಗಳಿಂದ 2 ವರ್ಷಗಳ ಸಜೆ ಹಾಗೂ ದಂಡ ವಿಧಿಸುವ ಅವಕಾಶ ಇದೆ.

ತೆರಿಗೆ ಪಾವತಿ ಮೊತ್ತ ಹೆಚ್ಚಿದ್ದರೆ ಸಜೆ ಅವಧಿ 7 ವರ್ಷದವರೆಗೆ ಇರಬಹುದು.

ಇದಲ್ಲದೆ, ಆದಾಯವನ್ನು ಕಡಿಮೆ ವರದಿ ಮಾಡಿದರೆ ಆದಾಯ ತೆರಿಗೆ ಅಧಿಕಾರಿಯು ತೆರಿಗೆಯ ಶೇ 50 ವರೆಗೆ ದಂಡವನ್ನು ವಿಧಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.