ಜಿಯೊಹಾಟ್‌ಸ್ಟಾರ್
ಬೆಂಗಳೂರು: ಅಂತರ್ಜಾಲ ಆಧಾರಿತ ಸ್ಟ್ರೀಮಿಂಗ್ ವೇದಿಕೆಯಲ್ಲಿ ಸುಮಾರು 50 ಕೋಟಿ ಗ್ರಾಹಕರನ್ನು ಹೊಂದಿರುವ ರಿಲಾಯನ್ಸ್‌ನ ಜಿಯೊ ಸಿನಿಮಾ ಮತ್ತು ಡಿಸ್ನಿ ಹಾಟ್‌ಸ್ಟಾರ್ ಜತೆಗೂಡಿದ್ದು, ಜಿಯೊಹಾಟ್‌ಸ್ಟಾರ್ ಎಂಬ ನೂತನ ಮನರಂಜನಾ ವೇದಿಕೆಯನ್ನು ರಚಿಸಿಕೊಂಡಿವೆ.
ಶುಕ್ರವಾರದಿಂದ ಹೊಸ ಆ್ಯಪ್ ಬಳಕೆಗೆ ಬಿಡುಗಡೆಯಾಗಿದೆ. ವಯಾಕಾಮ್18 ಮತ್ತು ಸ್ಟಾರ್ ಇಂಡಿಯಾ ಎಂಬ ಎರಡು ಕಂಪನಿಗಳ ವಿಲೀನದ ಭಾಗವಾಗಿದೆ. ಹಾಗಿದ್ದರೆ ಜಿಯೊಹಾಟ್‌ಸ್ಟಾರ್‌ನ ನೂತನ ಅಪ್ಲಿಕೇಷನ್ ಪರಿಚಯವೆಂದು? ಎರಡೂ ಒಟಿಟಿಗಳಿಗೆ ಸದ್ಯ ಚಂದಾದಾರರಾಗಿರುವ ಗ್ರಾಹಕರಿಗೆ ಏನಾದರೂ ಬದಲಾವಣೆ ಆಗಲಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಕೇಳಿಬರುತ್ತಿವೆ.
ಐಪಿಎಲ್ ಹಾಗೂ ಐಸಿಸಿ ಕ್ರಿಕೆಟ್‌ಗಳ ನೇರ ಪ್ರಸಾರದ ಹಕ್ಕುಗಳನ್ನು ಪಡೆದಿರುವ ಸ್ಟಾರ್ ಭಾರತದ ಬಹುಬೇಡಿಕೆಯ ಕ್ರೀಡಾ ಚಾನಲ್‌ಗಳನ್ನು ಹೊಂದಿದೆ. ಇದರೊಂದಿಗೆ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಚಾನಲ್‌ಗಳಾದ ಡಿಸ್ನಿ, ವಾರ್ನರ್ ಬ್ರದರ್ಸ್, ಎಚ್‌ಬಿಒ, ಎನ್‌ಬಿಸಿ ಯೂನಿವರ್ಸಲ್ ಪಿಕಾಕ್, ಪ್ಯಾರಾಮೌಂಟ್‌ನಂಥ ಚಾನಲ್‌ಗಳು ಇನ್ನುಮುಂದೆ ಒಂದೇ ವೇದಿಕೆಯಲ್ಲಿ ಸಿಗಲಿದೆ.
ಜಿಯೊಸಿನಿಮಾ ಮತ್ತು ಡಿಸ್ನಿ ಹಾಟ್‌ಸ್ಟಾರ್ ಈ ಎರಡೂ ಆ್ಯಪ್‌ಗಳನ್ನು ಹೊಂದಿರುವವರು ಇವುಗಳನ್ನು ತೆರೆಯಲು ಯತ್ನಿಸಿದರೆ, ಹೊಸ ಜಿಯೊಹಾಟ್‌ಸ್ಟಾರ್‌ನ ನೂತನ ಲಾಂಛನವಿರುವ ಆ್ಯಪ್‌ಗೆ ಕರೆದೊಯ್ದು, ಅಪ್‌ಡೇಟ್ ಆಗುತ್ತಿದೆ. ಮೊಬೈಲ್‌ಗಳಲ್ಲಿ ಜಿಯೊಸಿನಿಮಾ ಆ್ಯಪ್ ಇರುವವರಿಗೆ, ಆ್ಯಪ್‌ನ ಬ್ಯಾನರ್‌ನಲ್ಲಿ ‘ಜಿಯೊಹಾಟ್‌ಸ್ಟಾರ್ ನೋಡಿ’ ಎಂಬ ಸಂದೇಶ ಪ್ರದರ್ಶನವಾಗುತ್ತಿದೆ. ಇದನ್ನು ಕ್ಲಿಕ್ಕಿಸಿದರೆ ಹೊಸ ಆ್ಯಪ್‌ಗೆ ಕರೆದೊಯ್ಯುತ್ತಿದೆ.
ಜಿಯೊಸಿನಿಮಾ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನ ಹಾಲಿ ಚಂದಾದಾರರು ತಮ್ಮ ಪ್ಲಾನ್‌ಗಳನ್ನು ಉಳಿಸಿಕೊಳ್ಳಬಹುದಾಗಿದೆ. ಆದರೆ ಜಿಯೊಹಾಟ್‌ಸ್ಟಾರ್ ಬಳಸಬೇಕಷ್ಟೇ. ಜಿಯೊಸಿನಿಮಾ ಚಂದಾದಾರರು ಅದೇ ಆ್ಯಪ್ ಅನ್ನೇ ಬಳಸಬೇಕು. ಆದರೆ ಇದು ಹಾಟ್‌ಸ್ಟಾರ್‌ನತ್ತ ಗ್ರಾಹಕರನ್ನು ತಿರುಗಿಸಲಿದೆ. ಆದರೆ ಜಿಯೊಸಿನಿಮಾ ಚಂದಾದಾರರಾಗಿದ್ದರೆ, ಅದರ ಅವಧಿ ಪೂರ್ಣ ಮುಗಿಯುವವರೆಗೂ ಕಾಯಬೇಕು. ಆದರೆ ಈ ಅವಧಿಯವರೆಗೂ ಅವರು ಜಿಯೊಹಾಟ್‌ಸ್ಟಾರ್ ಅನ್ನು ಹಾಲಿ ಪ್ಲಾನ್‌ನಲ್ಲೇ ವೀಕ್ಷಿಸಬಹುದು ಎಂದು ಜಿಯೊಸ್ಟಾರ್ ಮನರಂಜನಾ ವಿಭಾಗದ ಸಿಇಒ ಕೆವಿನ್ ವಾಜ್ ಹೇಳಿರುವುದಾಗಿ ವರದಿಯಾಗಿದೆ.
ಹೊಸ ಪ್ಲಾನ್‌ನಲ್ಲಿ ಮೊಬೈಲ್ ಬಳಕೆದಾರರಿಗೆ ಪ್ರತಿ ಮೂರು ತಿಂಗಳಿಗೆ ₹149 ಹಾಗೂ ವರ್ಷಕ್ಕೆ ₹499 ದರ ನಿಗದಿಪಡಿಸಲಾಗಿದೆ. ಇದರಲ್ಲಿ ಜಾಹೀರಾತು ಪ್ರಸಾರವಾಗಲಿವೆ.
ಜಾಹೀರಾತು ಸಹಿತ ‘ಸೂಪರ್’ ಯೋಜನೆಯ ಬಳಕೆದಾರರಿಗೆ ಮೂರು ತಿಂಗಳಿಗೆ ₹299 ಹಾಗೂ ವರ್ಷಕ್ಕೆ ₹899 ದರವಿದೆ. ಜಾಹೀರಾತು ಮುಕ್ತ ವೀಕ್ಷಣೆಗೆ ಪ್ರೀಮಿಯಂ ಯೋಜನೆ ಪಡೆಯಬೇಕು. ಇದಕ್ಕೆ ತಿಂಗಳಿಗೆ ₹299, ಮೂರು ತಿಂಗಳಿಗೆ ₹499 ಹಾಗೂ ವರ್ಷಕ್ಕೆ ₹1499 ದರ ನಿಗದಿಪಡಿಸಲಾಗಿದೆ.
ಸೂಪರ್ ಯೋಜನೆಗೆ 2 ಸಾಧನ, ಪ್ರೀಮಿಯಂ ಯೋಜನೆಗೆ 4 ಸಾಧನಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಇದರಲ್ಲಿ ಮೊಬೈಲ್, ವೆಬ್ ಹಾಗೂ ಟಿ.ವಿ. ಸಾಧನಗಳಲ್ಲಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ.
ಜಿಯೊಹಾಟ್‌ಸ್ಟಾರ್ ಚಂದಾದಾರರ ಅಭಿರುಚಿ ಮತ್ತು ಬಳಕೆಯನ್ನು ಆಧರಿಸಿ ಕೃತಕ ಬುದ್ಧಿಮತ್ತೆಯು ಕಾರ್ಯಕ್ರಮಗಳನ್ನು ಶಿಫಾರಸು ಮಾಡುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ. 19 ಭಾಷೆಗಳಲ್ಲಿ ಕಾರ್ಯಕ್ರಮಗಳು ಲಭ್ಯ. ವೈಕ್ತಿಗತವಾಗಿ ಕಾರ್ಯಕ್ರಮಗಳನ್ನು ಸಂಯೋಜಿಸುವ ಸಾಮರ್ಥ್ಯ ನಮ್ಮ ತಂತ್ರಾಂಶಕ್ಕಿದೆ ಎಂದು ಜಿಯೊಸ್ಟಾರ್‌ನ ಡಿಜಿಟಲ್ ವಿಭಾಗದ ಸಿಇಒ ಕಿರಣ್ ಮಣಿ ತಿಳಿಸಿದ್ದಾರೆ.
ಡಿಸ್ನಿ ಸ್ಟಾರ್ ಮತ್ತು ರಿಲಾಯನ್ಸ್ ಕಂಪನಿಗಳ ವಿಲೀನ ಪ್ರಕ್ರಿಯೆ 2024ರ ಆಗಸ್ಟ್‌ನಲ್ಲಿ ಆರಂಭಗೊಂಡಿತು. ಇದು ಸುಮಾರು ₹73 ಸಾವಿರ ಕೋಟಿ ಮೌಲ್ಯದ ಒಡಂಬಡಿಕೆಯಾಗಿದ್ದು, ಭಾರತದ ಮಾಧ್ಯಮ ಕ್ಷೇತ್ರದಲ್ಲಿ ಅತಿದೊಡ್ಡ ವಿಲೀನ ಪ್ರಕ್ರಿಯೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.