ADVERTISEMENT

ಅಡಿಕೆಗೆ ರೋಗ: ಕೇಂದ್ರಕ್ಕೆ ₹225.73 ಕೋಟಿ ಪ್ರಸ್ತಾವ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 14:45 IST
Last Updated 13 ಡಿಸೆಂಬರ್ 2024, 14:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಳಗಾವಿ (ಸುವರ್ಣ ವಿಧಾನಸೌಧ): ಅಡಿಕೆಗೆ ಬಾಧಿಸುತ್ತಿರುವ ಎಲೆ ಚುಕ್ಕೆ ರೋಗ ಮತ್ತು ಹಳದಿ ಎಲೆ ರೋಗಗಳ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರದ ವೈಜ್ಞಾನಿಕ ತಂಡದ ಸಮಿತಿಯ ಶಿಫಾರಸಿನ ಅನ್ವಯ 54,000 ಹೆಕ್ಟೇರ್‌ ಪ್ರದೇಶಕ್ಕೆ ₹225.73 ಕೋಟಿ ಪ್ರಸ್ತಾವ ಸಿದ್ಧಪಡಿಸಿ, ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತೋಟಗಾರಿಕಾ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ತಿಳಿಸಿದರು.

ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಭೀಮಣ್ಣ ಟಿ. ನಾಯಕ್‌ ಪ್ರಶ್ನೆಗೆ ಉತ್ತರಿಸಿ ಈ ವಿಷಯ ತಿಳಿಸಿದರು.

ವೈಜ್ಞಾನಿಕ ತಂಡದ ಸಮಿತಿಯು ರೋಗಬಾಧಿತ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಿಗೆ ಭೇಟಿ ಎಲೆ ಚುಕ್ಕೆ ರೋಗದ ಹರಡುವಿಕೆಗೆ ಪ್ರಮುಖ ಕಾರಣಗಳು, ರೋಗದ ತೀವ್ರತೆ ಮತ್ತು ಹಾನಿಯ ಪ್ರಮಾಣದ ಬಗ್ಗೆ ಪರಿಶೀಲಿಸಿದೆ. ಸಮಿತಿಯ ಶಿಫಾರಸಿನಂತೆ ಫೈಟೋಸ್ಯಾನಿಟರಿ ಕ್ರಮಗಳ ಅಳವಡಿಕೆ, ಪೋಷಕಾಂಶಗಳ ನಿರ್ವಹಣೆ, ಸಸ್ಯ ಸಂರಕ್ಷಣೆ ಕ್ರಮಗಳ ಅಳವಡಿಕೆ ಹಾಗೂ ತಾಂತ್ರಿಕ ಮಾಹಿತಿ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಇದಕ್ಕಾಗಿ ₹225.73 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ವಿವರಿಸಿದರು. 

ADVERTISEMENT

ಈ ಪ್ರಸ್ತಾವವನ್ನು ಕೇಂದ್ರ ಮತ್ತು ರಾಜ್ಯಗಳ 60:40 ಅನುಪಾತದಲ್ಲಿ 2 ವರ್ಷಗಳ ಅವಧಿಯಲ್ಲಿ ಅನುಷ್ಠಾನಗೊಳಿಸಲಾಗುವುದು. 2024–25ನೇ ಸಾಲಿಗೆ ₹112.83 ಕೋಟಿಗಳಿಗೆ ಪ್ರಸ್ತಾವ ಸಿದ್ಧಪಡಿಸಿ ಕೇಂದ್ರಕ್ಕೆ ಸಲ್ಲಿಸಲಾಗಿದೆ ಎಂದು ಮಲ್ಲಿಕಾರ್ಜುನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.