ADVERTISEMENT

ಗಿಗ್‌ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ: ಕೇಂದ್ರ ಸರ್ಕಾರ ಭರವಸೆ

ಪಿಟಿಐ
Published 11 ಡಿಸೆಂಬರ್ 2024, 13:06 IST
Last Updated 11 ಡಿಸೆಂಬರ್ 2024, 13:06 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಗಿಗ್‌ ಮತ್ತು ಆನ್‌ಲೈನ್‌ ವೇದಿಕೆಯಡಿ ಕೆಲಸ ನಿರ್ವಹಿಸುವವರಿಗೆ ಸಾಮಾಜಿಕ ಭದ್ರತೆ ಸಂಬಂಧ ಹೊಸ ಯೋಜನೆ ರೂಪಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕಾರ್ಯತತ್ಪರವಾಗಿದೆ.

ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಜಾಗತಿಕ ಆರ್ಥಿಕ ನೀತಿ ವೇದಿಕೆಯಿಂದ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ, ಗಿಗ್‌ ಮತ್ತು ಆನ್‌ಲೈನ್ ವೇದಿಕೆಯ ಅರ್ಥವ್ಯವಸ್ಥೆಯಲ್ಲಿ ಕೆಲಸ ಮಾಡುವವರಿಗೆ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಈ ವರ್ಗದ ಕಾರ್ಮಿಕರು ಸಾಂಪ್ರದಾಯಿಕವಾದ ಉದ್ಯೋಗದಾತ–ಉದ್ಯೋಗಿ ನಡುವಿನ ಕೆಲಸದ ವ್ಯವಸ್ಥೆಯಿಂದ ದೂರ ಇರುತ್ತಾರೆ. ಅವರಿಗೆ ಸಾಮಾಜಿಕ ಭದ್ರತೆ ಕಲ್ಪಿಸಿದರೆ ದೇಶದ ಆರ್ಥಿಕತೆಗೆ ಮತ್ತಷ್ಟು ಬೆಂಬಲ ನೀಡಿದಂತಾಗುತ್ತದೆ. ಅಲ್ಲದೆ, ಇ–ಕಾಮರ್ಸ್‌ ಮತ್ತು ಸೇವಾ ವಲಯವು ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ADVERTISEMENT

2030ರ ವೇಳೆಗೆ ಗಿಗ್‌ ಮತ್ತು ಆನ್‌ಲೈನ್‌ ವೇದಿಕೆ ಅರ್ಥವ್ಯವಸ್ಥೆಯಡಿ ಕೆಲಸ ನಿರ್ವಹಿಸುವವರ ಸಂಖ್ಯೆಯು 3 ಕೋಟಿ ದಾಟುವ ಬಗ್ಗೆ ಅಂದಾಜಿಸಲಾಗಿದೆ ಎಂದರು.

ಈ ವರ್ಗದ ಕೆಲಸಗಾರರಿಗೆ ಪಿಂಚಣಿ ಮತ್ತು ಆರೋಗ್ಯ ಸೇವೆ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನ್ಸುಕ್‌ ಮಾಂಡವೀಯ ಇತ್ತೀಚೆಗೆ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.