ADVERTISEMENT

ಎಲ್‌ಪಿಜಿ: ಬೆಲೆ ಹೆಚ್ಚಿದರೂ ಬಳಕೆ ಶೇ 7.3ರಷ್ಟು ಏರಿಕೆ

ಪಿಟಿಐ
Published 11 ಮಾರ್ಚ್ 2021, 19:30 IST
Last Updated 11 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಎಲ್‌ಪಿಜಿ ಬೆಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ತೀವ್ರ ಏರಿಕೆ ಆಗಿದ್ದರೂ, ಅವುಗಳ ಬಳಕೆ ಶೇಕಡ 7.3ರಷ್ಟು ಹೆಚ್ಚಳ ಆಗಿದೆ ಎಂದು ಕೇಂದ್ರ ಸರ್ಕಾರದ ತೈಲೋತ್ಪನ್ನ ಮಾರಾಟ ಕಂಪನಿಗಳು ಹೇಳಿವೆ.

2020ರ ಡಿಸೆಂಬರ್‌ನಿಂದ 2021ರ ಫೆಬ್ರುವರಿ ನಡುವಿನ ಅವಧಿಯಲ್ಲಿ ಅಡುಗೆ ಅನಿಲ ಸಿಲಿಂಡರ್‌ನ (ಎಲ್‌ಪಿಜಿ) ಬಳಕೆಯು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ ಫಲಾನುಭವಿಗಳಲ್ಲಿ ಶೇ 19.5ರಷ್ಟು ಜಾಸ್ತಿ ಆಗಿದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಒಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ಇಂಡಿಯನ್‌ ಆಯಿಲ್‌ ಹೊರಡಿಸಿರುವ ಪತ್ರಿಕಾ ಪ್ರಕಟಣೆಯ ಮಾದರಿಯಲ್ಲೇ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್ (ಬಿಪಿಸಿಎಲ್) ಕೂಡ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಎಲ್‌ಪಿಜಿ ದರ ಹೆಚ್ಚಳವನ್ನು ವಿರೋಧ ಪಕ್ಷಗಳು ತೀಕ್ಷ್ಣವಾಗಿ ಟೀಕಿಸುತ್ತಿರುವ ಸಂದರ್ಭದಲ್ಲೇ ಈ ಪತ್ರಿಕಾ ಹೇಳಿಕೆಗಳು ಬಂದಿವೆ.

ADVERTISEMENT

ಉಜ್ವಲಾ ಯೋಜನೆಯ ಕೆಲವು ಫಲಾನುಭವಿಗಳು ಬೆಲೆ ಹೆಚ್ಚಳದ ಕಾರಣದಿಂದಾಗಿ ಎಲ್‌ಪಿಜಿ ಸಿಲಿಂಡರ್ ಖರೀದಿಸುವುದನ್ನು ನಿಲ್ಲಿಸಿವೆ ಎಂಬ ವರದಿಗಳೂ ಇವೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಪ್ರತಿ ಕುಟುಂಬಕ್ಕೆ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಯಿತು. ಹಾಲಿ ಆರ್ಥಿಕ ವರ್ಷದ ಆರಂಭದ ತ್ರೈಮಾಸಿಕದಲ್ಲಿ ಎಲ್‌ಪಿಜಿ ಬಳಕೆಯಲ್ಲಿ ಶೇ 23.2ರಷ್ಟು ಹೆಚ್ಚಳ ಕಂಡುಬಂದಿದ್ದಕ್ಕೆ ಇದು ಕೂಡ ಒಂದು ಕಾರಣ ಎಂದು ಎರಡೂ ಕಂಪನಿಗಳ ಪ್ರಕಟಣೆಗಳು ತಿಳಿಸಿವೆ.

‘ಈಗಿನ ಮಾರುಕಟ್ಟೆ ಬೆಲೆಯಲ್ಲಿಯೂ ಎಲ್‌ಪಿಜಿಯು ಹಲವು ರಾಜ್ಯಗಳಲ್ಲಿ ಸೌದೆ ಅಥವಾ ಇತರ ಸಾಂಪ್ರದಾಯಿಕ ಇಂಧನಗಳಿಗಿಂತ ಅಗ್ಗವಾಗಿದೆ. ಇದಕ್ಕೆ ಮುಖ್ಯ ಕಾರಣ ಎಲ್‌ಪಿಜಿಯ ದಕ್ಷತೆ’ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಅಂಕಿ–ಅಂಶ
₹ 410.5:
2014ರ ಮಾರ್ಚ್‌ 1ರಂದು 14.2 ಕೆ.ಜಿ. ಎಲ್‌ಪಿಜಿ ಸಿಲಿಂಡರ್‌ ಬೆಲೆ
₹ 822:ಬೆಂಗಳೂರಿನಲ್ಲಿ 14.2 ಕೆ.ಜಿ. ಸಿಲಿಂಡರ್‌ನ ಈಗಿನ ಬೆಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.