ಬೆಂಗಳೂರು: ಸಾವಿರಾರು ಕೋಟಿಯ ಒಡೆಯನಾಗಿ, ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಕಾನ್ಫಿಡೆಂಟ್ ಗ್ರೂಪ್‌ನ ಸಿ.ಜೆ. ರಾಯ್ ಅವರ ಸಾವು ಆಘಾತ ಸೃಷ್ಟಿಸಿದೆ. ಅದ್ಭುತ ಯಶಸ್ಸು, ನಿರಂತರ ವಿವಾದಗಳು ಹಾಗೂ ತಮ್ಮ ಸಾರ್ವಜನಿಕ ಗುರುತನ್ನು ಮರಳಿ ಪಡೆಯಲು ಅವರು ಮಾಡುತ್ತಿದ್ದ ಇನ್ನಿಲ್ಲದ ಪ್ರಯತ್ನಗಳು ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ.
ರಾಯ್ ಅವರ ಬೇರು ಕರ್ನಾಟಕದ್ದೇ ಆದರೂ, ಜಾಗತಿಕ ಮಟ್ಟದಲ್ಲಿ ವ್ಯಾಪಾರ ವಿಸ್ತರಿಸಿ ರಿಯಲ್ ಎಸ್ಟೇಟ್‌ನಲ್ಲೇ ಹೆಸರು ಮಾಡಿದವರು.
ಬೆಂಗಳೂರಿನ ಕ್ರೈಸ್ಟ್ ಶಾಲೆಯಲ್ಲಿ ಆರಂಭಿಕ ವಿದ್ಯಾಭ್ಯಾಸ, ತುಮಕೂರಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗದ ನಂತರ ಸಣ್ಣದೊಂದು ಎಲೆಕ್ಟ್ರಾನಿಕ್ ಕಂಪನಿಯ ಉತ್ಪನ್ನಗಳನ್ನು ಮಾರುವ ಸೇಲ್ಸ್‌ಮನ್ ಆಗಿ ವೃತ್ತಿ ಬದುಕು ಆರಂಭಿಸಿದ ರಾಯ್, ಮಹತ್ವಾಕಾಂಕ್ಷಿ.
ಕ್ರಿಸ್ಟಲ್ ಸಮೂಹದ ಮೂಲಕ ರಿಯಲ್ ಎಸ್ಟೇಟ್‌ಗೆ ಕಾಲಿಟ್ಟ ರಾಯ್, ಅಲ್ಲಿನ ವ್ಯವಸ್ಥಾಪಕ ನಿರ್ದೇಶಕಿ ಲತಾ ನಂಬೂದರಿ ಅವರೊಂದಿಗೆ ಕೆಲಸ ಮಾಡಿದವರು. 2005ರಲ್ಲಿ ತಮ್ಮದೇ ಆದ ಕಾನ್ಫಿಡೆಂಟ್ ಗ್ರೂಪ್ ಆರಂಭಿಸಿದರು.
‘ಬೇನಾಮಿ ಆಸ್ತಿಗಳು ಮತ್ತು ವಂಚನೆ ಅವರ ಸಮೂಹ ವಿಸ್ತರಣೆಗೆ ಹಾದಿ ಮಾಡಿಕೊಟ್ಟಿದ್ದವು ಎನ್ನುವುದು ಕಾನ್ಫಿಡೆಂಟ್ ಸಮೂಹದೊಳಗಿರುವವರ ಮಾತು. ಇವುಗಳಿಂದ ದೂರ ಉಳಿಯಲು ರಾಯ್ ಅವರು ನಿರಂತರ ಪ್ರಯತ್ನ ನಡೆಸಿದ್ದರು ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ ಎಂದು ಡೆಕ್ಕನ್‌ಹೆರಾಲ್ಡ್ ವರದಿ ಮಾಡಿದೆ.
ಭೂಪ್ರದೇಶಗಳಿಗೆ ತಕ್ಕಂತೆ ರಾಯ್ ಅವರ ವ್ಯವಹಾರ ಕ್ಷೇತ್ರವು ವಿಭಿನ್ನವಾಗಿಯೇ ವರ್ತಿಸಿದೆ. ದುಬೈನಲ್ಲಿ ದೂರದೃಷ್ಟಿಯ ಡೆವಲಪರ್ ಎಂದು ಅವರು ಪ್ರಸಿದ್ಧಿ. ಏಕೆಂದರೆ, ಕೇವಲ 11 ತಿಂಗಳ ಅವಧಿಯಲ್ಲಿ ಬೃಹತ್ ವಿಲಾಸಿ ಮನೆಗಳ ಯೋಜನೆಗಳನ್ನು ಪೂರ್ಣಗೊಳಿಸಿ ಎಲ್ಲರನ್ನೂ ಚಕಿತಗೊಳಿಸಿದ್ದರು.
ಎಮರಾಟಿಯಲ್ಲಿನ ಅವರ ವಿಲಾಸಿ ಜೀವನಶೈಲಿ ಮತ್ತು ಕೈಗೊಂಡ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿದ ಸಾಮರ್ಥ್ಯದಿಂದ ಅವರಿಗೆ ದೊರೆತ ವರ್ಚಸ್ಸು ಮತ್ತು ಬೆಂಗಳೂರಿನ ಅವರ ಸ್ಥಿತಿಗತಿಗೆ ಅಜ–ಗಜಾಂತರ ವ್ಯತ್ಯಾಸವಿತ್ತು.
ಹೀಗಾಗಿ ಬೆಂಗಳೂರಿನಿಂದ ಅವರು ಸದಾ ದೂರವೇ ಉಳಿದಿದ್ದರು. ಮಾರಾಟಗಾರರು ಮತ್ತು ಪೂರೈಕೆದಾರರಿಗೆ ಪಾವತಿಯಾಗದ ಬಾಕಿ, ಅದರಿಂದ ಉಂಟಾದ ವಿವಾದಗಳಿಂದ ದೂರ ಉಳಿಯಲು ಯತ್ನಿಸುತ್ತಿದ್ದರು. ಒಂದು ಕಾಲದಲ್ಲಿ ಅವರು ನಗರದೊಳಗೆ ಪ್ರವೇಶಿಸಲು ಸಾಧ್ಯವಾಗದ ಸ್ಥಿತಿ ಎದುರಿಸುತ್ತಿದ್ದರು. ಕೆಲವೊಂದು ಯೋಜನೆಗಳು ಸ್ಥಗಿತಗೊಂಡಿದ್ದವು. ಸಿಮೆಂಟ್ ಮತ್ತು ಉಕ್ಕು ಮಾರಾಟಗಾರರು ತಮಗೆ ಬರಬೇಕಾದ ಬಾಕಿಗಾಗಿ ಅವರ ಬೆನ್ನು ಹತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ.
ಆದರೆ 2018ರಲ್ಲಿ ರಾಯ್ ಅವರು ಬೆಂಗಳೂರಿನ ವ್ಯವಹಾರ ಲೋಕಕ್ಕೆ ಮತ್ತು ಸಾಮಾಜಿಕ ಜೀವನಕ್ಕೆ ಮರಳಿದರು. ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರು.
ಸ್ಲೋವಾಕ್ ಗಣರಾಜ್ಯದ ಗೌರವಾನ್ವಿತ ಕಾನ್ಸುಲ್ ಆಗಿ ಅವರು ನೇಮಕಗೊಂಡದರು. ಆ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡರು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಮೂಲಕ ಆಂಬುಲೆನ್ಸ್ ಕೊಡುಗೆ ಮತ್ತು ದೊಡ್ಡ ಮಟ್ಟದ ದೇಣಿಗೆ ನೀಡುವ ಮೂಲಕವೂ ತಮ್ಮ ವರ್ಚಸ್ಸು ಮರುಸ್ಥಾಪಿಸಿಕೊಳ್ಳುವ ಯತ್ನ ನಡೆಸಿದರು.
ಲ್ಯಾಂಗ್‌ಫೋರ್ಡ್ ಟೌನ್‌ನಲ್ಲಿರುವ ಕಾನ್ಫಿಡೆಂಟ್ ಸಮೂಹದ ಕಟ್ಟಡದ ಮುಂದೆ ಕೇಂದ್ರ ಭದ್ರತಾ ಪಡೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಈ ಕಟ್ಟಡದಲ್ಲೇ ಸ್ಲೊವಾಕ್‌ನ ರಾಯಭಾರ ಕಚೇರಿಯೂ ಇದೆ. ಹೊಸೂರು ರಸ್ತೆಗೆ ಹೊಂದಿಕೊಂಡಿರುವ ಈ ರಸ್ತೆಯ ಅತ್ಯಂತ ಜನನಿಬಿಡ ಪ್ರದೇಶವಾಗಿತ್ತು. ಆದರೆ ಶುಕ್ರವಾರ ಸಂಜೆ ಇಲ್ಲಿ ಜನರೇ ಇಲ್ಲದೆ ನೀರವ ಮೌನ ಆವರಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.