ADVERTISEMENT

ಹೊಸ ಬ್ರೆಜಾ ಬಿಡುಗಡೆ ಮಾಡಿದ ಮಾರುತಿ ಸುಜುಕಿ

ಪಿಟಿಐ
Published 30 ಜೂನ್ 2022, 13:54 IST
Last Updated 30 ಜೂನ್ 2022, 13:54 IST
ಗುರುಗ್ರಾಮದಲ್ಲಿ ಗುರುವಾರ ನಡೆದ ‘ಬ್ರೆಜಾ’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾರುತಿ ಸುಜುಕಿ ಸಿಇಒ ಹಿಸಾಶಿ ಟೇಕುಚಿ ಮತ್ತು ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರುಕಟ್ಟೆ ಮತ್ತು ಮಾರಾಟ ವಿಭಾಗ) ಶಶಾಂಕ್ ಶ್ರೀವಾಸ್ತವ ಪಾಲ್ಗೊಂಡಿದ್ದರು. (ಪಿಟಿಐ ಚಿತ್ರ)
ಗುರುಗ್ರಾಮದಲ್ಲಿ ಗುರುವಾರ ನಡೆದ ‘ಬ್ರೆಜಾ’ ಬಿಡುಗಡೆ ಕಾರ್ಯಕ್ರಮದಲ್ಲಿ ಮಾರುತಿ ಸುಜುಕಿ ಸಿಇಒ ಹಿಸಾಶಿ ಟೇಕುಚಿ ಮತ್ತು ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕ (ಮಾರುಕಟ್ಟೆ ಮತ್ತು ಮಾರಾಟ ವಿಭಾಗ) ಶಶಾಂಕ್ ಶ್ರೀವಾಸ್ತವ ಪಾಲ್ಗೊಂಡಿದ್ದರು. (ಪಿಟಿಐ ಚಿತ್ರ)   

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ತನ್ನ ಕಾಂಪ್ಯಾಕ್ಟ್ ಎಸ್‌ಯುವಿ ‘ಬ್ರೆಜಾ’ದ ಹೊಸ ಆವೃತ್ತಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಇದರ ಎಕ್ಸ್‌ ಷೋರೂಂ ಬೆಲೆ ₹ 7.99 ಲಕ್ಷದಿಂದ ಆರಂಭವಾಗುತ್ತದೆ.

‘ಬ್ರೆಜಾ’ ಮೂಲಕ ಎಸ್‌ಯುವಿ ಮಾರುಕಟ್ಟೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಿಕೊಳ್ಳುವ ಉದ್ದೇಶವನ್ನು ಮಾರುತಿ ಸುಜುಕಿ ಹೊಂದಿದೆ.

ಎರಡನೆಯ ತಲೆಮಾರಿನ ಬ್ರೆಜಾ ವಾಹನವು ಮ್ಯಾನುವಲ್‌ ಹಾಗೂ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಆಯ್ಕೆಗಳಲ್ಲಿ ಲಭ್ಯವಿರಲಿದೆ. ‘ಹೊಸ ಬ್ರೆಜಾ ಸೇರಿದಂತೆ ಕಳೆದ ಎಂಟು ತಿಂಗಳಲ್ಲಿ ಆರು ಮಾದರಿಗಳನ್ನು ಕಂಪನಿ ಬಿಡುಗಡೆ ಮಾಡಿದೆ. ಇದು ಭಾರತದ ಮಾರುಕಟ್ಟೆಯ ವಿಚಾರವಾಗಿ ಕಂಪನಿ ಹೊಂದಿರುವ ವಿಶ್ವಾಸವನ್ನು ತೋರಿಸುತ್ತಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹಿಸಾಶಿ ಟೇಕುಚಿ ಹೇಳಿದ್ದಾರೆ.

ADVERTISEMENT

ಬ್ರೆಜಾ ಎಸ್‌ಯುವಿಯನ್ನು 2016ರಲ್ಲಿ ಬಿಡುಗಡೆ ಮಾಡಲಾಯಿತು. ಕಂಪನಿಯು ಇದುವರೆಗೆ 7.5 ಲಕ್ಷಕ್ಕಿಂತ ಹೆಚ್ಚು ಬ್ರೆಜಾ ವಾಹನಗಳನ್ನು ಮಾರಾಟ ಮಾಡಿದೆ.

1.5 ಲೀಟರ್ ಸಾಮರ್ಥ್ಯದ ಕೆ–ಸರಣಿಯ ಪೆಟ್ರೋಲ್ ಎಂಜಿನ್ ಹೊಸ ಬ್ರೆಜಾದಲ್ಲಿ ಇದೆ. ಸ್ಮಾರ್ಟ್‌ ಹೈಬ್ರಿಡ್ ತಂತ್ರಜ್ಞಾನ ಇದರಲ್ಲಿದ್ದು, ಇಂಧನ ದಕ್ಷತೆಯು ಪ್ರತಿ ಲೀಟರ್‌‌ಗೆ 20.15 ಕಿ.ಮೀ. ಇದೆ ಎಂದು ಕಂಪನಿ ಹೇಳಿದೆ. ಆರು ಏರ್‌ಬ್ಯಾಗ್‌ಗಳು ಸೇರಿ ಸುರಕ್ಷತೆಗೆ ಸಂಬಂಧಿಸಿದಂತೆ ಒಟ್ಟು 20 ಸೌಲಭ್ಯಗಳನ್ನು ಇದು ಹೊಂದಿದೆ.

2021–22ನೆಯ ಆರ್ಥಿಕ ವರ್ಷದಲ್ಲಿ ಮಾರುತಿ ಸುಜುಕಿ ದೇಶದ ಪ್ರಯಾಣಿಕ ವಾಹನ ಮಾರುಕಟ್ಟೆಯಲ್ಲಿ ಶೇಕಡ 43.4ರಷ್ಟು ಪಾಲು ಹೊಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.