ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಮುಂಚೂಣಿ ಕಂಪನಿ ಮೈಕ್ರೊಸಾಫ್ಟ್ ಶೇ 4ರಷ್ಟು ಉದ್ಯೋಗ ಕಡಿತಕ್ಕೆ ಮುಂದಾಗಿದೆ ಎಂದು ವರದಿಯಾಗಿದೆ.
ತನ್ನ ಒಟ್ಟು ನೌಕರರಲ್ಲಿ 9,100 ಜನರನ್ನು ವಜಾಗೊಳಿಸಲು ಕಂಪನಿ ನಿರ್ಧರಿಸಿದೆ. 2023ರ ನಂತರದಲ್ಲಿ ಅತಿ ಹೆಚ್ಚು ಉದ್ಯೋಗ ಕಡಿತ ಮಾಡುತ್ತಿರುವುದು ಇದೇ ಮೊದಲು ಎಂದು ಸೀಟಲ್ ಟೈಮ್ಸ್ ಬುಧವಾರ ವರದಿ ಮಾಡಿದೆ.
ಕಂಪನಿಯು ಜಾಗತಿಕ ಮಟ್ಟದಲ್ಲಿ ಸದ್ಯ 2.28 ಲಕ್ಷ ನೌಕರರನ್ನು ಹೊಂದಿದೆ. ಈ ಬಾರಿ ಮಾರುಕಟ್ಟೆ ವಿಭಾಗದಲ್ಲಿ ಹೆಚ್ಚು ಉದ್ಯೋಗ ಕಡಿತವಾಗಲಿದೆ ಎಂದೆನ್ನಲಾಗಿದೆ. ಕಳೆದ ಮೇನಲ್ಲೂ ಮೈಕ್ರೊಸಾಫ್ಟ್ 6 ಸಾವಿರ ನೌಕರರನ್ನು ವಜಾಗೊಳಿಸಿತ್ತು.
ಆರ್ಥಿಕ ಅಸ್ಥಿರತೆ ಎದುರಾಗಿರುವುದರಿಂದ ಕಳೆದ ವರ್ಷದಿಂದ ವೆಚ್ಚಕ್ಕೆ ಕಡಿವಾಣ ಹಾಕಲು ಕಂಪನಿ ಮುಂದಾಗಿದೆ. ಅದರಲ್ಲಿ ನೌಕರರ ವಜಾಗೊಳಿಸುವ ಕ್ರಮವೂ ಸೇರಿದೆ. ಕಳೆದ ವರ್ಷವೂ ಇದೇ ಮಾದರಿಯಲ್ಲಿ ಉದ್ಯೋಗ ಕಡಿತಕ್ಕೆ ಕಂಪನಿ ಮುಂದಾಗಿತ್ತು. ಅ ಮೂಲಕ ಕಂಪನಿಯು ತನ್ನ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವ ಪ್ರಯತ್ನಕ್ಕೆ ಕೈಹಾಕಿತ್ತು.
ನೌಕರರ ವಜಾಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಗೆ ಕಂಪನಿಯ ಅಧಿಕಾರಿಗಳು ಲಭ್ಯವಾಗಿಲ್ಲ ಎಂದು ರಾಯಿಟರ್ಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.