ADVERTISEMENT

ಇ – ಕಾಮರ್ಸ್‌ ತಾಣಗಳಲ್ಲಿ ಮೊಬೈಲ್‌, ಟಿವಿ ಮಾರಾಟ

ಅಗತ್ಯವಲ್ಲದ ಸರಕುಗಳ ಖರೀದಿಗೂ ಅವಕಾಶ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 1:54 IST
Last Updated 17 ಏಪ್ರಿಲ್ 2020, 1:54 IST
–
   

ನವದೆಹಲಿ: ಇದೇ 20ರಿಂದ ಇ–ಕಾಮರ್ಸ್‌ನ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಮತ್ತು ಸ್ನ್ಯಾಪ್‌ಡೀಲ್‌ ತಾಣಗಳಿಂದ ಗ್ರಾಹಕರು ಮೊಬೈಲ್‌, ಟಿವಿ, ಫ್ರಿಜ್‌, ಲ್ಯಾಪ್‌ಟಾಪ್‌ ಮತ್ತು ಸ್ಟೇಷನರಿ ಸರಕುಗಳನ್ನು ಖರೀದಿಸಬಹುದಾಗಿದೆ.

ಇ–ಕಾಮರ್ಸ್‌ ಕಂಪನಿಗಳು ಮಾರಾಟ ಮಾಡುವ ಉತ್ಪನ್ನಗಳ ಸಂಬಂಧ ಗುರುವಾರ ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ. ಸಚಿವಾಲಯದ ಬುಧವಾರದ ಅಧಿಸೂಚನೆ ಪ್ರಕಾರ, ಅಗತ್ಯ ವಸ್ತುಗಳಾದ ಆಹಾರ, ಔಷಧಿ ಮತ್ತು ವೈದ್ಯಕೀಯ ಸಾಧನಗಳನ್ನಷ್ಟೇ ಮಾರಾಟ ಮಾಡಲು ಇ–ಕಾಮರ್ಸ್‌ ತಾಣಗಳಿಗೆ ಅವಕಾಶ ನೀಡಲಾಗಿತ್ತು. ಸರಕುಗಳನ್ನು ಅವಶ್ಯಕ ಮತ್ತು ಅಗತ್ಯವಲ್ಲದ ಎಂದು ವಿಂಗಡಿಸಿರಲಿಲ್ಲ. ಈಗ ಈ ನಿಯಮಗಳನ್ನು ಸಡಿಲಿಸಲಾಗಿದೆ.

ಇ–ಕಾಮರ್ಸ್‌ ತಾಣಗಳಲ್ಲಿ ಸರಕುಗಳ ನಿರ್ವಹಣೆ ಮತ್ತು ವಿತರಣೆಯಲ್ಲಿ ಅಸಂಖ್ಯ ಜನರು ಭಾಗಿಯಾಗಿರುತ್ತಾರೆ. ಈ ವಹಿವಾಟನ್ನು ನಿರ್ಬಂಧಗಳಿಂದ ಮುಕ್ತಗೊಳಿಸಿರುವುದರಿಂದ ಗರಿಷ್ಠ ಸಂಖ್ಯೆಯ ಉದ್ಯೋಗಿಗಳ ಹಿತರಕ್ಷಣೆ ಸಾಧ್ಯವಾಗಲಿದೆ. ಮಾರ್ಚ್‌ 25ರಿಂದ ಸ್ಥಗಿತಗೊಂಡಿರುವ ಕೈಗಾರಿಕೆ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಪುನಶ್ಚೇತನ ನೀಡಲು ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ.

ADVERTISEMENT

ಸರಕುಗಳನ್ನು ಸಾಗಿಸುವ ಇ–ಕಾಮರ್ಸ್‌ ಕಂಪನಿಗಳ ವಾಹನಗಳ ಸಂಚಾರಕ್ಕೆ ಸರ್ಕಾರದಿಂದ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಹಕರ ಮನೆ ಬಾಗಿಲಿಗೆ ಸರಕುಗಳನ್ನು ತಲುಪಿಸಲು ಸಿಬ್ಬಂದಿ ಬಳಸುವ ವಾಹನಗಳಿಗೆ ಅನುಮತಿ ನೀಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.