ADVERTISEMENT

SBI ಜತೆಗೂಡಿ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ರಿಲಯನ್ಸ್ ಪದಾರ್ಪಣೆ ಸಾಧ್ಯತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಅಕ್ಟೋಬರ್ 2023, 13:10 IST
Last Updated 28 ಅಕ್ಟೋಬರ್ 2023, 13:10 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮುಂಬೈ: ಪಾದರಕ್ಷೆಯಿಂದ ಪೆಟ್ರೋಲ್‌ವರೆಗೂ ತನ್ನ ವ್ಯವಹಾರಗಳನ್ನು ವಿಸ್ತರಿಸಿಕೊಂಡಿರುವ ರಿಲಯನ್ಸ್‌ ಕಂಪನಿಯು ಇದೀಗ ಕ್ರೆಡಿಟ್ ಕಾರ್ಡ್‌ ಕ್ಷೇತ್ರಕ್ಕೆ ಕಾಲಿಡುವ ಸೂಚನೆ ನೀಡಿದೆ.

ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿರುವ ರಿಲಯನ್ಸ್‌ನ ಮುಖೇಶ್ ಅಂಬಾನಿ ಸದ್ಯದ ಮಟ್ಟಿಗೆ ಏಷ್ಯಾದ ನಂ.1 ಶ್ರೀಮಂತ. ದೇಶದ ಮುಂಚೂಣಿ ಬ್ಯಾಂಕ್‌ಗಳಲ್ಲಿ ಒಂದಾದ ಎಸ್‌ಬಿಐ ಜತೆಗೂಡಿ ಕ್ರೆಡಿಟ್‌ ಕಾರ್ಡ್‌ ಕ್ಷೇತ್ರಕ್ಕೆ ಕಾಲಿಡಲು ಮುಖೇಶ್ ಮಾಲೀಕತ್ವದ ರಿಲಯನ್ಸ್‌ ಸಜ್ಜಾಗಿದೆ. ಎರಡು ಬೃಹತ್ ಸಂಸ್ಥೆಗಳ ಜಂಟಿ ಕಾರ್ಯಾಚರಣೆಗಾಗಿ ಸ್ವದೇಶಿ ನಿರ್ಮಿತ ರುಪೇ ನೆಟ್‌ವರ್ಕ್‌ ಬಳಸುವ ಸಾಧ್ಯತೆ ಇದೆ. ಸದ್ಯ ಈ ಕಾರ್ಡ್‌ನ ಹೆಸರು ಏನಾಗಿರಲಿದೆ ಎಂಬುದು ಈವರೆಗೂ ಬಹಿರಂಗಗೊಂಡಿಲ್ಲ. ಆದರೂ ‘ರಿಲಯನ್ಸ್‌ ಎಸ್‌ಬಿಐ ಕಾರ್ಡ್ಸ್‌’ ಎಂದು ಇರಬಹುದು ಎಂದು ಟೆಕ್‌ಕ್ರಂಚ್‌ ವರದಿ ಮಾಡಿದೆ.

ADVERTISEMENT

ರಿಲಯನ್ಸ್‌ ಕ್ರೆಡಿಟ್ ಕಾರ್ಡ್‌ನಿಂದಾಗಿ ವಸ್ತುಗಳ ಖರೀದಿಗೆ ಸಾಲ ಸಿಗುವುದರ ಜತೆಗೆ, ರಿಲಯನ್ಸ್‌ನ ರಿಟೇಲ್ ಮಳಿಗೆಗಳಲ್ಲಿ ರಿಯಾಯಿತಿ, ಉಡುಗೊರೆ ಹಾಗೂ ವಿಶೇಷ ಸೇವಾ ಸೌಲಭ್ಯಗಳು ಸಿಗುವ ಸಾಧ್ಯತೆ ಹೆಚ್ಚು. ಹೀಗಾಗಿ ಜಿಯೊಮಾರ್ಟ್‌, ಅಜಿಯೊ, ಅರ್ಬನ್‌ ಲ್ಯಾಡರ್ ಹಾಗೂ ಟ್ರೆಂಡ್ಸ್‌ಗಳಲ್ಲಿ ಹೆಚ್ಚಿನ ರಿಯಾಯಿತಿಯನ್ನು ನಿರೀಕ್ಷಿಸಬಹುದು ಎಂದೆನ್ನಲಾಗಿದೆ.

ಭಾರತದಲ್ಲಿ ಕ್ರೆಡಿಟ್‌ ಕಾರ್ಡ್‌ ಮೂಲಕ ನಡೆಯುವ ಖರೀದಿಯು ಡೆಬಿಟ್‌ ಕಾರ್ಡ್‌ಗಿಂತಲೂ ಹೆಚ್ಚಾಗಿದೆ. ಡೆಬಿಟ್ ಕಾರ್ಡ್ ಮೂಲಕ ₹53 ಸಾವಿರ ಕೋಟಿ ವಹಿವಾಟು ನಡೆದರೆ, ಕ್ರೆಡಿಟ್ ಕಾರ್ಡ್ ಮೂಲಕ ₹1.33 ಲಕ್ಷ ಕೋಟಿ ವಹಿವಾಟು ನಡೆಯುತ್ತಿದೆ. ಇಂಥ ಸಂದರ್ಭದಲ್ಲಿ ಈ ಕ್ಷೇತ್ರವನ್ನು ರಿಯಾಲಯ್ಸ್ ಆಯ್ದುಕೊಂಡಿರುವುದು ಭಾರತದ ಆರ್ಥಿಕ ವಲಯದ ಮಹತ್ವದ ಮೈಲಿಗಲ್ಲು ಎಂದೇ ಮಾರುಕಟ್ಟೆ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ರಿಲಾಯನ್ಸ್ ಕಂಪನಿಯು ಜಿಯೊ ಫೈನಾನ್ಶಿಯಲ್ ಸರ್ವೀಸ್ ಮೂಲಕ ವಿಮಾ ಮತ್ತು ಸಾಲ ನೀಡುವ ಕ್ಷೇತ್ರವನ್ನು ಪ್ರವೇಶಿಸಿದೆ. ಇದೀಗ ಕ್ರೆಡಿಟ್ ಕಾರ್ಡ್‌ ಕ್ಷೇತ್ರದ ಪ್ರವೇಶ ಮೂಲಕ ಪೂರ್ಣ ಪ್ರಮಾಣದಲ್ಲಿ ಆರ್ಥಿಕ ಕ್ಷೇತ್ರವನ್ನು ಪ್ರವೇಶಿಸಿದಂತಾಗಲಿದೆ ಎಂದು ಹಲವರು ಮೈಕ್ರೊ ಬ್ಲಾಗಿಂಗ್‌ ವೇದಿಕೆ ‘ಎಕ್ಸ್‌‘ನಲ್ಲಿ ಹೇಳಿದ್ದಾರೆ. ಕೆಲವರು ಕ್ರೆಡಿಟ್‌ ಕಾರ್ಡ್‌ನ ಮಾದರಿಯನ್ನೂ ಇದೇ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.