ADVERTISEMENT

ಟೋಲ್‌ ಸಂಗ್ರಹ ವ್ಯವಸ್ಥೆ | ವಾರ್ಷಿಕ ಟೋಲ್‌ ಪಾಸ್‌ ವಿತರಣೆಗೆ ಸಿದ್ಧತೆ: ಗಡ್ಕರಿ

ಪಿಟಿಐ
Published 2 ಏಪ್ರಿಲ್ 2025, 15:36 IST
Last Updated 2 ಏಪ್ರಿಲ್ 2025, 15:36 IST
<div class="paragraphs"><p>ನಿತಿನ್‌ ಗಡ್ಕರಿ –ಪಿಟಿಐ ಚಿತ್ರ</p></div>

ನಿತಿನ್‌ ಗಡ್ಕರಿ –ಪಿಟಿಐ ಚಿತ್ರ

   

ನವದೆಹಲಿ: ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್‌ ಸಂಗ್ರಹ ವ್ಯವಸ್ಥೆಯ ಸರಳೀಕರಣಕ್ಕೆ ಮುಂದಾಗಿದೆ. ಇದರ ಭಾಗವಾಗಿ ಖಾಸಗಿ ವಾಹನಗಳಿಗೆ ವಾರ್ಷಿಕ ಟೋಲ್‌ ಪಾಸ್‌ ವಿತರಣೆಗೆ ಸಿದ್ಧತೆ ನಡೆದಿದೆ ಎಂದು ಕೇಂದ್ರ ಸರ್ಕಾರವು, ಬುಧವಾರ ಸಂಸತ್‌ಗೆ ತಿಳಿಸಿದೆ.

ಖಾಸಗಿ ವಾಹನ ಮಾಲೀಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. ಹಾಲಿ ಇರುವ ಎಲೆಕ್ಟ್ರಾನಿಕ್‌ ಟೋಲ್ ಸಂಗ್ರಹ (ಇಟಿಸಿ) ವ್ಯವಸ್ಥೆ ಬಳಸಿಕೊಂಡೇ ಈ ಟೋಲ್‌ ಪಾಸ್‌ ವಿತರಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ಅವರು, ರಾಜ್ಯಸಭೆಗೆ ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

ಪಾಸ್‌ ವಿತರಣೆ ಬಗ್ಗೆ ಸರ್ಕಾರ ಸಿದ್ಧತೆಯಲ್ಲಿ ತೊಡಗಿದೆ. ಇದರಿಂದ ವಾಹನ ಮಾಲೀಕರಿಗೆ ಆಗುವ ಆರ್ಥಿಕ ಪರಿಣಾಮದ ಬಗ್ಗೆಯೂ ಚರ್ಚಿಸಲಾಗುತ್ತದೆ. ಇದರ ಸಾಧಕ– ಬಾಧಕದ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿದ ಬಳಿಕ ಪಾಸ್‌ ವಿತರಣಾ ವ್ಯವಸ್ಥೆಯು ಜಾರಿಗೆ ಬರಲಿದೆ ಎಂದು ವಿವರಿಸಿದ್ದಾರೆ.

ಹೆದ್ದಾರಿಗಳಲ್ಲಿ ಜಿಎನ್‌ಎಸ್ಎಸ್‌ (ಗ್ಲೋಬಲ್‌ ನ್ಯಾವಿಗೇಷನ್‌ ಸ್ಯಾಟಲೈಟ್‌ ಸಿಸ್ಟಂ) ಆಧರಿತ ಎಲೆಕ್ಟ್ರಾನಿಕ್‌ ಟೋಲ್ ಸಂಗ್ರಹಕ್ಕೆ (ಇಟಿಸಿ) ಚಾಲನೆ ನೀಡಲು ನಿರ್ಧರಿಸಲಾಗಿದೆ. ದೇಶದ ಆಯ್ದ ಹೆದ್ದಾರಿಗಳಲ್ಲಿ ಈ ವ್ಯವಸ್ಥೆ ಜಾರಿಗೆ ಕ್ರಮವಹಿಸಲಾಗುವುದು. ಹಾಲಿ ಇರುವ ಟೋಲ್‌ ಪ್ಲಾಜಾದ ಸೌಲಭ್ಯ ಬಳಸಿಕೊಂಡೇ ಈ ವ್ಯವಸ್ಥೆಯ ಅನುಷ್ಠಾನಕ್ಕೆ ತೀರ್ಮಾನಿಸಲಾಗಿದೆ ಎಂದು ವಿವರಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಸೇರಿದೆ. ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಡಿ ಹೆದ್ದಾರಿಗಳ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಹೇಳಿದ್ದಾರೆ.

ಹೆದ್ದಾರಿಗಳ ಅಭಿವೃದ್ಧಿ ಸಂಬಂಧ 2014–15ರಲ್ಲಿ ಖಾಸಗಿ ಸಹಭಾಗಿತ್ವದಡಿ ₹19,232 ಕೋಟಿ ಹೂಡಿಕೆ ಮಾಡಲಾಗಿತ್ತು. 2023–24ರಲ್ಲಿ ₹34,805 ಕೋಟಿ ಹೂಡಿಕೆಯಾಗಿದೆ ಎಂದು ವಿವರಿಸಿದ್ದಾರೆ.

ಉತ್ತರ ಪ್ರದೇಶ ಅಗ್ರಸ್ಥಾನ

2024-25ನೇ ಆರ್ಥಿಕ ವರ್ಷದ ಏಪ್ರಿಲ್‌ನಿಂದ ಫೆಬ್ರುವರಿ ಅಂತ್ಯದವರೆಗೆ ರಾಷ್ಟ್ರೀಯ ಹೆದ್ದಾರಿ ಶುಲ್ಕದ ರೂಪದಲ್ಲಿ ಉತ್ತರ ಪ್ರದೇಶವು ₹7060 ಕೋಟಿ ಆದಾಯ ಸಂಗ್ರಹಿಸಿದ್ದು ರಾಜ್ಯಗಳ ಪೈಕಿ ಅಗ್ರಸ್ಥಾನದಲ್ಲಿದೆ. ಇದೇ ಅವಧಿಯಲ್ಲಿ ಕರ್ನಾಟಕವು ₹4002 ಕೋಟಿ ಸಂಗ್ರಹಿಸಿದೆ. 2023–24ನೇ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ವಾರ್ಷಿಕ ಆದಾಯ ಸಂಗ್ರಹವು ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ.  ರಾಜಸ್ಥಾನ ₹5967 ಕೋಟಿ ಹಾಗೂ ಮಹಾರಾಷ್ಟ್ರವು ₹5115 ಕೋಟಿ ಆದಾಯ ಸಂಗ್ರಹಿಸಿದೆ ಎಂದು ಗಡ್ಕರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.