ADVERTISEMENT

30 ದಿನಗಳಲ್ಲಿ ದಂಡ ಪಾವತಿಸಲು ಗೂಗಲ್‌ಗೆ ಎನ್‌ಸಿಎಲ್‌ಎಟಿ ಸೂಚನೆ

ಸಿಸಿಐ ಆದೇಶ ಭಾಗಶಃ ಊರ್ಜಿತ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 4:31 IST
Last Updated 30 ಮಾರ್ಚ್ 2023, 4:31 IST
   

ನವದೆಹಲಿ: ಆ್ಯಂಡ್ರಾಯ್ಡ್‌ ಮೊಬೈಲ್‌ ಸಾಧನಗಳ ಪ್ರಕರಣದಲ್ಲಿ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ನೀಡಿದ್ದ ಆದೇಶ ವನ್ನು ಭಾಗಶಃ ಎತ್ತಿಹಿಡಿದಿರುವ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯು (ಎನ್‌ಸಿಎಲ್‌ಎಟಿ), ₹ 1,338 ಕೋಟಿ ದಂಡವನ್ನು 30 ದಿನಗಳಲ್ಲಿ ಪಾವತಿಸು ವಂತೆ ಗೂಗಲ್‌ ಕಂಪನಿಗೆ ಸೂಚಿಸಿದೆ.

ಆದರೆ, ಗೂಗಲ್‌ ಕಂಪನಿಯು ಆ್ಯಂಡ್ರಾಯ್ಡ್‌ ಕಾರ್ಯಾಚರಣೆ ವ್ಯವಸ್ಥೆಯ ಸ್ಮಾರ್ಟ್‌ಫೋನ್‌ಗಳಲ್ಲಿ ತಾನು ಮೊದಲೇ ಇನ್‌ಸ್ಟಾಲ್‌ ಮಾಡಿರುವ ಆ್ಯಪ್‌ಗಳನ್ನು ತೆಗೆದುಹಾಕುವ ಅವಕಾಶವನ್ನು ಗ್ರಾಹಕರಿಗೆ ಕೊಡಬೇಕು ಎಂದು ಸಿಸಿಐ ನೀಡಿದ್ದ ಸೂಚನೆಯನ್ನು ಎನ್‌ಸಿಎಲ್‌ಎಟಿ ರದ್ದುಮಾಡಿದೆ.

ಎನ್‌ಸಿಎಲ್‌ಎಟಿ ನೀಡಿರುವ ಆದೇಶವನ್ನು ಪರಿಶೀಲಿಸುತ್ತಿರುವುದಾಗಿ ಗೂಗಲ್ ಹೇಳಿದೆ. ಗೂಗಲ್‌ ಕಂಪನಿಯು ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ವಿಚಾರದಲ್ಲಿ ಸ್ಪರ್ಧಾತ್ಮಕತೆಯ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂದು ಸಿಸಿಐ ಹೇಳಿತ್ತು. ಈ ಆದೇಶವನ್ನು ಎನ್‌ಸಿಎಲ್‌ಎಟಿಯಲ್ಲಿ ಪ್ರಶ್ನಿಸಲಾಗಿತ್ತು.

ADVERTISEMENT

ತಾನು ಮೊದಲೇ ಇನ್‌ಸ್ಟಾಲ್ ಮಾಡಿಕೊಡುವ ಗೂಗಲ್‌ ಮ್ಯಾಪ್ಸ್, ಯೂಟ್ಯೂಬ್‌, ಜಿಮೇಲ್‌ನಂತಹ ಆ್ಯಪ್‌ಗಳನ್ನು ತೆಗೆದುಹಾಕಲು ಗೂಗಲ್ ಕಂಪನಿಯು ಗ್ರಾಹಕರಿಗೆ ಅವಕಾಶ ಕೊಡಬೇಕು ಎಂದು ಸಿಸಿಐ ನೀಡಿದ್ದ ನಿರ್ದೇಶನವನ್ನು ಎನ್‌ಸಿಎಲ್‌ಎಟಿ ರದ್ದುಮಾಡಿದೆ. ಅಲ್ಲದೆ, ಗೂಗಲ್‌ ಕಂಪನಿಯು ತನ್ನ ಪ್ಲೇಸ್ಟೋರ್‌ನಲ್ಲಿ ಇತರ ಕಂಪನಿಗಳ ಆ್ಯಪ್‌ ಸ್ಟೋರ್‌ಗೆ ಅವಕಾಶ ಕೊಡಬೇಕಾಗಿಲ್ಲ ಎಂದು ಕೂಡ ಎನ್‌ಸಿಎಲ್‌ಎಟಿ ಹೇಳಿದೆ.

ಯಾವುದೇ ಆ್ಯಪ್‌ ಸ್ಟೋರ್‌ ಬಳಸದೆ, ಬೇರೆಡೆಗಳಿಂದ ಆ್ಯಪ್‌ ಡೌನ್‌ಲೋಡ್‌ ಮಾಡುವುದರ ಮೇಲೆ ನಿರ್ಬಂಧ ವಿಧಿಸಲು ಗೂಗಲ್‌ಗೆ ಅವಕಾಶ ಇರುತ್ತದೆ.

ಈ ನಿರ್ದೇಶನಗಳು ಸಿಂಧು

ಸಿಸಿಐ ನೀಡಿದ್ದ ಹತ್ತು ನಿರ್ದೇಶನಗಳ ಪೈಕಿ ಆರನ್ನು ಎನ್‌ಸಿಎಲ್‌ಎಟಿ ಎತ್ತಿಹಿಡಿದಿದೆ. ಎನ್‌ಸಿಎಲ್‌ಎಟಿ ಎತ್ತಿಹಿಡಿದಿರುವ ಪ್ರಮುಖ ನಿರ್ದೇಶನಗಳು ಇಲ್ಲಿವೆ:

l ಮೊಬೈಲ್‌ ಸಾಧನವನ್ನು ಆರಂಭದಲ್ಲಿ ಬಳಕೆಗೆ ಸಿದ್ಧಮಾಡಿಕೊಳ್ಳುವಾಗ (ಸೆಟಪ್‌) ಗ್ರಾಹಕರಿಗೆ ತಮ್ಮ ಸರ್ಚ್‌ ಎಂಜಿನ್ ಯಾವುದಾಗಿರಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ಇರಬೇಕು

l ಸ್ಮಾರ್ಟ್‌ಫೋನ್‌ ತಯಾರಕರಿಗೆ ಇಂಥದ್ದೇ ಆ್ಯಪ್‌ಗಳನ್ನು ಮೊದಲೇ ಇನ್‌ಸ್ಟಾಲ್‌ ಮಾಡುವಂತೆ ತಾಕೀತು ಮಾಡುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.