
ನೆದರ್ಲೆಂಡ್ಸ್ ಪ್ರಧಾನಿ ಡಿಕ್ ಸ್ಕಾಫ್ ಅವರು ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತದ ಜೊತೆ ನಿಕಟವಾದ ಒಡನಾಟ ಹೊಂದಲು ನೆದರ್ಲೆಂಡ್ಸ್ ಬಯಸುತ್ತದೆ ಎಂದು ಅಲ್ಲಿನ ಪ್ರಧಾನಿ ಡಿಕ್ ಸ್ಕಾಫ್ ಹೇಳಿದರು.
‘ಡಚ್ ಉದ್ಯಮಗಳು ಹಾಗೂ ಭಾರತದ ಉದ್ಯಮಗಳು ಈ ಕ್ಷೇತ್ರದಲ್ಲಿ ಒಟ್ಟಾಗಿ ಕೆಲಸ ಮಾಡಬಹುದು. ನಮ್ಮ ದೊಡ್ಡ ಕಂಪನಿಗಳು ಇಲ್ಲಿವೆ, ಈ ದೇಶದಲ್ಲಿ ಪ್ರತಿಭೆ ಇದೆ. ನಾವಿಬ್ಬರೂ ಪರಸ್ಪರ ಬಹಳಷ್ಟು ಕಲಿತುಕೊಳ್ಳಬಹುದು’ ಎಂದು ಅವರು ಬೆಂಗಳೂರಿನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸ್ಕಾಫ್ ಅವರು ನವದೆಹಲಿಯಲ್ಲಿ ನಡೆಯುತ್ತಿರುವ ‘ಎ.ಐ. ಇಂಪ್ಯಾಕ್ಟ್ ಶೃಂಗ’ದಲ್ಲಿ ಭಾಗವಹಿಸಿದ್ದರು. ನಂತರ ಅವರು ಬೆಂಗಳೂರಿನಲ್ಲಿ ಎ.ಐ ತಂತ್ರಜ್ಞಾನವನ್ನು ಬಳಸಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಕೇಂದ್ರಕ್ಕೆ ಭೇಟಿ ನೀಡಿದ್ದರು.
‘ಎಲ್ಲ ಕಡೆಗಳಿಂದ ಸಿಗುವ ದತ್ತಾಂಶವನ್ನು ಬಳಸಿ ಸಂಚಾರ ನಿಯಂತ್ರಣ ಕೇಂದ್ರದವರು ಮುಂದೆ ಏನಾಗುತ್ತದೆ ಎಂಬುದನ್ನೂ ಊಹಿಸುತ್ತಾರೆ’ ಎಂದು ಕೇಂದ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ‘ಸಿಸಿಟಿವಿ ಕ್ಯಾಮೆರಾಗಳ ಮೂಲಕ ಪಡೆದ ದತ್ತಾಂಶ ಬಳಸಿ ಅವರು ಬಹಳ ತ್ವರಿತವಾಗಿ ಸ್ಪಂದಿಸುತ್ತಾರೆ. ಉದಾಹರಣೆಗೆ, ರಸ್ತೆ ಅಪಘಾತ ಸಂಭವಿಸಿದಾಗ ಅದನ್ನು ಗುರುತಿಸಿ, ಸಂಚಾರ ಪೊಲೀಸರನ್ನು ಅಲ್ಲಿಗೆ ಕಳುಹಿಸಬಹುದು’ ಎಂದರು.
ಜಾಗತಿಕ ಮಟ್ಟದಲ್ಲಿ ಸುಂಕಗಳನ್ನು ಅಸ್ತ್ರದ ರೂಪದಲ್ಲಿ ಬಳಸಿಕೊಂಡು ವ್ಯಾಪಾರ ಸಮರ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ‘ಸುಂಕಗಳನ್ನು ನೆದರ್ಲೆಂಡ್ಸ್ ವಿರೋಧಿಸುತ್ತದೆ... ಮುಕ್ತ ವ್ಯಾಪಾರದ ಬಗ್ಗೆ ನಾವು ಒಲವು ಹೊಂದಿದ್ದೇವೆ’ ಎಂದು ಉತ್ತರಿಸಿದರು.
ಬೆಂಗಳೂರಿನಲ್ಲಿ ಇಷ್ಟವಾಗಿದ್ದು ಏನು?
‘ಬೆಂಗಳೂರಿನ ಹಸಿರು ನನಗೆ ಬಹಳ ಇಷ್ಟವಾಯಿತು... ನಾನು ಇಂದು (ಶುಕ್ರವಾರ) ಬೆಳಿಗ್ಗೆ ಜಾಗಿಂಗ್ ಮಾಡಿದೆ. ಇಲ್ಲಿನ ಗಾಳಿಯ ಗುಣಮಟ್ಟ ಚೆನ್ನಾಗಿತ್ತು’ ಎಂದು ಪ‍್ರಶ್ನೆಯೊಂದಕ್ಕೆ ಉತ್ತರವಾಗಿ ಸ್ಕಾಫ್ ಹೇಳಿದರು.
‘ಗಾಳಿಯ ಗುಣಮಟ್ಟವು ದೆಹಲಿಗಿಂತ ಇಲ್ಲಿ ಖಂಡಿತವಾಗಿ ಚೆನ್ನಾಗಿತ್ತು. ಬೆಂಗಳೂರಿನ ಗಾಳಿಯ ಗುಣಮಟ್ಟ ಹಾಗೂ ನೆದರ್ಲೆಂಡ್ಸ್‌ನ ಹೇಗ್‌ನಲ್ಲಿನ ಗಾಳಿಯ ಗುಣಮಟ್ಟವು ಬಹುತೇಕ ಒಂದೇ ಆಗಿದೆ’ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.