ಹೈದರಾಬಾದ್: ತೆಲಂಗಾಣಕ್ಕೆ ಕಿಂಗ್‌ಫಿಷರ್ ಹಾಗೂ ಹೈನೆಕೆನ್ ಬಿಯರ್ ಪೂರೈಕೆ ಸ್ಥಗಿತಗೊಳಿಸಲು ಯುನೈಟೆಡ್ ಬ್ರೇವರಿಸ್ ಕಂಪನಿ (ಯುಬಿಎಲ್) ನಿರ್ಧರಿಸಿದೆ.
ಕಳೆದ ಎರಡು ವರ್ಷದಿಂದಲೂ ರಾಜ್ಯದಲ್ಲಿ ಬಿಯರ್‌ನ ಮೂಲ ದರ ಏರಿಕೆ ಮಾಡುವಂತೆ ಸರ್ಕಾರಕ್ಕೆ ಕೋರಲಾಗುತ್ತಿದೆ. ಆದರೆ, ಯಾವುದೇ ಕ್ರಮಕೈಗೊಂಡಿಲ್ಲ. ಇದರಿಂದ ತೀವ್ರ ನಷ್ಟ ಅನುಭವಿಸುವಂತಾಗಿದೆ. ಪ್ರತಿ ಬಾಟಲಿಯನ್ನು ನಷ್ಟದಲ್ಲಿಯೇ ಮಾರಾಟ ಮಾಡುವಂತಾಗಿದೆ ಎಂದು ಕಂಪನಿ ತಿಳಿಸಿದೆ.
ಅಲ್ಲದೆ, ಹಳೆಯ ಬಾಕಿ ಮೊತ್ತ ಕೂಡ ಪಾವತಿಸಿಲ್ಲ. ಹಾಗಾಗಿ, ತೆಲಂಗಾಣ ಪಾನೀಯ ನಿಗಮಕ್ಕೆ (ಟಿಜಿಬಿಸಿಎಲ್) ಬಿಯರ್ ಪೂರೈಕೆ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದೆ.
ಬ್ರೇವರಿಸ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಕೂಡ ಮದ್ಯ ತಯಾರಿಕಾ ವಲಯವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದೆ. ಹಣದುಬ್ಬರದ ಏರಿಕೆಗೆ ಅನುಗುಣವಾಗಿ ಬೆಲೆ ಏರಿಕೆ ಮಾಡುವಂತೆ ಮನದಟ್ಟು ಮಾಡಿಕೊಟ್ಟಿದೆ. ಆದರೆ, ಇಲ್ಲಿಯವರೆಗೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದೆ.
ಕಂಪನಿಯು ಮದ್ಯ ಪೂರೈಕೆ ಮತ್ತು ಮಾರಾಟದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ ₹24,500 ಕೋಟಿ ಆದಾಯ ತಂದುಕೊಡುತ್ತಿದೆ. ಆರ್ಥಿಕ ಒತ್ತಡ ಪರಿಸ್ಥಿತಿಯ ನಡುವೆಯೂ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಮದ್ಯ ಪೂರೈಸಲಾಗಿದೆ ಎಂದು ಹೇಳಿದೆ.
ಸರ್ಕಾರವು ಕೂಡಲೇ ಮದ್ಯದ ಬೆಲೆ ಏರಿಕೆಗೆ ಕ್ರಮಕೈಗೊಳ್ಳಬೇಕು ಎಂದು ಮದ್ಯ ತಯಾರಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.