
ಸಾಂಕೇತಿಕ ಚಿತ್ರ
ನವದೆಹಲಿ: ‘ಉತ್ಪನ್ನಗಳನ್ನು 10 ನಿಮಿಷಗಳಲ್ಲಿ ಮನೆಬಾಗಿಲಿಗೆ ತಲುಪಿಸಲಾಗುತ್ತದೆ’ ಎಂಬ ಘೋಷಣೆಯನ್ನು ಕ್ವಿಕ್–ಕಾಮರ್ಸ್ ವಲಯದ ಪ್ರಮುಖ ಕಂಪನಿಯಾದ ಬ್ಲಿಂಕ್‌ಇಟ್ ಕೈಬಿಟ್ಟಿದೆ. ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವೀಯ ಅವರು ಕಂಪನಿಯ ಮನವೊಲಿಸಿದ ನಂತರದಲ್ಲಿ ಅದು ಈ ತೀರ್ಮಾನ ತೆಗೆದುಕೊಂಡಿದೆ.
ಕ್ವಿಕ್ ಕಾಮರ್ಸ್ ವೇದಿಕೆಗಳಿಗಾಗಿ ಕೆಲಸ ಮಾಡುವ, ಗ್ರಾಹಕರ ಮನೆ ಬಾಗಿಲಿಗೆ ವಿವಿಧ ಉತ್ಪನ್ನಗಳನ್ನು ತ್ವರಿತವಾಗಿ ತಲುಪಿಸುವ ಗಿಗ್ ಕಾರ್ಮಿಕರ ಸುರಕ್ಷತೆಯ ಬಗ್ಗೆ ಕಳವಳಗಳು ವ್ಯಕ್ತವಾಗಿರುವ ಸಂದರ್ಭದಲ್ಲಿ ಈ ನಿರ್ಧಾರ ಪ್ರಕಟ ಆಗಿದೆ.
ಸಚಿವ ಮಾಂಡವೀಯ ಅವರು ಮನವೊಲಿಸಿದ ನಂತರದಲ್ಲಿ ‘10 ನಿಮಿಷಗಳಲ್ಲಿ ಉತ್ಪನ್ನಗಳನ್ನು ತಲುಪಿಸುವ’ ಭರವಸೆಯನ್ನು ಕೈಬಿಡಲು ಕಂಪನಿ ಒಪ್ಪಿಗೆ ನೀಡಿತು ಎಂದು ಮೂಲಗಳು ಮಾಹಿತಿ ನೀಡಿವೆ. ಮಾಂಡವೀಯ ಅವರು ಬ್ಲಿಂಕ್‌ಇಟ್, ಜೆಪ್ಟೊ, ಜೊಮಾಟೊ, ಸ್ವಿಗ್ಗಿ ಪ್ರತಿನಿಧಿಗಳ ಜೊತೆ ಕಳೆದ ವಾರ ಸಭೆ ನಡೆಸಿ, ಉತ್ಪನ್ನಗಳನ್ನು ತಲುಪಿಸಲು ಸಮಯಮಿತಿ ನಿಗದಿ ಮಾಡುವುದರ ಕುರಿತ ಕಳವಳಗಳ ಬಗ್ಗೆ ಚರ್ಚಿಸಿದ್ದರು.
ಬ್ಲಿಂಕ್‌ಇಟ್ ಕಂಪನಿಯ ಒಡೆತನವನ್ನು ಎಟರ್ನಲ್ ಕಂಪನಿ ಹೊಂದಿದೆ. ಬ್ಲಿಂಕ್‌ಇಟ್ ತನ್ನ ಘೋಷವಾಕ್ಯವನ್ನು ‘10 ಸಾವಿರಕ್ಕೂ ಹೆಚ್ಚು ಉತ್ಪನ್ನಗಳು ಹತ್ತು ನಿಮಿಷಗಳಲ್ಲಿ’ ಎಂಬುದರ ಬದಲಾಗಿ ‘30 ಸಾವಿರಕ್ಕೂ ಹೆಚ್ಚು ಉತ್ಪನ್ನಗಳು ನಿಮ್ಮ ಮನೆ ಬಾಗಿಲಿಗೆ’ ಎಂದು ಬದಲಾಯಿಸಿದೆ ಎಂದು ಮೂಲಗಳು ವಿವರಿಸಿವೆ.
ಕ್ವಿಕ್ ಕಾಮರ್ಸ್ (ಗ್ರಾಹಕರಿಗೆ ಬೇಕಾಗುವ ಬಗೆ ಬಗೆಯ ಉತ್ಪನ್ನಗಳನ್ನು ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸುವ ಸೇವೆ) ವಲಯದ ಇತರ ಪ್ರಮುಖ ಕಂಪನಿಗಳಾದ ಇನ್‌ಸ್ಟಾಮಾರ್ಟ್, ಜೆಪ್ಟೊ ಕೂಡ ಇದೇ ಹೆಜ್ಜೆ ಇರಿಸಬಹುದು ಎಂದು ಮೂಲಗಳು ಹೇಳಿವೆ.
ಉತ್ಪನ್ನಗಳನ್ನು 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂಬ ಭರವಸೆಯನ್ನು ವಿರೋಧಿಸಿ ಗಿಗ್ ಕಾರ್ಮಿಕರು ಹೊಸ ವರ್ಷದ ಸಂದರ್ಭದಲ್ಲಿ ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದರು. ಈ ಮುಷ್ಕರವು ಅವರ ಆರೋಗ್ಯ, ಸುರಕ್ಷತೆ ಹಾಗೂ ಆದಾಯದ ಬಗ್ಗೆ ಚರ್ಚೆ ಹುಟ್ಟುಹಾಕಿತ್ತು.
ಎಟರ್ನಲ್ ಕಂಪನಿಯ ಸಿಇಒ ದೀಪಿಂದರ್ ಗೋಯಲ್ ಅವರು, ‘10 ನಿಮಿಷಗಳಲ್ಲಿ ಉತ್ಪನ್ನಗಳನ್ನು ತಲುಪಿಸುವ ಭರವಸೆಯು ಗಿಗ್ ಕಾರ್ಮಿಕರ ಮೇಲೆ ಒತ್ತಡ ಹೇರುವುದಿಲ್ಲ, ಅವರು ಅಸುರಕ್ಷಿತವಾಗಿ ವಾಹನ ಚಾಲನೆ ಮಾಡುವುದಕ್ಕೆ ಕಾರಣವಾಗುವುದಿಲ್ಲ. ಏಕೆಂದರೆ ಅವರಿಗೆ ಆ್ಯಪ್‌ನಲ್ಲಿ 10 ನಿಮಿಷಗಳ ಗಡುವನ್ನು ತೋರಿಸುವುದಿಲ್ಲ’ ಎಂದು ಈಚೆಗೆ ಎಕ್ಸ್ ಮೂಲಕ ಹೇಳಿದ್ದರು.
‘ನಮ್ಮ ಮಳಿಗೆಗಳು ಗ್ರಾಹಕರ ಮನೆಗೆ ಹತ್ತಿರದಲ್ಲಿ ಇರುವ ಕಾರಣದಿಂದಾಗಿ 10 ನಿಮಿಷಗಳಲ್ಲಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಆಗುತ್ತದೆಯೇ ವಿನಾ ರಸ್ತೆಯಲ್ಲಿ ಹೆಚ್ಚು ವೇಗವಾಗಿ ವಾಹನ ಚಾಲನೆ ಮಾಡುವುದರಿಂದ ಅಲ್ಲ’ ಎಂದು ಅವರು ವಿವರಿಸಿದ್ದರು.
ಕಾರ್ಮಿಕರ ಸ್ವಾಗತ: ತಮ್ಮ ಸಮಸ್ಯೆ ಪರಿಹರಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿದ್ದರ ಬಗ್ಗೆ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಸೇವೆಗಳ ಕಾರ್ಮಿಕರ ಒಕ್ಕೂಟವು (ಜಿಐಪಿಎಸ್‌ಡಬ್ಲ್ಯುಯು) ಮೆಚ್ಚುಗೆ ವ್ಯಕ್ತಪಡಿಸಿದೆ. ಕಂಪನಿಯ ತೀರ್ಮಾನವನ್ನು ಅದು ಸ್ವಾಗತಿಸಿದೆ.
ಗಿಗ್ ಕಾರ್ಮಿಕರ ಬವಣೆಯು ಕಂಪನಿಗಳ ಆಡಳಿತ ಮಂಡಳಿಗೆ ಗೊತ್ತಾಗಲಿಲ್ಲ. ಆದರೆ ಅದು ಕೇಂದ್ರ ಸರ್ಕಾರಕ್ಕೆ ಅರಿವಾಯಿತು. ಸರ್ಕಾರ ಈಗ ಕ್ರಮ ತೆಗೆದುಕೊಂಡಿದೆ.ರಾಘವ ಛಡ್ಡಾ, ಎಎಪಿ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.