
ಜಿಎಸ್‌ಟಿ
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ನವೆಂಬರ್ ತಿಂಗಳಿನಲ್ಲಿ ₹1.70 ಲಕ್ಷ ಕೋಟಿ ವರಮಾನ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಇದು ಕಳೆದ ಒಂದು ವರ್ಷದಲ್ಲಿ ದಾಖಲಾದ ಅತ್ಯಂತ ಕಡಿಮೆ ಮಾಸಿಕ ಸಂಗ್ರಹವಾಗಿದೆ ಎಂದು ತಿಳಿಸಿದೆ.
2024ರ ನವೆಂಬರ್‌ನಲ್ಲಿ ₹1.69 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿತ್ತು. ಇದಕ್ಕೆ ಹೋಲಿಸಿದರೆ ಪ್ರಸಕ್ತ ನವೆಂಬರ್ ವರಮಾನ ಸಂಗ್ರಹದಲ್ಲಿ ಶೇ 0.7ರಷ್ಟು ಮಾತ್ರ ಹೆಚ್ಚಳವಾಗಿದೆ ಎಂದು ತಿಳಿಸಿದೆ. 2025ರ ಅಕ್ಟೋಬರ್‌ನಲ್ಲಿ ₹1.96 ಲಕ್ಷ ಕೋಟಿ ಸಂಗ್ರಹವಾಗಿತ್ತು.
ಜಿಎಸ್‌ಟಿ ಮಂಡಳಿಯು ಸೆಪ್ಟೆಂಬರ್ 22ರಂದು ಜಿಎಸ್‌ಟಿ ದರ ಪರಿಷ್ಕರಣೆ ಮಾಡಿತು. ಇದರಿಂದ ಸರಕುಗಳ ಬೆಲೆ ಕಡಿಮೆ ಆಯಿತು. ಇದೇ ವರಮಾನ ಸಂಗ್ರಹದ ಇಳಿಕೆಗೆ ಕಾರಣ ಎಂದು ತಿಳಿಸಿದೆ. ಆದರೂ, ಜಿಎಸ್‌ಟಿ ಇಳಿಕೆಯ ನಡುವೆಯೂ ಕಳೆದ ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ವರಮಾನ ಸಂಗ್ರಹದಲ್ಲಿ ಸ್ವಲ್ಪ ಏರಿಕೆ ಕಂಡು ಬಂದಿದೆ ಎಂದು ತಿಳಿಸಿದೆ.
ಒಟ್ಟು ಜಿಎಸ್‌ಟಿ ಸಂಗ್ರಹದ ಪೈಕಿ, ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್‌ಟಿ ವರಮಾನವು ಶೇ 2.3ರಷ್ಟು ಇಳಿಕೆ ಕಂಡಿದ್ದು, ₹1.24 ಲಕ್ಷ ಕೋಟಿಯಾಗಿದೆ. ಆಮದು ಮಾಡಿಕೊಂಡ ಸರಕುಗಳಿಂದ ಬಂದ ವರಮಾನವು ₹45,976 ಕೋಟಿಯಾಗಿದ್ದು, ಶೇ 10.2ರಷ್ಟು ಏರಿಕೆಯಾಗಿದೆ.
ಜಿಎಸ್‌ಟಿ ಮರುಪಾವತಿಯಲ್ಲಿ ಶೇ 4ರಷ್ಟು ಕಡಿಮೆಯಾಗಿದ್ದು, ₹18,196 ಕೋಟಿಯಾಗಿದೆ. ನಿವ್ವಳ ಜಿಎಸ್‌ಟಿ ಸಂಗ್ರಹವು ₹1.52 ಲಕ್ಷ ಕೋಟಿಯಾಗಿದೆ ಎಂದು ತಿಳಿಸಿದೆ.
ಕೇಂದ್ರ ಜಿಎಸ್‌ಟಿ ಸಂಗ್ರಹವು ₹34,843 ಕೋಟಿಗಳಾಗಿದೆ. ರಾಜ್ಯ ಜಿಎಸ್‌ಟಿ ₹42,522 ಕೋಟಿ ಮತ್ತು ಸಮಗ್ರ ಜಿಎಸ್‌ಟಿ ₹46,934 ಕೋಟಿ ಆಗಿದೆ.
ಕೋವಿಡ್ ಅವಧಿಯಲ್ಲಿ ರಾಜ್ಯಗಳಿಗೆ ವರಮಾನ ನಷ್ಟವನ್ನು ಸರಿದೂಗಿಸಲು ತೆಗೆದುಕೊಂಡ ಸಾಲಗಳನ್ನು ಮರುಪಾವತಿಸುವವರೆಗೆ ಪರಿಹಾರ ಸೆಸ್ ಈಗ ತಾತ್ಕಾಲಿಕ ವ್ಯವಸ್ಥೆಯಾಗಿರುವುದರಿಂದ, ಒಟ್ಟು ಜಿಎಸ್‌ಟಿ ಸಂಗ್ರಹವನ್ನು ಲೆಕ್ಕಾಚಾರ ಮಾಡುವಾಗ ಸೆಸ್ ಅನ್ನು ಸೇರಿಸಲಾಗಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಹರಿಯಾಣ, ಅಸ್ಸಾಂ ಮತ್ತು ಕೇರಳ ಜಿಎಸ್‌ಟಿ ವರಮಾನದಲ್ಲಿ ಕ್ರಮವಾಗಿ ಶೇ 17, ಶೇ 18 ಮತ್ತು ಶೇ 8ರಷ್ಟು ಬೆಳವಣಿಗೆ ಕಂಡಿದ್ದರೆ, ಮಧ್ಯಪ್ರದೇಶ ಮತ್ತು ಒಡಿಶಾ ಕ್ರಮವಾಗಿ ಶೇ 17 ಮತ್ತು ಶೇ 18ರಷ್ಟು ಕುಸಿತ ಕಂಡಿವೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.